
ಥಾಣೆ/ಪುಣೆ, ಅ.14-15: ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (ಎಫ್ಡಿಎ) ಥಾಣೆ ಹಾಗೂ ಪುಣೆ ಜಿಲ್ಲೆಗಳಲ್ಲಿ ನಡೆಸಿದ ದಾಳಿಯಲ್ಲಿ ₹48,09,924 ಮೌಲ್ಯದ ಅವಧಿ ಮೀರಿದ ಮತ್ತು ಹಾನಿಗೊಳಗಾದ ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದು, ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್, ರಿಲಯನ್ಸ್ ರಿಟೇಲ್, ಬ್ಲಿಂಕಿಟ್ ಮತ್ತು ಜೊಮ್ಯಾಟೊ ಹೈಪರ್ಪ್ಯೂರ್ಗೆ ಸಂಬಂಧಿಸಿದ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿಲೇವಾರಿ ಸಂಸ್ಥೆಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಅ.14 ಮತ್ತು 15ರಂದು ನಡೆದ ತಪಾಸಣೆಯಲ್ಲಿ ನಾಶಪಡಿಸಬೇಕಿದ್ದ ಉತ್ಪನ್ನಗಳನ್ನು ವಿಲೇವಾರಿ ಸಂಸ್ಥೆಗಳು, ಪರವಾನಗಿ ಇಲ್ಲದ ವಿಂಗಡಣಾ ಯಾರ್ಡ್ಗಳು ಮತ್ತು ದಲ್ಲಾಳಿಗಳ ಮೂಲಕ ಗ್ರಾಹಕರಿಗೆ ಮಾರಾಟಕ್ಕೆ ತಿರುಗಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಥಾಣೆಯ ಶಾಂತಿ ನಗರ ಠಾಣೆಯಲ್ಲಿ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ, 2006 ಹಾಗೂ ಭಾರತೀಯ ನ್ಯಾಯ ಸಂಹಿತೆ, 2023ರ ಸಂಬಂಧಿತ ವಿಧಿಗಳಡಿ ಪ್ರಕರಣ ದಾಖಲಾಗಿದೆ.
ಎಫ್ಐಆರ್ನಲ್ಲಿ 10 ಜನರ ಹೆಸರುಗಳಿವೆ ಎಂದು ತಿಳಿಸಲಾಗಿದ್ದು, ಪಟ್ಟಿ ಮಾಡಲಾದವರು ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ನ ಪೂರ್ಣಾವಧಿ ನಿರ್ದೇಶಕ ವಿ. ಸುಬ್ರಹ್ಮಣಿಯಂ, ಅಶೋಕ್ ಕುಮಾರ್ ಸಿಂಗ್, ರಿಲಯನ್ಸ್ ರಿಟೇಲ್ನ ನಾಮನಿರ್ದೇಶಿತ ವಿಜಯ್ ಭಿಕಾಜಿ ಖರ್ಮಳೆ, ಗೋದಾಮು ವ್ಯವಸ್ಥಾಪಕ ನಿಲೇಶ್ ರಾಮದಾಸರಾವ್ ದೇಶಮುಖ್, ಬ್ಲಿಂಕಿಟ್ ಕಾಮರ್ಸ್ನ ನಿರ್ದೇಶಕ ಅರ್ಬಿಂದರ್ ಸಿಂಗ್ ಧಿನ್ಸಾ ಮತ್ತು ದೀಪಕ್ ಸಿಂಗ್, ಜೊಮ್ಯಾಟೊ ಹೈಪರ್ಪ್ಯೂರ್ನ ಅಬಿದ್ ಶೇಖ್, ಬಿ.ಕೆ. ಡಿಸ್ಪೋಸ್ನ ಬಾಬರ್ ಮಿಯಾ ಅಹ್ಮದ್ ಸಿದ್ದಿಕಿ, ಪೂರೈಕೆದಾರ ಗುಲ್ಜಾರ್ ಅಬ್ದುಲ್ ಖಾನ್, ಭಿವಂಡಿಯ ಚವೀಂದ್ರ ಹಾಗೂ ಡಿಸ್ಕೌಂಟ್ ಸ್ಟೋರ್ನ ಅಬ್ದುಲ್ ಮೊಬಿನ್ ಖಾನ್.
ಭಿವಂಡಿಯ ವಿಲೇವಾರಿ ಯಾರ್ಡ್ನಿಂದ ₹24 ಲಕ್ಷಕ್ಕೂ ಹೆಚ್ಚು, ವಡಪೆಯ ರಿಲಯನ್ಸ್ ಗೋದಾಮಿನಿಂದ ₹4.92 ಲಕ್ಷ ಹಾಗೂ ಉಸಾಟಣೆಯ ಜೊಮ್ಯಾಟೊ ಹೈಪರ್ಪ್ಯೂರ್ ಘಟಕದಿಂದ ₹7.81 ಲಕ್ಷ ಮೌಲ್ಯದ ಸರಕು ವಶಪಡಿಸಿಕೊಳ್ಳಲಾಗಿದೆ. ನಾಶಪಡಿಸಬೇಕಿದ್ದ ಅವಧಿ ಮೀರಿದ, ಹಾನಿಗೊಂಡ ಮತ್ತು ಗ್ರಾಹಕರು ತಿರಸ್ಕರಿಸಿದ ಉತ್ಪನ್ನಗಳನ್ನು ಮಾರಾಟಕ್ಕೆ ತಿರುಗಿಸಲಾಗಿತ್ತು. ವಿಲೇವಾರಿ ಸಂಸ್ಥೆಗಳು ಪರಿಶೀಲನೆ ಇಲ್ಲದೆ ನಾಶಪಡಿಸಿದ ಪ್ರಮಾಣಪತ್ರ ಹಾಗೂ ದಾಖಲೆಗಳನ್ನು ನೀಡಿದ್ದವು. ದಾಖಲೆಗಳಲ್ಲಿ ಪ್ರಮಾಣ, ಕಳುಹಿಸಿದವರು ಮತ್ತು ಸ್ವೀಕರಿಸಿದವರ ವಿವರಗಳಲ್ಲಿ ವ್ಯತ್ಯಾಸ ಪತ್ತೆಯಾಗಿದೆ.
ಭಿವಂಡಿಯ ಪರವಾನಗಿ ಇಲ್ಲದ ಯಾರ್ಡ್ಗಳಲ್ಲಿ ಮಾರಾಟಯೋಗ್ಯ ಪ್ಯಾಕೆಟ್ಗಳನ್ನು ಬೇರ್ಪಡಿಸಿ ದಲ್ಲಾಳಿಗಳು ಮತ್ತು ಪೂರೈಕೆದಾರರಿಗೆ ಮಾರಲಾಗಿತ್ತು. ಭಿವಂಡಿಯ ಗುಲ್ಜಾರ್ ನಗರದಲ್ಲಿನ ಪರವಾನಗಿ ಹಾಗೂ ಖರೀದಿ ಬಿಲ್ಲುಗಳಿಲ್ಲದೆ ನಡೆಯುತ್ತಿದ್ದ ಅಂಗಡಿಯಲ್ಲಿ ಅವಧಿ ಮೀರಿದ ಮತ್ತು ಸೋರಿಕೆಯಾಗುತ್ತಿದ್ದ ಉತ್ಪನ್ನಗಳು ಮಾರಾಟಕ್ಕೆ ಇಡಲಾಗಿದ್ದವು.
ಎಫ್ಡಿಎ ಏಳು ತಂಡಗಳನ್ನು ರಚಿಸಿ ದಾಸ್ತಾನು ಪಟ್ಟಿ, ಜಪ್ತಿ, ಮಾದರಿ ಸಂಗ್ರಹ ಹಾಗೂ ಹೇಳಿಕೆ ದಾಖಲಿಸುವ ಕಾರ್ಯ ನಡೆಸಿತು. ಸರಕುಗಳ ಸಾಗಣೆ, ಮಾರಾಟ ಮತ್ತು ನಾಶಪಡಿಸುವಿಕೆಯನ್ನು ನಿರ್ಬಂಧಿಸಲಾಯಿತು. ಅ.15ರ ವಿಚಾರಣೆಯ ಬಳಿಕ ಐದು ಸಂಸ್ಥೆಗಳ ಪರವಾನಗಿಗಳನ್ನು ಅಮಾನತುಗೊಳಿಸಿ, ನಾಲ್ಕು ಪರವಾನಗಿ ಇಲ್ಲದ ಘಟಕಗಳ ಕಾರ್ಯಾಚರಣೆ ನಿಲ್ಲಿಸಲಾಯಿತು.






















