Home ಮುಖಪುಟ ಸುದ್ದಿ ಪ್ರಥಮ ಡೆಂಗ್ಯೂ ಲಸಿಕೆ ‘ಕ್ಯೂಡೆಂಗಾ’ಗೆ ಭಾರತದಲ್ಲಿ ಅನುಮೋದನೆ

ಪ್ರಥಮ ಡೆಂಗ್ಯೂ ಲಸಿಕೆ ‘ಕ್ಯೂಡೆಂಗಾ’ಗೆ ಭಾರತದಲ್ಲಿ ಅನುಮೋದನೆ

ನವದೆಹಲಿ:ದೇಶದಲ್ಲಿ ಪ್ರತಿ ವರ್ಷ ಮುಂಗಾರು ವೇಳೆಗೆ ತೀವ್ರ ಆತಂಕ ಸೃಷ್ಟಿಸುವ ಹಾಗೂ ಸಾವಿರಾರು ಜನರನ್ನು ಆಸ್ಪತ್ರೆಗೆ ಸೇರಿಸುವ ಡೆಂಗ್ಯೂ ಜ್ವರಕ್ಕೆ ಕೊನೆಗೂ ಪ್ರಬಲ ನಿರೋಧಕ ಅಸ್ತ್ರ ಸಿಕ್ಕಿದೆ. ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರವು ದೇಶದ ಪ್ರಥಮ ಡೆಂಗ್ಯೂ ಲಸಿಕೆ ‘ಕ್ಯೂಡೆಂಗಾ’ ಬಳಕೆಗೆ ಅಧಿಕೃತ ಅನುಮೋದನೆ ನೀಡಿದೆ.


ಪ್ರತಿವರ್ಷ ಪ್ಲೇಟ್‌ಲೆಟ್ ಕೊರತೆ, ತೀವ್ರ ಜ್ವರ ಮತ್ತು ದೇಹದಂಡನೆಯಿಂದ ಬಳಲುವ ಲಕ್ಷಾಂತರ ಜನರಿಗೆ ಈ ನಿರ್ಧಾರ ದೊಡ್ಡ ರಿಲೀಫ್ ನೀಡಿದೆ.

೪ ರಿಂದ ೬೦ ವರ್ಷ ವಯಸ್ಸಿನ ಮಕ್ಕಳು, ಯುವಕರು ಮತ್ತು ಹಿರಿಯರಿಗೆ ಈ ಲಸಿಕೆ ನೀಡಲು ಅನುಮತಿ ನೀಡಲಾಗಿದೆ. ಈ ಹಿಂದಿನ ಕೆಲವು ಡೆಂಗ್ಯೂ ಲಸಿಕೆಗಳನ್ನು ನೀಡುವ ಮುನ್ನ ವ್ಯಕ್ತಿಗೆ ಹಿಂದೆ ಡೆಂಗ್ಯೂ ಬಂದಿತ್ತೇ ಇಲ್ಲವೇ ಎಂದು ತಿಳಿಯಲು ರಕ್ತ ಪರೀಕ್ಷೆ ಮಾಡಬೇಕಿತ್ತು. ಆದರೆ ’ಕ್ಯೂಡೆಂಗಾ’ ಲಸಿಕೆಗೆ ಯಾವುದೇ ಮುಂಚಿತ ರಕ್ತ ಪರೀಕ್ಷೆ ಅಗತ್ಯವಿಲ್ಲ. ಈ ಲಸಿಕೆಯನ್ನು ಒಟ್ಟು ೨ ಡೋಸ್‌ಗಳಲ್ಲಿ ನೀಡಲಾಗುತ್ತದೆ. ಮೊದಲ ಡೋಸ್ ಪಡೆದ ೩ ತಿಂಗಳ ನಂತರ ಎರಡನೇ ಡೋಸ್ ತೆಗೆದುಕೊಳ್ಳಬೇಕಾಗುತ್ತದೆ.

ತಳಿಗಳ ವಿರುದ್ಧ ರಕ್ಷಣೆ: ಡೆಂಗ್ಯೂ ವೈರಸ್‌ನ ನಾಲ್ಕೂ ಪ್ರಮುಖ ತಳಿಗಳ ವಿರುದ್ಧ ಈ ಲಸಿಕೆ ಶೇಕಡಾವಾರು ಉತ್ತಮ ರಕ್ಷಣೆ ನೀಡುತ್ತದೆ.ಲಸಿಕೆಗೆ ಅನುಮೋದನೆ ಸಿಕ್ಕಿದ್ದರೂ ಎಲ್ಲರಿಗೂ ಇದು ನೇರವಾಗಿ ಸೂಕ್ತವಲ್ಲ ಎಂದು ಸಾಂಕ್ರಾಮಿಕ ರೋಗಗಳ ತಜ್ಞರು ತಿಳಿಸಿದ್ದಾರೆ:

ಗರ್ಭಿಣಿಯರು ಮತ್ತು ಮಗುವಿಗೆ ಹಾಲುಣಿಸುವ ತಾಯಂದಿರು.ತೀವ್ರ ಸ್ವರೂಪದ ರೋಗನಿರೋಧಕ ಶಕ್ತಿ ಕೊರತೆ ಇರುವವರು.ಲಸಿಕೆಯ ಯಾವುದೇ ಅಂಶಗಳಿಗೆ ಅಲರ್ಜಿ ಹೊಂದಿರುವವರು.ಇಂತವರು ಲಸಿಕೆ ಪಡೆಯುವ ಮುನ್ನ ಕಡ್ಡಾಯವಾಗಿ ವೈದ್ಯರ ಸಲಹೆ ಪಡೆಯಬೇಕು.


ಲಸಿಕೆ ಯಾವಾಗ ಲಭ್ಯ?
‘ಕ್ಯೂಡೆಂಗಾ’ ಲಸಿಕೆಗೆ ಸರ್ಕಾರಿ ಹಸಿರು ನಿಶಾನೆ ಸಿಕ್ಕಿದೆಯಾದರೂ, ಮಾರುಕಟ್ಟೆಗೆ ಬರುವುದು ಮತ್ತು ಆಸ್ಪತ್ರೆಗಳಿಗೆ ಪೂರೈಕೆಯಾಗುವುದು ಹಂತ-ಹಂತವಾಗಿ ನಡೆಯಲಿದೆ. ಮುಂಬರುವ ತಿಂಗಳುಗಳಲ್ಲಿ ದೇಶದ ಪ್ರಮುಖ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು ಮತ್ತು ಲಸಿಕಾ ಕೇಂದ್ರಗಳಲ್ಲಿ ಇದು ಲಭ್ಯವಾಗುವ ನಿರೀಕ್ಷೆಯಿದೆ.


ಲಸಿಕೆ ಬಂದ ತಕ್ಷಣ ಸೊಳ್ಳೆಗಳ ಬಗ್ಗೆ ನಿರ್ಲಕ್ಷ್ಯ ವಹಿಸುವಂತಿಲ್ಲ ಎಂದು ವೈದ್ಯರು ಎಚ್ಚರಿಸಿದ್ದಾರೆ. ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸೊಳ್ಳೆ ನಿರೋಧಕ ಬಳಸುವುದು ಹಾಗೂ ಜ್ವರ ಬಂದ ತಕ್ಷಣ ವೈದ್ಯರನ್ನು ಕಾಣುವ ಮುನ್ನೆಚ್ಚರಿಕೆ ಕ್ರಮಗಳು ಎಂದಿನಂತೆ ಮುಂದುವರಿಯಬೇಕು.