Home ಮುಖಪುಟ ಸುದ್ದಿ ಅಸ್ಸಾಂ ಜಲಪ್ರಳಯಕ್ಕೆ ೨೧ ಬಲಿ

ಅಸ್ಸಾಂ ಜಲಪ್ರಳಯಕ್ಕೆ ೨೧ ಬಲಿ

ಗೌಹಾಟಿ.ಜು.೨೨: ಅಸ್ಸಾಂನಲ್ಲಿ ಮುಂಗಾರು ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ತೀವ್ರ ವಿಕೋಪಕ್ಕೆ ತಿರುಗಿದ್ದು, ಇಂದು ಒಂದೇ ದಿನ ೨೧ ಜನರು ಸಾವನ್ನಪ್ಪಿದ್ದಾರೆ.

ಇದರೊಂದಿಗೆ ರಾಜ್ಯದಲ್ಲಿ ಈ ವರ್ಷ ಪ್ರವಾಹ ಸಂಬಂಧಿತ ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ ೩೧ಕ್ಕೆ ಏರಿಕೆಯಾಗಿದೆ. ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನೀಡಿರುವ ವರದಿಯ ಪ್ರಕಾರ, ರಾಜ್ಯದ ೧೬ ಜಿಲ್ಲೆಗಳಲ್ಲಿ ಬರೋಬ್ಬರಿ ೫,೬೪,೬೦೦ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ.

೧೫ ಜಿಲ್ಲೆಗಳಲ್ಲಿ ೩.೬೩ ಲಕ್ಷ ಜನರು ಸಂಕಷ್ಟದಲ್ಲಿದ್ದರೆ, ಮಳೆಯ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಕೇವಲ ೪೮ ಗಂಟೆಗಳಲ್ಲಿ ಪ್ರವಾಹಪೀಡಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಪ್ರಮುಖ ಜಿಲ್ಲೆಗಳಲ್ಲಿ ಗರಿಷ್ಠ ಹಾನಿಸಾವು-ನೋವಿನ ವರದಿಯಲ್ಲಿ ಶಿವಸಾಗರ ಜಿಲ್ಲೆ ಅತ್ಯಂತ ಭೀಕರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಕಳೆದ ೨೪ ಗಂಟೆಗಳಲ್ಲಿ ಇಲ್ಲಿ ೧೩ ಜನರು ಮೃತಪಟ್ಟಿದ್ದಾರೆ.

ಉಳಿದಂತೆ ಚರಾಯ್ದೇವ್‌ನಲ್ಲಿ ೫, ಗೋಲಾಗಾಟ್‌ನಲ್ಲಿ ೨ ಹಾಗೂ ಜೋರ್ಹಾಟ್‌ನಲ್ಲಿ ಒಬ್ಬರು ಅಸುನೀಗಿದ್ದಾರೆ. ನೀರಿನಲ್ಲಿ ಮುಳುಗಿದ ಗ್ರಾಮಗಳು: ೪೪ ಕಂದಾಯ ವೃತ್ತಗಳ ವ್ಯಾಪ್ತಿಯಲ್ಲಿ ಬರುವ ೮೭೨ ಹಳ್ಳಿಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ.


ಪೀಡಿತರ ಸಂಖ್ಯೆ: ಶಿವಸಾಗರದಲ್ಲೇ ಗರಿಷ್ಠ ೩.೫೯ ಲಕ್ಷಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ಸಿಲುಕಿದ್ದು, ಜೋರ್ಹಾಟ್‌ನಲ್ಲಿ ೮೭,೬೬೨ ಮತ್ತು ಚರಾಯ್ದೇವ್‌ನಲ್ಲಿ ೭೨,೬೪೬ ಜನರು ಸಂಕಷ್ಟದಲ್ಲಿದ್ದಾರೆ.


ಕಾಳಜಿ ಕೇಂದ್ರಗಳು ಸಂತ್ರಸ್ತರಿಗಾಗಿ ಪ್ರಸ್ತುತ ೭೧ ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ೧೨,೨೮೪ ಜನರು ಆಶ್ರಯ ಪಡೆದಿದ್ದಾರೆ. ಜೊತೆಗೆ ೨೦೨ ಪರಿಹಾರ ಸಾಮಗ್ರಿ ವಿತರಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು:ಶಿವಸಾಗರ ನಗರದ ದಿಖೌ ಮತ್ತು ದಿಸಾಂಗ್ ನದಿಗಳು ಇದುವರೆಗಿನ ಗರಿಷ್ಠ ಮಟ್ಟವನ್ನು ಮೀರಿ ಅಪಾಯಕಾರಿಯಾಗಿ ಹರಿಯುತ್ತಿವೆ.

ನೇಮತಿಘಾಟ್‌ನಲ್ಲಿ ಬ್ರಹ್ಮಪುತ್ರ, ಖೋವಾಂಗ್‌ನಲ್ಲಿ ಬುರ್ಹಿಡಿಹಿಂಗ್ ಹಾಗೂ ಗೋಲಾಗಾಟ್-ನುಮಾಲಿಗಢದಲ್ಲಿ ಧನಸಿರಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮುಖ್ಯಮಂತ್ರಿಗಳಿಂದ ಸ್ಥಳ ಪರಿಶೀಲನೆಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಇಂದು ಬುಧವಾರದಿಂದ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಯ ಪರಾಮರ್ಶೆ ನಡೆಸಲಿದ್ದಾರೆ. “ನದಿಗಳ ಮೇಲ್ಭಾಗದಲ್ಲಿ ಸಂಭವಿಸಿದ ಮೋಡಸ್ಫೋಟದಿಂದಾಗಿ ಪ್ರವಾಹ ಭೀಕರ ಸ್ವರೂಪ ಪಡೆದುಕೊಂಡಿದ್ದು, ಜನ ಜೀವನ ತತ್ತರಿಸಿದೆ. ನಾನು ಚರಾಯ್ದೇವ್, ನಾಜಿರಾ, ಶಿವಸಾಗರ, ಸೋನಾರಿ, ಜೋರ್ಹಾಟ್ ಹಾಗೂ ಟಿಯೋಕ್ ಭಾಗಗಳ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿ ಸ್ಥಿತಿಗತಿ ಪರಿಶೀಲಿಸಲಿದ್ದೇನೆ” ಎಂದು ಸಿಎಂ ತಿಳಿಸಿದ್ದಾರೆ.

ರೈಲು ಸಂಚಾರ ಸ್ಥಗಿತ, ಉಚಿತ ನೆಟ್‌ವರ್ಕ್ ರೋಮಿಂಗ್ ಸೇವೆರೈಲು ಸೇವೆ ವ್ಯತ್ಯಯ: ಶಿವಸಾಗರ ಜಿಲ್ಲೆಯ ಸಿಮಲುಗುರಿ ಪಟ್ಟಣದ ಬಳಿ ರೈಲು ಹಳಿಗಳು ನೀರಿನಲ್ಲಿ ಮುಳುಗಿರುವುದರಿಂದ ಸತತ ಎರಡನೇ ದಿನವೂ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಈಶಾನ್ಯ ಗಡಿ ರೈಲ್ವೇ ಹಲವು ರೈಲುಗಳನ್ನು ರದ್ದುಗೊಳಿಸಿದ್ದು, ಸಂಕಷ್ಟದಲ್ಲಿರುವ ಪ್ರಯಾಣಿಕರಿಗಾಗಿ ಶುಕ್ರವಾರದವರೆಗೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ.

ಮೊಬೈಲ್ ಸಂಪರ್ಕ ಕಡಿತಗೊಳ್ಳದಂತೆ ತಡೆಯಲು ದೂರಸಂಪರ್ಕ ಇಲಾಖೆ ಜುಲೈ ೨೪ ರವರೆಗೆ ಶಿವಸಾಗರ, ಚರಾಯ್ದೇವ್ ಮತ್ತು ಜೋರ್ಹಾಟ್ ಜಿಲ್ಲೆಗಳಲ್ಲಿ ಇಂಟ್ರಾ-ಸರ್ಕಲ್ ರೋಮಿಂಗ್ ಸೌಲಭ್ಯವನ್ನು ಸಕ್ರಿಯಗೊಳಿಸಿದೆ. ಇದರಿಂದಾಗಿ ಸ್ವಂತ ನೆಟ್‌ವರ್ಕ್ ಸಿಗದಿದ್ದರೂ ಗ್ರಾಹಕರು ಲಭ್ಯವಿರುವ ಯಾವುದೇ ಕಂಪನಿಯ ನೆಟ್‌ವರ್ಕ್ ಬಳಸಬಹುದಾಗಿದೆ. ಪ್ರಸ್ತುತ ವಾಯುಪಡೆ ಎನ್‌ಡಿಆರ್‌ಎಫ್ ಎಸ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಜಂಟಿಯಾಗಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.