
ಬೆಂಗಳೂರು, ಜು. ೨೨- ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕಾಂಗ್ರೆಸ್ ವರಿಷ್ಠರೊಂದಿಗೆ ಚರ್ಚಿಸಲು ನಿನ್ನೆ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ವರಿಷ್ಠರೊಂದಿಗೆ ಚರ್ಚೆಗೆ ಅವಕಾಶ ಸಿಗದ ಕಾರಣ ರಾಜ್ಯಕ್ಕೆ ವಾಪಸ್ಸಾಗಿದ್ದು, ಸಂಪುಟ ವಿಸ್ತರಣೆ ಮತ್ತೆ ಮುಂದಕ್ಕೆ ಹೋಗಿದಂತಾಗಿದೆ.
ಸಚಿವ ಸಂಪುಟ ವಿಸ್ತರಣೆಗೆ ಇಂದು ಮಹೂರ್ತ ನಿಗದಿ ಮಾಡಿ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ರಾಜ್ಯಭನಕ್ಕೆ ಸರ್ಕಾರ ಪತ್ರವನ್ನು ಕಳುಹಿಸಿತ್ತು. ಆದರೆ ಕಾಂಗ್ರೆಸ್ ವರಿಷ್ಠರು ನೀಟ್ ಅಕ್ರಮ ವಿರುದ್ಧ ಹೋರಾಟದಲ್ಲಿ ಬ್ಯುಸಿಯಾಗಿರುವುದರಿಂದ ನಿನ್ನೆ ಸಂಪುಟ ವಿಸ್ತರಣೆ ಚರ್ಚೆಗಳು ನಡೆಯಲಿಲ್ಲ. ಹಾಗಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ರಾಜ್ಯಕ್ಕೆ ಇಂದು ವಾಪಸ್ಸಾದರು.
ಹೈಕಮಾಂಡ್‌ನ ಬುಲಾವ್ ಮೇರೆಗೆ ರಾಜ್ಯದ ಈ ಮೂವರು ನಾಯಕರು ನಿನ್ನೆ ಮಧ್ಯಾಹ್ನ ದೆಹಲಿಗೆ ತೆರಳಿದ್ದರು. ನಿನ್ನೆ ಸಂಜೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ನಿವಾಸದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರ ಅಧ್ಯಕ್ಷತೆಯಲ್ಲಿ ಸಂಪುಟ ವಿಸ್ತರಣೆಯ ಚರ್ಚೆ ಸಭೆ ನಡೆಯಬೇಕಿತ್ತು. ಈ ಸಭೆಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹಾಲ್‌ಗಾಂಧಿ ಸಹ ಪಾಲ್ಗೊಳ್ಳಲಿದ್ದರು. ಆದರೆ ಕಾಕ್ರೋಜ್ ಜನತಾಪಕ್ಷ ನೀಟ್ ಅಕ್ರಮದ ವಿರುದ್ಧ ಜಂತರ್ ಮಂತರ್‌ನಲ್ಲಿ ನಡೆಸುತ್ತಿದ್ದ ಪ್ರತಿಭಟನೆಗೆ ಕೈ ನಾಯಕರು ಬೆಂಬಲ ಸೂಚಿಸಿ ದಿಢೀರ್ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಬಳಿ ನಿನ್ನೆ ಸಂಜೆ ಧರಣಿ ಆರಂಭಿಸಿ ಅಹೋರಾತ್ರಿ ಧರಣಿಗೆ ಮುಂದಾಗಿದ್ದರು.
ದೆಹಲಿ ಪೊಲೀಸರು ಅಹೋರಾತ್ರಿ ಧರಣಿಗೆ ಅವಕಾಶ ಕೊಡದೆ ರಾಹುಲ್‌ಗಾಂಧಿ, ಪ್ರಿಯಾಂಕ ವಾದ್ರಾ ಸೇರಿದಂತೆ ಎಲ್ಲರನ್ನು ವಶಕ್ಕೆ ಪಡೆದುಕೊಂಡಿದ್ದರು .ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆಗೆ ಸಮಯವೇ ಸಿಗಲಿಲ್ಲ. ಇಂದೂ ಸಹ ರಾಹುಲ್‌ಗಾಂಧಿ ಸೇರಿದಂತೆ ವರಿಷ್ಠ ನಾಯಕರುಗಳಿಗೆ ನೀಟ್ ಅಕ್ರಮದ ವಿರುದ್ಧ ಹೋರಾಟವನ್ನು ಮುಂದುವರಿಸಿದ್ದು, ಸಂಪುಟ ವಿಸ್ತರಣೆಯ ಚರ್ಚೆಗೆ ಅವಕಾಶ ಸಿಗುವ ಸಾಧ್ಯತೆಗಳು ಕಡಿಮೆ ಇದ್ದ ಕಾರಣ, ಸಂಪುಟ ಚರ್ಚೆಗೆ ದೆಹಲಿಗೆ ಹೋಗಿದ್ದ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೆಪಿಸಿಸಿ ಅಧ್ಯಕ್ಷ ಹಿರಪ್ರಸಾದ್ ಇವರುಗಳು ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ಸಾಗಿದ್ದಾರೆ.
ಈ ತಿಂಗಳ ೨೫ರ ಬಳಿಕ ಮತ್ತೆ ಈ ಮೂವರು ನಾಯಕರು ದೆಹಲಿಗೆ ತೆರಳಲಿದ್ದಾರೆ. ಹಾಗಾಗಿ ಸಂಪುಟ ವಿಸ್ತರಣೆಗೆ ಈ ತಿಂಗಳ ೨೫ರ ನಂತರವೇ ಮಹೂರ್ತ ನಿಗದಿಯಾಗಲಿದೆ.
ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಪದೇ ಪದೇ ಚರ್ಚೆಗಳು ಮುಂದಕ್ಕೆ ಹೋಗುತ್ತಿರುವುದು ಸಚಿವಾಕಾಂಕ್ಷಿ ಶಾಸಕರಲ್ಲಿ ನಿರಾಸೆ ಮೂಡಿಸಿದೆ.
ನಿನ್ನೆ ವರಿಷ್ಠರ ಜತೆ ಸಭೆ ಆಗಿದ್ದರೆ ಇಂದು ನೂತನ ಸಚಿವರ ಪ್ರಮಾಣ ಆಗಬೇಕಿತ್ತು. ಹೊಸ ಸಚಿವರುಗಳು ಪ್ರಮಾಣ ವಚನಕ್ಕೆ ಸಿದ್ಧರಾಗಿದ್ದರು. ಆದರೆ, ವರಿಷ್ಠರ ಜತೆ ಸಭೆ ನಡೆಯದ ಕಾರಣ ಎಲ್ಲವೂ ತಿರುಗುಮುರುಗಾದಂತಾಯಿತು. ಸಚಿವಾಕಾಂಕ್ಷಿ ಶಾಸಕರು ಮತ್ತೆ ಕಾಯುವಂತ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಈ ತಿಂಗಳ ೨೫ ರಂದು ಸಂಪುಟ ವಿಸ್ತರಣೆ ಸಭೆ ದೆಹಲಿಯಲ್ಲಿ ನಡೆಯಲಿದ್ದು, ಈ ತಿಂಗಳಾತ್ಯಂದಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಸಚಿವಾಕಾಂಕ್ಷಿ ಶಾಸಕರುಗಳು ವಾಪಸ್
ಸಚಿವ ಪಟ್ಟಕ್ಕಾಗಿ ದೆಹಲಿಗೆ ತೆರಳಿ ಮೊಕ್ಕಾಂ ಹೂಡಿದ್ದ ಸಚಿವಾಕಾಂಕ್ಷಿ ಶಾಸಕರು ಸಹ ಸಂಪುಟ ಸಭೆ ನಡೆಯದ ಕಾರಣ ಇಂದು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದು ಮತ್ತೆ ೨೫ ರ ನಂತರ ಇವರುಗಳು ಸಹ ದೆಹಲಿಗೆ ತೆರಳಲಿದ್ದಾರೆ.

































