
೧೭ ಮಂದಿ ಬಂಧನ
ಬೆಂಗಳೂರು,ಜು.೨೧-ಮಾದಕ ವಸ್ತುಗಳ ಸಾಗಾಣೆ ಮಾರಾಟದ ವಿರುದ್ಧದ ಸಮರ ಸಮರ ಸಾರಿರುವ ನಗರ ಪೊಲೀಸರು ಓರ್ವ ವಿದೇಶಿ,೧೦ಮಂದಿ ಹೊರರಾಜ್ಯದವರು,೬ ಮಂದಿ ಸ್ಥಳೀಯರು ಸೇರಿ ೧೭ ಮಂದಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿ ೩೦.೫೮ ಕೋಟಿ ಮೌಲ್ಯದ ವಿವಿಧ ಮಾದರಿಯ ಡ್ರಗ್ಸ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಸಿಬಿ, ಚಾಮರಾಜಪೇಟೆ, ಕೋರಮಂಗಲ, ಬಾಣಸವಾಡಿ, ವೈಟ್ ಫೀಲ್, ಮಲ್ಲೇಶ್ವರಂ ಹಾಗೂ ಪುಲಕೇಶಿನಗರ ಪೊಲೀಸರು ಕಾರ್ಯಾಚರಣೆ ಕೈಗೊಂಡು ಬಂಧಿಸಿರುವ ೧೭ ಮಂದಿ ಡ್ರಗ್ ಫೆಡ್ಲರ್ ಗಳಲ್ಲಿ ಓರ್ವ ಮಹಿಳೆ ಸೇರಿದ್ದು,ಎಲ್ಲರನ್ನೂ ತೀವ್ರ ವಿಚಾರಣೆ ನಡೆಸಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತ ೩೦.೫೮ ಕೋಟಿ ಮೌಲ್ಯದ ೧೩ ಕೆಜಿ ೧೩೫ ಗ್ರಾಂ ಎಂಡಿಎಂಎ,೧೮೧.೩ ಗ್ರಾಂ ಕೊಕೇನ್,೧೫ ಗ್ರಾಂ ಹೆರಾಯಿನ್,೫೯ಕೆಜಿ ೩೨೨ ಗ್ರಾಂ ಗಾಂಜಾ,೭ ಕೆಜಿ ಅಫೀಮು, ೨೨೫ ಗ್ರಾಂ ಮೆಫೆಡೋನ್,೬ ಮೊಬೈಲ್‌ಗಳು, ೧ ಕಾರು,೧ ದ್ವಿಚಕ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಸಿಸಿಬಿ, ಚಾಮರಾಜಪೇಟೆ, ಕೋರಮಂಗಲ, ಬಾಣಸವಾಡಿ, ವೈಟ್ ಫೀಲ್ಡ್, ಮಲ್ಲೇಶ್ವರಂ ಹಾಗೂ ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿರುವ ಸಂಬಂಧ ಖಚಿತ ಮಾಹಿತಿ ಆಧರಿಸಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿ ೧೭ ಮಂದಿ ಡ್ರಗ್ಸ್ ಫೆಡ್ಲರ್ ಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಬಂಧಿತ ೧೭ ಮಂದಿ ಡ್ರಗ್ಸ್ ಪೆಡ್ಲರ್ ಗಳನ್ನು ವಿಚಾರಣೆ ನಡೆಸಿದಾಗ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ವಿದೇಶ, ಹೊರ ರಾಜ್ಯದ ಹಾಗೂ ರಾಜ್ಯದ ಅಪರಿಚಿತ ವ್ಯಕ್ತಿಗಳಿಂದ ನಿಷೇಧಿತ ಮಾದಕ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡಿದ್ದಾರೆ.ಬಂಧಿತರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಡ್ರಗ್ ಪೆಡ್ಲರ್‌ಗಳ ಬಂಧನಕ್ಕೆ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ ಎಂದರು.
ಸಿಸಿಬಿ ಪೊಲೀಸರು ೨೮ ಕೋಟಿ, ಚಾಮರಾಜಪೇಟೆ ೧.೦೬ ಕೋಟಿ, ಕೋರಮಂಗಲ ೬೨.೮೦ಲಕ್ಷ,ಬಾಣಸವಾಡಿ ೪೮ ಲಕ್ಷ ವೈಟ್ ಫೀಲ್ಡ್ ೧೨ ಲಕ್ಷ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.
ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯನ್ನು ಡಿಸಿಪಿಗಳಾದ ರಾಜಾ ಇಮಾಮ್ ಕಾಸೀಂ.ಪಿ, ಯತೀಶ್.ಎನ್, ಮೊಹಮ್ಮದ್ ಸುಜೀತ,ಎಂ.ಎಸ್ ಡಾ:ವಿಕ್ರಮ್ ಅಮಟೆ,ಸೈದುಲು ಅಡಾವತ್, ಬಿ.ಎಸ್.ನೇಮಗೌಡ ನೇತೃತ್ವದಲ್ಲಿ, ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮತ್ತವರ ಸಿಬ್ಬಂದಿ ಕೈಗೊಂಡಿದೆ ಎಂದು ಹೇಳಿದರು.


































