
ಪುತ್ತೂರು: ಪ್ರಾಕೃತಿಕವಾಗಿ ದೊರೆಯುವ ಹಣ್ಣುಗಳು ಹಾಗೂ ಸಸ್ಯಗಳನ್ನೊಳಗೊಂಡ ಪುತ್ತೂರು ಹಬ್ಬವೆಂಬುವುದು ಪ್ರಕೃತಿಯ ಹಬ್ಬವಾಗಿ ಪರಿವರ್ತಿತಗೊಂಡಿದೆ. ಧರ್ಮಕ್ಕೆ ಸೀಮಿತವಾಗದೆ ಎಲ್ಲಾ ಧರ್ಮದವರನ್ನೂ ಸೇರಿಸಿಕೊಂಡು ಮಾಡಿರುವ ಈ ಹಬ್ಬದಲ್ಲಿ ಧಾರ್ಮಿಕ ಸಾಮರಸ್ಯವೂ ಅಡಗಿದೆ. ಪರೋಪಕಾರ ಧರ್ಮದ ತಿರುಳೇ ಈ ಪ್ರಕೃತಿ. ಇದು ಗುರುವಾಗಿ ನಮಗೆ ಪ್ರೇರಣೆ ನೀಡುತ್ತದೆ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಪುತ್ತೂರು ವಾರಿಯರ್ಸ್ ಮತ್ತು ಸುದ್ದಿ ಅರಿವು ಕೇಂದ್ರ ಇದರ ಜಂಟಿ ಆಶ್ರಯದಲ್ಲಿ ಸ್ಪೂರ್ತಿ ಕ್ಯಾಟರಿಂಗ್ ಸರ್ವೀಸ್ ಮತ್ತು ಈವೆಂಟ್ ಆರ್ಗನೈಸರ್ಸ್ ಇವರ ಸಹಯೋಗದಲ್ಲಿ ನಾಲ್ಕು ದಿನಗಳ ಕಾಲ ಕಿಲ್ಲೆ ಮೈದಾನದಲ್ಲಿ ನಡೆಯಲಿರುವ ‘ಪುತ್ತೂರ ಹಬ್ಬ ಉದ್ಘಾಟಿಸಿ ಮಾತನಾಡಿದರು.
ಮಾಡನ್ನೂರು ಜುಮ್ಮಾ ಮಸೀದಿಯ ಖತೀಬ್ ಎಸ್.ಬಿ ದಾರಿಮಿ ಅವರು ಮಾತನಾಡಿ, ಧರ್ಮ ಮಾನವನಿಗೆ ಇಳಿತು ಮಾಡಲು ಇರುವಂತದ್ದಾಗಿದೆ. ಧರ್ಮಗಳ ಟೀಕೆ, ಧರ್ಮದ ನಿಷೇಧದ ಹೇಳಿಕೆಗಳು ಯಾವತ್ತೂ ಸರಿಯಲ್ಲ. ಹಿಂದು-ಮುಸ್ಲಿಂ ಎಂದು ಹೊಡೆದಾಡಿಕೊಂಡರೆ ದೇಶಕ್ಕೆ ಪ್ರಗತಿಗೆ ಮಾರಕ. ಸಾಮಾಜಿಕ ಜಾಲತಾಣಗಳ ಮೂಲಕ ಗಲಭೆಗಳಿಗೆ ಪ್ರೇರಣೆ ನೀಡುವ ಚಟುವಟಕೆಗಳಿಗೆ ಪೊಲೀಸರು ನಿಯಂತ್ರಣ ತರಬೇಕಾಗಿದೆ. ತಪ್ಪು ಮಾಡುವವರು ಎಲ್ಲಾ ಕಡೆಯಲ್ಲೂ ಇರುತ್ತಾರೆ. ನಾವು ಮಾತ್ರ ಒಳ್ಳೆಯವರು ಎಂಬ ಚಿಂತನೆ ಸರಿಯಲ್ಲ. ಎಲ್ಲಾ ಧರ್ಮದವರ ಒಗ್ಗೂಡುವಿಕೆಯಿಂದ ಆಯೋಜನೆಯಾದ ಪುತ್ತೂರು ಹಬ್ಬ ಮಾದರಿ ಕಾರ್ಯಕ್ರಮ ಎಂದರು.
ಪುತ್ತೂರು ವಾರಿಯರ್ಸ್ ಅಧ್ಯಕ್ಷ ಗಿರೀಶ್ ರೈ ಅವರು ಮಾತನಾಡಿ, ಎರಡು ತಿಂಗಳ ಹಿಂದೆ ನಾಲ್ಕು ಮಂದಿ ಸೇರಿಕೊಂಡು ಹೊಟೇಲೊಂದರಲ್ಲಿ ಚಾ ಕುಡಿಯುವ ಸಮಯದಲ್ಲಿ ಹಣ್ಣುಗಳ ಮೇಳ ಮಾಡುವ ಯೋಚನೆ ಹುಟ್ಟಿತು. ಅದೇ ಇಂದು ದೊಡ್ಡ ಹಬ್ಬವಾಗಿ ಆಯೋಜನೆಗೊಂಡಿದೆ. ಇದಕ್ಕೆ ಹಲವು ಮಂದಿ ಸಹಕಾರ, ಮಾರ್ಗದರ್ಶನ ನೀಡಿದ್ದಾರೆ. ಹಬ್ಬದಲ್ಲಿ ೮೦ಕ್ಕೂ ಅಧಿಕ ವ್ಯಾಪಾರ, ಆಹಾರ ಮಳಿಗೆಗಳನ್ನು ಆಯೋಜನೆ ಮಾಡಲಾಗಿದೆ ಎಂದು ಹೇಳಿದರು. ಮಾಯಿದೆ ದೇವುಸ್ ಚರ್ಚ್ ಸಹಾಯಕ ಧರ್ಮಗುರು ಮರ್ವಿನ್ ಪ್ರವೀಣ್ ಶುಭ ಹಾರೈಸಿದರು.
ಪುತ್ತೂರು ವಾರಿಯರ್ಸ್ನ ರಜಾಕ್ ಬಪ್ಪಳಿಗೆ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಿಂಚನಾ ಹೆಗ್ಡೆ ಪ್ರಾರ್ಥಿಸಿದರು. ಪುತ್ತೂರು ವಾರಿಯರ್ಸ್ನ ಸದಸ್ಯರಾದ ಪ್ರಸಾದ್ ರೈ, ಶರೀಫ್ ಬಲ್ನಾಡು, ಶರೂನ್ ಸಿಕ್ವೆರಾ, ವಸಂತ, ಸಿರಿಲ್ ರೋಡ್ರಗಸ್, ಜ್ಞಾನೇಶ್ ಆಚಾರ್ಯ, ದಾಮೋದರ ಕಬಕ, ವಜ್ರಮಾತಾ ಮಹಿಳಾ ಮಂಡಳಿ ನಯನಾ ರೈ ಉಪಸ್ಥಿತರಿದ್ದರು.
೭೦ಕ್ಕೂ ಅಧಿಕ ಮಳಿಗೆಗಳು:
ವಿವಿಧ ಜಾತಿಯ ಹಣ್ಣು, ಹೂವಿನ ಗಿಡ, ಅಲಂಕಾರಿಕ ಹೂವಿನ ಗಿಡ, ಹಲಸು, ವಿವಿಧ ತಳಿಯ ಮಾವು, ಹಲಸಿನ ಹಣ್ಣುಗಳು ಹಾಗೂ ನೇರಳೆ, ಡ್ರಾಗನ್ಫ್ರುಟ್, ರಂಬೂಟನ್ ಸೇರಿದಂತೆ ವಿವಿಧ ಜಾತಿಯ ಹಣ್ಣುಗಳು, ವಿವಿಧ ಗೃಹ ಉತ್ಪನ್ನಗಳು, ತೂಕದ ಯಂತ್ರಗಳು, ಮನೆ ಬಳಕೆಯ ಸಾಮಾಗ್ರಿಗಳು, ಫುಡ್ ಪ್ರಾಡಕ್ಟ್ಗಳು, ಸಾವಯವ ಐಸ್ ಕ್ರೀಂ, ಕೃಷಿ ಯಂತ್ರೋಪಕರಣಗಳು, ಕೃಷಿ ಉಪಯೋಗ ಸಾಮಾಗ್ರಿಗಳು, ಸಾವಯವ ಮಸಾಲೆ ಹುಡಿಗಳು, ಪ್ಲಾಸ್ಟಿಕ್ ಸಾಮಾಗ್ರಿಗಳು, ಪುಸ್ತಕ ಮಳಿಗೆ, ಫ್ಯಾನ್ಸಿ ಸಾಮಾಗ್ರಿ, ಖಾದಿ, ಕೈಮಗ್ಗದ ಬಟ್ಟೆಗಳು, ಬಾಡಿ ಮಸಾಜ್, ಅಲ್ಯೂಮಿನಿಯಂ ಏಣಿ, ನೋವಿನ ಎಣ್ಣೆ, ಹರ್ಬಲ್ ಉತ್ಪನ್ನಗಳು, ತರಕಾರಿ ಬೀಜಗಳ, ಮಳೆಕೊಯ್ಲು, ವಿವಿಧ ಖಾದ್ಯಗಳ ಆಹಾರ ಮಳಿಗೆಗಳಿವೆ. ಪುತ್ತೂರ ಹಬ್ಬದಲ್ಲಿ ವಿಶೇಷ ಆಕರ್ಷಣೆಯಾಗಿ ಮಕ್ಕಳಿಗೆ ವಿಶೇಷ ಪ್ಲೇಯಿಂಗ್ ಮತ್ತು ಫನ್ಝೋನ್ನ್ನು ಆಯೋಜಿಸಲಾಗಿದ್ದು ವಿವಿಧ ಆಟೋಪಕರಣಗಳು, ಮನರಂಜನಾ ಚಟುವಟಿಕೆಗಳು ಹಾಗೂ ಮಕ್ಕಳಿಗೆ ಸಂತಸ ನೀಡುವ ವಿನೂತನ ಆಟಗಳನ್ನು ಆಯೋಜಿಸಲಾಗಿದೆ.
























