Home ಮುಖಪುಟ ಸುದ್ದಿ ಸಂಸತ್ ಅಧಿವೇಶನ ಪ್ರಗತಿ ಪರವಾಗಿರಲಿ ವಿಪಕ್ಷಗಳಿಗೆ ಮೋದಿ ಮನವಿ

ಸಂಸತ್ ಅಧಿವೇಶನ ಪ್ರಗತಿ ಪರವಾಗಿರಲಿ ವಿಪಕ್ಷಗಳಿಗೆ ಮೋದಿ ಮನವಿ

ನವದೆಹಲಿ,ಜು.೨೦: ಇಂದಿನಿಂದ ಸಂಸತ್ತಿನ ಮಹತ್ವದ ಮಳೆಗಾಲದ ಅಧಿವೇಶನ ಆರಂಭವಾಗಿದ್ದು, ಸದನ ಅತ್ಯಂತ ಉತ್ಪಾದಕ ಹಾಗೂ ದೇಶದ ಹಿತದೃಷ್ಟಿಯಿಂದ ಪ್ರಗತಿಪರವಾಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆಶಿಸಿದರು.

ಅಧಿವೇಶನ ಆರಂಭಕ್ಕೂ ಮುನ್ನ ಸಂಸತ್ ಭವನದ ಆವರಣದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ಸಂಸತ್ತು ಕೇವಲ ಗದ್ದಲ ಎಬ್ಬಿಸುವ ವೇದಿಕೆಯಾಗಬಾರದು ಬದಲಿಗೆ ಬಲವಾದ ಸತ್ಯಗಳ ಆಧಾರದ ಮೇಲೆ ಮುಕ್ತವಾಗಿ ಚರ್ಚಿಸುವ ವೇದಿಕೆಯಾಗಬೇಕು ಎಂದು ವಿರೋಧ ಪಕ್ಷಗಳಿಗೆ ಕರೆ ನೀಡಿದರು.

“ಮಳೆಗಾಲವಾಗಲಿ ಅಥವಾ ಮಳೆಗಾಲದ ಅಧಿವೇಶನವಾಗಲಿ, ಎರಡೂ ಸಕ್ರಿಯವಾಗಿದ್ದರೆ ಮಾತ್ರ ದೇಶಕ್ಕೆ ಹೆಚ್ಚಿನ ಉತ್ಪಾದಕತೆ ಸಿಗುತ್ತದೆ. ಸಂಸತ್ತಿನಲ್ಲಿ ಪ್ರತಿಯೊಬ್ಬರ ಧ್ವನಿಗೂ ಮುಕ್ತ ಅವಕಾಶವಿರಬೇಕು. ಎಲ್ಲಿ ಬಲವಾದ ತರ್ಕ ಮತ್ತು ನಿಖರವಾದ ಅಂಕಿ-ಅಂಶಗಳಿರುತ್ತವೆಯೋ, ಅಲ್ಲಿ ಅನಗತ್ಯ ಬಿರುಗಾಳಿ (ತೂಫಾನ್) ಎಬ್ಬಿಸುವ ಅಗತ್ಯವೇ ಇರುವುದಿಲ್ಲ” ಎಂದು ಪ್ರಧಾನಿ ಮೋದಿ ಮಾರ್ಮಿಕವಾಗಿ ನುಡಿದರು.

ರಾಹುಲ್ ಗಾಂಧಿಗೆ ಪರೋಕ್ಷ ಲೇವಡಿ
ಕಳೆದ ಒಂದು ತಿಂಗಳಲ್ಲಿ ಭಾರತವು ಜಾಗತಿಕವಾಗಿ ಮತ್ತು ಬಾಹ್ಯಾಕಾಶ ರಂಗದಲ್ಲಿ ಸಾಧಿಸಿದ ಪ್ರಮುಖ ಮೈಲಿಗಲ್ಲುಗಳನ್ನು ಪ್ರಧಾನಿ ಹೆಮ್ಮೆಯಿಂದ ಸ್ಮರಿಸಿದರು. “ಕಳೆದ ವರ್ಷದ ಅಧಿವೇಶನದ ಮುನ್ನ ಭಾರತೀಯ ಪ್ರಜೆಯೊಬ್ಬರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ್ದರು. ಈಗ ಭಾರತದ ಹೆಮ್ಮೆಯ ಯುವ ಸ್ಟಾರ್ಟ್‌ಅಪ್ ಕಂಪನಿಯಾದ ’ಸ್ಕೈರೂಟ್ ಏರೋಸ್ಪೇಸ್’ ಬಾಹ್ಯಾಕಾಶ ಕ್ಷೇತ್ರದಲ್ಲಿ ಜಗತ್ತೇ ಬೆರಗಾಗುವಂತಹ ಐತಿಹಾಸಿಕ ಸಾಧನೆ ಮಾಡಿದೆ” ಎಂದು ಶ್ಲಾಘಿಸಿದರು.

ಮುಂದುವರಿದು ಮಾತನಾಡಿದ ಅವರು, “ಈ ಇಡೀ ಸ್ಕೈರೂಟ್ ತಂಡದ ವಿಜ್ಞಾನಿಗಳು ಮತ್ತು ಉದ್ಯಮಿಗಳ ಸರಾಸರಿ ವಯಸ್ಸು ಕೇವಲ ೨೮ ವರ್ಷಗಳು. ದೇಶದ ಯುವಶಕ್ತಿಯ ಸಾಮರ್ಥ್ಯಕ್ಕೆ ಇದು ಸಾಕ್ಷಿ. ನಾನಿಲ್ಲಿ ಯಾವುದೇ ೫೬ ವರ್ಷದ ಯುವಕನ ಬಗ್ಗೆ ಮಾತನಾಡುತ್ತಿಲ್ಲ” ಎಂದು ಹೇಳುವ ಮೂಲಕ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (ವಯಸ್ಸು ೫೬) ಅವರ ಹೆಸರನ್ನು ಪ್ರಸ್ತಾಪಿಸದೆಯೇ ಪರೋಕ್ಷವಾಗಿ ಟಾಂಗ್ ನೀಡಿದರು.

ಇಂದಿನಿಂದ ಆರಂಭವಾಗಿ ಆಗಸ್ಟ್ ೧೩ ರವರೆಗೆ ಸಾಗಲಿರುವ ಈ ಮಳೆಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ದೇಶದ ಆರ್ಥಿಕತೆ, ಶಿಕ್ಷಣ, ನ್ಯಾಯಾಂಗ ಮತ್ತು ಉದ್ಯಮ ರಂಗದಲ್ಲಿ ದೂಗಾಡುತ್ತಿರುವ ಪ್ರಮುಖ ಕಾನೂನು ಸುಧಾರಣೆಗಳಿಗೆ ಅಂಗೀಕಾರ ಪಡೆಯಲು ಕರಡು ವಿಧೇಯಕಗಳನ್ನು ಮಂಡಿಸುತ್ತಿದೆ.