
ನವದೆಹಲಿ,ಜು.೨೦: ದೇಶದಲ್ಲಿ ಪ್ರತಿವರ್ಷ ಲಕ್ಷಾಂತರ ಜನರನ್ನು ಬಾಧಿಸುವ ಮಾರಕ ಡೆಂಗ್ಯೂ ಜ್ವರಕ್ಕೆ ಕೊನೆಗೂ ಮೊದಲ ಲಸಿಕೆ ಲಭ್ಯವಾಗಿದೆ. ಜಪಾನ್ ಮೂಲದ ಪ್ರಸಿದ್ಧ ಔಷಧ ತಯಾರಿಕಾ ಸಂಸ್ಥೆ ‘ಟಕೆಡಾ ಬಯೋಫಾರ್ಮಾಸ್ಯುಟಿಕಲ್ಸ್’ ಅಭಿವೃದ್ಧಿಪಡಿಸಿರುವ ‘ಕ್ಯುಡೆಂಗಾ’ ಲಸಿಕೆಯ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯ ಅಂತಿಮ ಅನುಮೋದನೆ ನೀಡಿದೆ.
ಭಾರತದಲ್ಲಿ ಲಭ್ಯವಾಗುತ್ತಿರುವ ಮೊದಲ ಡೆಂಗ್ಯೂ ಲಸಿಕೆ ಇದಾಗಿದ್ದು, ೪ ವರ್ಷದಿಂದ ೬೦ ವರ್ಷ ವಯಸ್ಸಿನವರೆಗಿನ ನಾಗರಿಕರಿಗೆ ಇದನ್ನು ನೀಡಬಹುದಾಗಿದೆ.
ಈ ಲಸಿಕೆಯು ಡೆಂಗ್ಯೂ ವೈರಸ್ನ ಎಲ್ಲಾ ನಾಲ್ಕು ಪ್ರಮುಖ ಉಪ-ಪ್ರಭೇದಗಳ ವಿರುದ್ಧ ಪರಿಣಾಮಕಾರಿ ರಕ್ಷಣೆ ನೀಡುತ್ತದೆ.ಈ ಹಿಂದೆ ಡೆಂಗ್ಯೂ ಬಂದಿರಲಿ ಅಥವಾ ಬಾರದಿರಲಿ, ಯಾವುದೇ ಮುಂಜಾಗ್ರತಾ ರಕ್ತ ಪರೀಕ್ಷೆ ಇಲ್ಲದೆಯೇ ಈ ಲಸಿಕೆಯನ್ನು ನೇರವಾಗಿ ಪಡೆಯಬಹುದು.ಇದನ್ನು ಚರ್ಮದ ಅಡಿಯಲ್ಲಿ ೦.೫ಒಐ ನಂತೆ ಎರಡು ಡೋಸ್ಗಳಲ್ಲಿ ನೀಡಲಾಗುತ್ತದೆ. ಮೊದಲ ಡೋಸ್ ಪಡೆದ ೩ ತಿಂಗಳ ನಂತರ ಎರಡನೇ ಡೋಸ್ ಪಡೆಯಬೇಕಾಗುತ್ತದೆ.
ಶೇ. ೮೦.೨ ರಷ್ಟು ಪರಿಣಾಮಕಾರಿ
ಜಾಗತಿಕ ಮಟ್ಟದಲ್ಲಿ ೨೮,೦೦೦ ಕ್ಕೂ ಹೆಚ್ಚು ಜನರ ಮೇಲೆ ನಡೆದ ಕ್ಲಿನಿಕಲ್ ಪ್ರಯೋಗಗಳ ಪ್ರಕಾರ, ಈ ಲಸಿಕೆಯು ಶೇ. ೮೦.೨ ರಷ್ಟು ಡೆಂಗ್ಯೂ ಬಾರದಂತೆ ತಡೆಯುತ್ತದೆ. ಅಲ್ಲದೆ, ಸೋಂಕು ತಗುಲಿದರೂ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯನ್ನು ಶೇ. ೯೦.೪ ರಷ್ಟು ಕಡಿಮೆ ಮಾಡುತ್ತದೆ ಎಂದು ವರದಿಗಳು ದೃಢಪಡಿಸಿವೆ.
ಭಾರತಕ್ಕೆ ಏಕಾಗಿರಬೇಕು ಲಸಿಕೆ?
ವಿಶ್ವದಾದ್ಯಂತ ವರದಿಯಾಗುವ ಒಟ್ಟು ಡೆಂಗ್ಯೂ ಪ್ರಕರಣಗಳಲ್ಲಿ ಮೂರನೇ ಒಂದು ಭಾಗದಷ್ಟು ಭಾರತದಲ್ಲೇ ದಾಖಲಾಗುತ್ತಿವೆ. ೨೦೨೫ ರಲ್ಲೇ ದೇಶದಲ್ಲಿ ೧.೧೩ ಲಕ್ಷಕ್ಕೂ ಅಧಿಕ ಪ್ರಕರಣಗಳು ಅಧಿಕೃತವಾಗಿ ದಾಖಲಾಗಿದ್ದವು. ಹವಾಮಾನ ವೈಪರೀತ್ಯ ಮತ್ತು ಹೆಚ್ಚುತ್ತಿರುವ ನಗರೀಕರಣದಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ದೇಶದ ಆರೋಗ್ಯ ವ್ಯವಸ್ಥೆಗೆ ಡೆಂಗ್ಯೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ‘ಕ್ಯುಡೆಂಗಾ’ ಲಸಿಕೆಯು ದೇಶದ ಆರೋಗ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಬ್ರೆಜಿಲ್, ಅರ್ಜೆಂಟೀನಾ, ಇಂಡೋನೇಷ್ಯಾ ಸೇರಿದಂತೆ ವಿಶ್ವದ ೪೩ ದೇಶಗಳಲ್ಲಿ ಈ ಲಸಿಕೆಯನ್ನು ಯಶಸ್ವಿಯಾಗಿ ಬಳಸಲಾಗುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆ ಕೂಡ ಇದಕ್ಕೆ ಮಾನ್ಯತೆ ನೀಡಿದೆ. ಭಾರತೀಯ ಮಾರುಕಟ್ಟೆಗೆ ಶೀಘ್ರದಲ್ಲೇ ಈ ಲಸಿಕೆ ಅಧಿಕೃತವಾಗಿ ಬಿಡುಗಡೆಯಾಗಲಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.


































