Home ಜಿಲ್ಲೆ ಕಲಬುರಗಿ ಪೂಜ್ಯ ಡಾ.ಅಪ್ಪ ಶ್ರೇಷ್ಠ ಆಧುನಿಕ ವಚನಕಾರರು

ಪೂಜ್ಯ ಡಾ.ಅಪ್ಪ ಶ್ರೇಷ್ಠ ಆಧುನಿಕ ವಚನಕಾರರು

ಕಲಬುರಗಿ,ಸೆ.17: ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ವಚನ ಸಾಹಿತ್ಯದ ತತ್ತ್ವ, ಸಂದೇಶ ಜನಜೀವನದಲ್ಲಿ ಅಳವಡಿಸುವ ಕಾರ್ಯಕ್ಕೆ ಮಹತ್ವ ನೀಡಿ ದಾಸೋಹ ಸೂತ್ರಗಳನ್ನು ರಚಿಸಿದ ಶ್ರೇಷ್ಠ ಆಧುನಿಕ ವಚನಕಾರರು ಎಂದು ಶರಣಬಸವೇಶ್ವರ ಬಿ.ಎಡ್. ಕಾಲೇಜಿನ ಪ್ರಾಧ್ಯಾಪಕ ಡಾ.ಸಿದ್ಧಲಿಂಗಪ್ಪ ಬಾಗಲಕೋಟ್ ಹೇಳಿದರು.
ಅಖಿಲ ಭಾರತ ಶಿವಾನುಭವ ಮಂಟಪ ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ 40 ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಬುಧವಾರ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ಮತ್ತು ವಚನ ಸಾಹಿತ್ಯ ದಾಸೋಹ ವಿಷಯ ಕುರಿತು ಮಾತನಾಡಿ, ವಚನ ಸಾಹಿತ್ಯವು ಕನ್ನಡದ ವಿಶಿಷ್ಟ ಸಾಹಿತ್ಯ ಪರಂಪರೆಯಾಗಿದೆ. 12ನೇ ಶತಮಾನದಲ್ಲಿ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಚನ್ನಬಸವಣ್ಣ, ಸಿದ್ಧರಾಮ ಹಾಗೂ ಅನೇಕ ಶರಣರು ತಮ್ಮ ಅನುಭವ, ಆತ್ಮಚಿಂತನೆ ಮತ್ತು ಸಾಮಾಜಿಕ ದೃಷ್ಟಿಕೋನಗಳನ್ನು ಸರಳವಾದ ಜನಭಾಷೆಯಲ್ಲಿ ವ್ಯಕ್ತಪಡಿಸಿದರು.
ವಚನ ಸಾಹಿತ್ಯವು ನಮಗೆ ಕೇವಲ ಶಿವಭಕ್ತಿಯನ್ನು ಕಲಿಸುವುದಿಲ್ಲ, ಅದು ಕಾಯಕದಲ್ಲಿ ಪ್ರಾಮಾಣಿಕತೆ, ದಾಸೋಹದಲ್ಲಿ ಉದಾರತೆ, ಜ್ಞಾನದಲ್ಲಿ ವಿವೇಕ, ನಡತೆಯಲ್ಲಿ ಸತ್ಯ, ಸಮಾಜದಲ್ಲಿ ಸಮಾನತೆ ಮತ್ತು ಬದುಕಿನಲ್ಲಿ ಮಾನವೀಯತೆಯನ್ನು ಕಲಿಸುತ್ತದೆ.
ಡಾ.ಅಪ್ಪ ಅವರು ವಚನ ಸಾಹಿತ್ಯವನ್ನು ಆಳವಾಗಿ ಅಧ್ಯಾಯನ ಮಾಡಿದರು. ಅಖಿಲ ಭಾರತ ಶಿವಾನುಭವ ಮಂಟಪದ ಮೂಲಕ ವಚನ ಸಾಹಿತ್ಯ ದಾಸೋಹ ಮಾಡಿದರು. ಅವರು ಅನೇಕ ವಿದ್ವಾಂಸರಿಂದ ವಚನ ಸಾಹಿತ್ಯ ಗ್ರಂಥಗಳನ್ನು ಹೊರತಂದರು. ದಾಸೋಹ ಜ್ಞಾನರತ್ನ ಪತ್ರಿಕೆಯನ್ನು ಆರಂಭಿಸಿ ಶರಣರ ವಚನಗಳನ್ನು ಪ್ರಕಟ ಮಾಡುತ್ತಿದ್ದರು.
ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರ ಚಿಂತನೆಗಳಲ್ಲಿ ವಚನ ಸಾಹಿತ್ಯವು ಕೇವಲ ಓದುವ ಅಥವಾ ಅಧ್ಯಯನ ಮಾಡುವ ಸಾಹಿತ್ಯವಲ್ಲ, ಬದುಕಿನಲ್ಲಿ ಆಚರಿಸಬೇಕಾದ ಜೀವನದರ್ಶನ ಎಂಬ ಮಹತ್ವವನ್ನು ಪಡೆಯುತ್ತದೆ. ಅಪ್ಪ ಅವರ ಶೈಕ್ಷಣಿಕ ಸೇವಾ ದೃಷ್ಟಿಕೋನವನ್ನು ವಚನಗಳ ಜ್ಞಾನಪರಂಪರೆಯೊಂದಿಗೆ ನೋಡಬಹುದು. ಪೂಜ್ಯ ಡಾ. ಅಪ್ಪ ಅವರ ವಚನ ಸಾಹಿತ್ಯದೊಂದಿಗಿನ ಸಂಬಂಧವನ್ನು ಶರಣರ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸುವ ಮತ್ತು ಸಮಾಜಮುಖಿಯಾಗಿ ವಿಸ್ತರಿಸುವ ಪರಂಪರೆಯ ದೃಷ್ಟಿಯಿಂದ ಅರ್ಥಮಾಡಿಕೊಳ್ಳಬಹುದು. ಪೂಜ್ಯ ಅಪ್ಪ ಅವರ ಶಿಕ್ಷಣ, ಸಮಾಜಸೇವೆ ಮತ್ತು ಶರಣ ಪರಂಪರೆಯ ಮೌಲ್ಯಾಧಾರಿತ ಚಿಂತನೆಗಳು ವಚನ ಸಾಹಿತ್ಯದ ಜೀವಂತಿಕೆಯನ್ನು ಸಮಕಾಲೀನ ಸಮಾಜದಲ್ಲಿ ಮುಂದುವರಿಸುವ ಪ್ರಯತ್ನಗಳಾಗಿ ನೋಡಬಹುದು ಎಂದು ಹೇಳಿದರು.