
ಕಲಬುರಗಿ,ಜು.22-ಕರ್ನಾಟಕದ ಕೋಲಿ ಸಮಾಜವು ಐತಿಹಾಸಿಕವಾಗಿ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯವಾಗಿದೆ. ಸಮಾಜದ ನೈಜ ಸ್ಥಿತಿಗಳನ್ನು ವೈಜ್ಞಾನಿಕವಾಗಿ ದಾಖಲಿಸಿ, ಪರಿಶಿಷ್ಟ ಪಂಗಡ (ಎಸ್ಟಿ) ಸೇರ್ಪಡೆಗೆ ಅಗತ್ಯ ದಾಖಲೆಗಳನ್ನು ಸಿದ್ದಪಡಿಸಲು ಕುಲ-ಶಾಸ್ತ್ರೀಯ ಅಧ್ಯಯನ ನಡೆಸುವುದು ಅತ್ಯಂತ ಅಗತ್ಯವಾಗಿದೆ. ಆದ್ದರಿಂದ ಈ ಅಧ್ಯಯನವನ್ನು ವಿಳಂಬವಿಲ್ಲದೆ ಕೈಗೊಳ್ಳಲು ಸರಕಾರ ಅಗತ್ಯ ಹಣಕಾಸಿನ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಿ ಸಂಬಂಧಿತ ಇಲಾಖೆಗೆ ಆದೇಶ ನೀಡಬೇಕೆಂದು ಕರ್ನಾಟಕ ಕೋಲಿ ಸೈನ್ಯ ಮನವಿ ಮಾಡಿದೆ.
ಈ ಸಂಬಂಧ ಕರ್ನಾಟಕ ಕೋಲಿ ಸೈನ್ಯದ ರಾಜ್ಯಾಧ್ಯಕ್ಷ ನಿಂಗಪ್ಪ ಆರ್.ದೇವಣಗಾಂವ ಅವರು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಕೋಲಿ ಸಮಾಜದ ಕುಲ-ಶಾಸ್ತ್ರೀಯ ಅಧ್ಯಯನಕ್ಕಾಗಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು, ರಾಜ್ಯಮಟ್ಟದ ತಜ್ಞರ ಸಮಿತಿ ರಚಿಸಿ ಅಧ್ಯಯನ ಶೀಘ್ರವಾಗಿ ಆರಂಭಿಸಬೇಕು, ಅಧ್ಯಯನ ವರದಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಸಲ್ಲಿಸಲು ಕ್ರಮ ಕೈಗೊಳ್ಳಬೇಕು, ಎಸ್ಟಿ ಸೇರ್ಪಡೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಅಗತ್ಯ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಮುಖಂಡರಾದ ಬೆಳ್ಳಪ್ಪ ಇಂಗನಕಲ್, ಪಿತಾಂಬರ ಕಲಗುರ್ತಿ, ಬೋಗೇಶ ಜಮಾದಾರ, ನಾಗರಾಜ ಹಿಟ್ಟಿನ, ಪ್ರವೀಣ್ ತೆಗ್ಗೆಳ್ಳಿ, ಶಿವರಾಜ ನಾಟಿಕಾರ, ಬಸವರಾಜ ದಿಗ್ಗಾಂವ, ಶರಣು ನಾಟಿಕರ, ಜೈಪ್ರಕಾಶ್ ಉಪಸ್ಥಿತರಿದ್ದರು.































