Home ಜಿಲ್ಲೆ ಬೆಂಗಳೂರು ಅಂಬೇಡ್ಕರ್ ಅವರ ದೂರ ದೃಷ್ಟಿ ದೇಶದ ಪ್ರಗತಿ ಪೂರಕ

ಅಂಬೇಡ್ಕರ್ ಅವರ ದೂರ ದೃಷ್ಟಿ ದೇಶದ ಪ್ರಗತಿ ಪೂರಕ

ಕೆಂಗೇರಿ,ಜು.೧೪: ಆಧುನಿಕ ಭಾರತದ ಪ್ರಗತಿಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ ದೂರ ದೃಷ್ಟಿ, ಸಮಾಜಮುಖಿ ಚಿಂತನೆ ಮಹತ್ವದ ಪಾತ್ರವಹಿಸಿವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ ) ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಬಣ್ಣಿಸಿದರು.


ಕೆಂಗೇರಿ ಉಪನಗರ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಬೆಂಗಳೂರು ನಗರ ಜಿಲ್ಲಾ ಸಮಿತಿ ವತಿಯಿಂದ ಆಯೋಜಿಸಿದ್ದ ಡಾ. ಬಿಆರ್ ಅಂಬೇಡ್ಕರ್ ಅವರ ವಿಚಾರಧಾರೆ ಕುರಿತು ಅರಿವು ಕಾರ್ಯಕ್ರಮ ಮತ್ತು ಸರ್ವ ಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಯುವ ಸಮೂಹ ಮಾದಕ ಸೇವನೆಯ ವ್ಯಸನಿಗಳಾಗಿ ಜೀವನದ ಅಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳುತ್ತಿರುವುದು ಖೇದಕರ ಸಂಗತಿಯಾಗಿದೆ, ಬದಲಿಗೆ ಅಂಬೇಡ್ಕರ್ ಅವರ ತತ್ವ, ಸಿದ್ಧಾಂತ, ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಕಾರ್ಯನಿರ್ವಹಿ ಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಿದೆ ಎಂದರು. ಶಿಕ್ಷಣ,ಸಂಘಟನೆ, ಹೋರಾಟದ ಮೂಲಕ ಸಮಾಜದಲ್ಲಿ ಬೇ ರೂರಿರುವ ಮೌಡ್ಯ, ಅಸಮಾನತೆ, ಜಾತಿ ಪದ್ಧತಿಯನ್ನು ಹೋಗಲಾಡಿಸಲು ದೃಢ ಸಂಕಲ್ಪ ಮಾಡಬೇಕೆಂದು ಕರೆ ನೀಡಿದರು.


ಸೂಲಿಕೆರೆ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಎಸ್. ಆರ್.ಮೋಹನ್ ಕುಮಾರ್ ಮಾತನಾಡಿ ಶೋಷಿತ ಸಮುದಾಯದ ಏಳಿಗೆಗಾಗಿ ಅಂಬೇಡ್ಕರ್ ಅವರು ಜೀವನವನ್ನು ಮುಡಿಪಾಗಿಟ್ಟು ಕಾರ್ಯನಿರ್ವಹಿಸಿದ ಮಾರ್ಗ ನಮ್ಮೆಲ್ಲರಿಗೂ ಮಾದರಿಯಾಗಿದೆ ಎಂದರು. ಅಸಮಾನತೆ, ಅವಮಾನವನ್ನು ಮೆಟ್ಟಿ ನಿಂತು ವಿಶ್ವದ ಅಗ್ರಗಣ್ಯ ಮಹಾಜ್ಞಾನಿ ಎಂಬ ಬಿರುದು ಪಡೆದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದರು.


ವಳಗೇರಹಳ್ಳಿ ವಸತಿ ಸಮುಚ್ಚಯ ನಿವಾಸಿಗಳ ಒಕ್ಕೂಟದ ಅಧ್ಯಕ್ಷ ಎನ್. ಕದರಪ್ಪ ಮಾತನಾಡಿ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳ್ಳುವಲ್ಲಿ ಸಹಕಾರಿಯಾಗಿದೆ ಎಂದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಮಾನ ಹಕ್ಕುಗಳನ್ನು ನೀಡಿರುವ ಅವರ ಸಂವಿಧಾನ ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದಾಗಿದೆ ಎಂದು ಬಣ್ಣಿಸಿದರು.


ಕರ್ನಾಟಕ ದಲಿತ ಸಂಘ ಸಮಿತಿ ( ಅಂಬೇಡ್ಕರ್ ವಾದ ) ಜಿಲ್ಲಾ ಸಮಿತಿ ಅಧ್ಯಕ್ಷ ವರ್ತೂರು ರವಿಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ವಿಸಿಟಿಂಗ್ ಕಾರ್ಡ್ ಹಾಗೂ ತೋರಿಕೆಗಾಗಿ ಸಂಘಟನೆಗೆ ಸೇರದೆ ಅಸಹಾಯಕರು, ನೊಂದವರು ಶೋಷಿತರ ಪರವಾಗಿ ಹೋರಾಟ ಮಾಡುವ ಮೂಲಕ ನ್ಯಾಯ ದೊರಕಿಸಿಕೊಡಲು ಶ್ರಮಿಸಬೇಕೆಂದು ಕರೆ ನೀಡಿದರು.


ರಾಜ್ಯ ಸಮಿತಿ ಸದಸ್ಯ ಮಣಿಪಾಲ್ ರಾಜಪ್ಪ, ರಾಜ್ಯ ಮಹಿಳಾ ಸಂಚಾಲಕಿ ನಿರ್ಮಲ ,ಬೆಂಗಳೂರು ನಗರ ಜಿಲ್ಲಾ ಸಂಘಟನಾ ಸಂಚಾಲಕರಾದ ಡಿ ಬಾಲಯ್ಯ, ಗೋವಿಂದ್ ಕುಮಾರ್ ಗುಂಜೂರು , ಎಸ್. ಬಾಲಕೃಷ್ಣ,. ಧನಲಕ್ಷ್ಮಿ,ಚಂದ್ರಮ್ಮ, ಖಜಾಂಚಿ ತಿಮ್ಮರಾಜು ಕೊತ್ತನೂರು ದಿಣ್ಣೆ, ಯಾಸ್ಮಿನ್ ಮತ್ತಿತರರು ಉಪಸ್ಥಿತರಿದ್ದರು ಇದೇ ವೇಳೆ ಬೆಂಗಳೂರು ದಕ್ಷಿಣ ತಾಲೂಕು ಸಮಿತಿಯ ವಿವಿಧ ಘಟಕಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.