
ಶಿಡ್ಲಘಟ್ಟ, ಅ.೩ – ರೈತರ ಸಮಸ್ಯೆಗಳನ್ನು ನೇರವಾಗಿ ಆಲಿಸಲು ಬದಲಾಗಿ ಮುಖ್ಯಮಂತ್ರಿ ಎಸಿ ಕೊಠಡಿಯಲ್ಲಿ ಕುಳಿತು ವಿಡಿಯೋ ಕಾನ್ಫರೆನ್ಸ್ ಮೂಲಕವೇ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ.ಅವರು ರೈತರಿಗಿಂತ ರಿಯಲ್ ಎಸ್ಟೇಟ್ಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ನಗರದ ಸೇವಾ ಸೌಧದಲ್ಲಿರುವ ಬಿಜೆಪಿ ಕಚೇರಿ ಆವರಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಾಮಾಜಿಕ ಜೀವನದ ೨೫ ವರ್ಷಗಳ ಸೇವೆಯನ್ನು ಸ್ಮರಿಸುವ ಅಂಗವಾಗಿ ಆಯೋಜಿಸಿದ್ದ ಸೇವಾ ಸಂಕಲ್ಪ ಅಭಿಯಾನದಲ್ಲಿ ಅವರು ಮಾತನಾಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಭಾರತಿಯ ಜನತಾ ಪಕ್ಷವು ಈಗ ಬಿತ್ತನೆಯಾಗಿ, ಸಂಘಟಿತವಾಗಿ ಬೆಳೆದು ಜಿಲ್ಲೆಯಾದ್ಯಂತ ಕೇಸರಿಮಯ ವಾತಾವರಣ ನಿರ್ಮಾಣವಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ೨೫ ವರ್ಷಗಳ ಸಾರ್ವಜನಿಕ ಸೇವೆಯ ಹಿನ್ನೆಲೆಯಲ್ಲಿ ಸೇವಾ ಸಂಕಲ್ಪ ಅಭಿಯಾನ ನಡೆಸಲಾಗುತ್ತಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರನ್ನು ಅವಗಣಿಸುತ್ತಿದೆ ಎಂಬ ಆರೋಪವನ್ನು ಮಾಡಿದರು.
೨೦೨೮ರಲ್ಲಿ ಬಿಜೆಪಿ ಅಧಿಕಾರ ಖಚಿತ ಎಂಬ ವಿಶ್ವಾಸವನ್ನು ಮಾಜಿ ಎಂಎಲ್ಎ ರಾಮಚಂದ್ರಗೌಡ ವ್ಯಕ್ತಪಡಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಸತತವಾಗಿ ಬಲಿಷ್ಠವಾಗುತ್ತಿದೆ. ಮುಂಬರುವ ೨೦೨೮ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಲಿಷ್ಠವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ೨೫ ವರ್ಷಗಳ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ದೇಶಾದ್ಯಂತ ಸೇವಾ ಸಂಕಲ್ಪ ಅಭಿಯಾನ ನಡೆಯುತ್ತಿದೆ ಎಂದರು.
ಬಡವರು, ರೈತರು, ಯುವಕರು ಹಾಗೂ ಮಹಿಳೆಯರಿಗೆ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳ ಲಾಭಗಳನ್ನು ತಲುಪಿಸುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇವೆ ಎಂಬುದಾಗಿ ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.























