Home ಜಿಲ್ಲೆ ಕಲಬುರಗಿ ವಿಶ್ವೇಶ್ವರಯ್ಯರ ಆದರ್ಶ ಪಾಲಿಸಿ : ಚಂದ್ರಕಾಂತ ಪಾಟೀಲ್

ವಿಶ್ವೇಶ್ವರಯ್ಯರ ಆದರ್ಶ ಪಾಲಿಸಿ : ಚಂದ್ರಕಾಂತ ಪಾಟೀಲ್

ಕಲಬುರಗಿ, ಸೆ. 17: ಸರ್. ಎಂ. ವಿಶ್ವೇಶ್ವರಯ್ಯ ಅವರು ತಮ್ಮ ಕ್ಷೇತ್ರದಲ್ಲಿ ಮಾಡಿದ ಸಾಧನೆ ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ. ಅವರಂತೆ ನಾವೂ ವಿದ್ಯುತ್ ಕ್ಷೇತ್ರದಲ್ಲಿ ಗುಣಮಟ್ಟದ ಕಾರ್ಯನಿರ್ವಹಣೆ ಮಾಡುವ ಮೂಲಕ ಕೈಗಾರಿಕಾ, ಗೃಹ ಬಳಕೆದಾರರು ಹಾಗೂ ರೈತ ಗ್ರಾಹಕರಿಗೆ ನಿಷ್ಠೆಯಿಂದ ಸೇವೆ ಸಲ್ಲಿಸೋಣ ಎಂದು ಜೆಸ್ಕಾಂ ನಿರ್ದೇಶಕರು (ತಾಂತ್ರಿಕ) ಚಂದ್ರಕಾಂತ ಪಾಟೀಲ್ ಹೇಳಿದರು.
ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ)ಯ ಕರ್ನಾಟಕ ಎಲೆಕ್ಟ್ರಿಸಿಟಿ ಬೋರ್ಡ್ ಇಂಜಿನಿಯರ್ಸ್ ಅಸೋಸಿಯೇಷನ್ ವತಿಯಿಂದ ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ ಇಂಜಿನಿಯರ್ಸ್ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚಂದ್ರಕಾಂತ ಪಾಟೀಲ್ ಅವರು, ಯಾವುದೇ ರಾಷ್ಟ್ರ ಅಥವಾ ರಾಜ್ಯದ ನಿರ್ಮಾಣ ಹಾಗೂ ಅಭಿವೃದ್ಧಿಯಲ್ಲಿ ಇಂಜಿನಿಯರ್‍ಗಳ ಪಾತ್ರ ಮಹತ್ವದ್ದಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸಾಧಿಸಿರುವ ಪ್ರಗತಿಯಲ್ಲೂ ಇಂಜಿನಿಯರ್‍ಗಳ ಕೊಡುಗೆ ಅಪಾರವಾಗಿದೆ. ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ ಒಂದೇ ರಾಕೆಟ್‍ನ ಮೂಲಕ 133 ಉಪಗ್ರಹಗಳನ್ನು ಉಡಾವಣೆ ಮಾಡಿದ ಸಾಧನೆಯಲ್ಲೂ ಭಾರತೀಯ ಇಂಜಿನಿಯರ್‍ಗಳ ಸಾಮಥ್ರ್ಯವನ್ನು ಕಾಣಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜೇಶ ಹಿಪ್ಪರಗಿ, ನಮ್ಮೆಲ್ಲರಿಗೂ ಸಮಾಜ ಸೇವೆ ಮಾಡುವ ಅವಕಾಶ ದೊರೆತಿದೆ. ಈ ಅವಕಾಶವನ್ನು ಪ್ರತಿಯೊಬ್ಬ ಇಂಜಿನಿಯರ್ ಕೂಡ ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಜನರಿಗೆ ಉತ್ತಮ ಸೇವೆ ಸಲ್ಲಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಭಿಯಂತರ ವೆಂಕಟೇಶ್ ಹಾಲ್ವಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿವೃತ್ತ ಅಭಿಯಂತರರಾದ ವಿ.ಆರ್. ಮಾಲಿಪಾಟೀಲ್, ಪಿ.ಎನ್. ಶಾಹ್, ಬಸವರಾಜ್ ಪಾಟೀಲ್, ಆರ್.ಡಿ. ಚಂದ್ರಶೇಖರ್ ಮುಖ್ಯ ಅತಿಥಿಗಳ ಸ್ಥಾನವಹಿಸಿದ್ದರು. ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್‍ನ ಕಲಬುರಗಿ ವಲಯದ ಉಪಾಧ್ಯಕ್ಷ ಜಿ.ಎಚ್. ಸಚಿನ್ ಹಾಗೂ ಜೆಸ್ಕಾಂನ ವಿವಿಧ ಇಂಜಿನಿಯರ್‍ಗಳು ಉಪಸ್ಥಿತರಿದ್ದರು.