Home ಜಿಲ್ಲೆ ಕಲಬುರಗಿ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಕಲಬುರಗಿ ಜಿಲ್ಲೆಗೆ 6 ಟಿ.ಎಂ.ಸಿ ನೀರು ಕಾಯ್ದಿರಿಸುವಂತೆ...

ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಕಲಬುರಗಿ ಜಿಲ್ಲೆಗೆ 6 ಟಿ.ಎಂ.ಸಿ ನೀರು ಕಾಯ್ದಿರಿಸುವಂತೆ ಪ್ರಸ್ತಾವನೆ ಸಲ್ಲಿಕೆ: ಇಕ್ರಂ ಶರೀಫ್

ಕಲಬುರಗಿ,ಅ.17-ಪ್ರಸ್ತುತ ಬರಗಾಲದ ಛಾಯೆ ಮತ್ತು ಮುಂಬರುವ ಬೇಸಿಗೆ ಅವಧಿಯಲ್ಲಿ ಕಲಬುರಗಿ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ 6.00 ಟಿ.ಎಂ.ಸಿ. ನೀರನ್ನು ನಾರಾಯಣಪುರ ಜಲಾಶಯದಿಂದ ಹರಿಸುವ ಸಂಬಂಧ ಕಲಬುರಗಿ ಜಿಲ್ಲೆಗೆ ಕಾಯ್ದಿರಿಸುವಂತೆ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಇಕ್ರಂ ಶರೀಫ್ ತಿಳಿಸಿದ್ದಾರೆ.
ಅಕ್ಟೋಬರ್ 15 ರಂದು ಬೆಂಗಳೂರಿನಲ್ಲಿ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ವಿಜಯಾನಂದ ಕಾಶಪ್ಪನವರ್, ಅಧ್ಯಕ್ಷತೆಯಲ್ಲಿ ನಡೆದ 2026-27ನೇ ಸಾಲಿನ ಮುಂಗಾರು ಹಂಗಾಮಿನ ಉಳಿದ ಅವಧಿ ಹಾಗೂ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ವಿಡಿಯೋ ಸಂವಾದದ ಮೂಲಕ ಭಾಗವಹಿಸಿ, ಜಿಲ್ಲೆಯ ಕುಡಿಯುವ ನೀರಿನ ಅಗತ್ಯತೆ ಕುರಿತು ಪ್ರಸ್ತಾವನೆ ಸಲ್ಲಿಸಲಾಯಿತು.
ಕಲಬುರಗಿ ಮಹಾನಗರ ಪಾಲಿಕೆ, ಅಫಜಲಪುರ ಪುರಸಭೆ, ಭೀಮಾ ಏತ ನೀರಾವರಿ ಯೋಜನೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಸಲ್ಲಿಸಿರುವ ಬೇಡಿಕೆಯನ್ವಯ, ಕಲಬುರಗಿ ನಗರಕ್ಕೆ 2.50 ಟಿ.ಎಂ.ಸಿ., ಭೀಮಾ ನದಿ ದಡದ ಗ್ರಾಮಗಳಿಗೆ 1.50 ಟಿ.ಎಂ.ಸಿ., ಅಫಜಲಪುರ ನಗರಕ್ಕೆ 1.00 ಟಿ.ಎಂ.ಸಿ., ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ 0.40 ಟಿ.ಎಂ.ಸಿ. ಹಾಗೂ ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕುಗಳ ಕೆರೆಗಳನ್ನು ಅವಲಂಬಿಸಿರುವ ಗ್ರಾಮಗಳು ಮತ್ತು ಪಟ್ಟಣಗಳ ಕುಡಿಯುವ ನೀರಿನ ಅಗತ್ಯತೆಗಾಗಿ ತಲಾ 0.30 ಟಿ.ಎಂ.ಸಿ.ಯಂತೆ ಒಟ್ಟು 6.00 ಟಿ.ಎಂ.ಸಿ. ನೀರಿನ ಅವಶ್ಯಕತೆ ಇದೆ ಎಂದು ಸಭೆಯ ಗಮನಕ್ಕೆ ತರಲಾಗಿದೆ ಎಂದರು.
ಇಂದಿನ ಪರಿಸ್ಥಿತಿಯಿಂದ ಮುಂದಿನ ಜೂನ್ ವರೆತೆ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಜನರು ಮತ್ತು ಜಾನುವಾರುಗಳ ಅಗತ್ಯತೆಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ಈ ನೀರಿನ ಪ್ರಮಾಣವನ್ನು ನಾರಾಯಣಪುರ ಜಲಾಶಯದಿಂದ ಕಾಯ್ದಿರಿಸುವ ಕುರಿತು ಸಮರ್ಪಕ ಪ್ರಸ್ತಾವನೆ ಮಂಡಿಸಲಾಗಿದೆ ಎಂದು ಡಿ.ಸಿ ತಿಳಿಸಿದರು.