
ಬೆಳ್ತಂಗಡಿ: ಉತ್ತಮ ಗುಣಮಟ್ಟದ ಅಡಿಕೆಯ ಉಪಯೋಗದಿಂದ ಆರೋಗ್ಯಕ್ಕೆ ಯಾವುದೇ ಹಾನಿ ಉಂಟಾಗದು. ಅಡಿಕೆ ಆರೋಗ್ಯಕ್ಕೆ ಉತ್ತಮವಾಗಿದ್ದು ಇದಕ್ಕೆ ರಾಸಾಯನಿಕಗಳನ್ನು ಬೆರೆಸಿದಾಗ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಕ್ಯಾಂಪ್ಕೋದ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಹೇಳಿದರು.
ಅವರು ಗುರುವಾರ ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನ ವಠಾರದಲ್ಲಿ ಜರಗಿದ ಅಡಿಕೆ ತೋಟ ನಿರ್ವಹಣೆ ಬಗ್ಗೆ ಕೃಷಿಕ ಸದಸ್ಯರೊಂದಿಗೆ ಕ್ಯಾಂಪ್ಕೋ ಸಹಕಾರದಲ್ಲಿ ನಡೆದ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕೃಷಿಕರು ಒಂದೇ ಬೆಳೆಯನ್ನು ನಂಬದೇ ಮಿಶ್ರ ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ಉತ್ತಮ. ಅಡಿಕೆ ಬಗ್ಗೆ ಷಡ್ಯಂತ್ರ ನಡೆಯುತ್ತಿರುವುದು ಗಮನಕ್ಕೆ ಬರುತ್ತಿದ್ದು ಇದರ ಬಗ್ಗೆ ಕ್ಯಾಂಪ್ಕೋ, ಅಡಕೆ ಮಾರುಕಟ್ಟೆ ನಿರ್ವಹಿಸುತ್ತಿರುವ ಇತರ ಸಂಸ್ಥೆಗಳು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿವೆ. ಕಾಲದ ಬದಲಾವಣೆ ಹಾಗೂ ಹವಾಮಾನ ವೈಪರೀತ್ಯದಿಂದ ಅಡಿಕೆಯ ಗುಣಮಟ್ಟ ಕುಸಿಯುತ್ತಿರುವುದು ಕಂಡುಬರುತ್ತಿದೆ. ಈ ಬಗ್ಗೆ ಕೃಷಿಕರು ಹೆಚ್ಚಿನ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ ಎಂದರು.
ಕ್ಯಾಂಪ್ಕೋದ ಕೃಷಿ ವಿಭಾಗದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಎನ್. ಆರ್. ಅಡಕೆ ತೋಟ ನಿರ್ವಹಣೆ ಕುರಿತು, ಡಿಜಿಎಂ ಗೋವಿಂದ ಭಟ್ ಅಡಕೆ ಮಾರುಕಟ್ಟೆ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಕೃಷಿಕ ಸದಸ್ಯರು ಸಂವಾದದಲ್ಲಿ ಭಾಗವಹಿಸಿದರು.
ಮುಂಡಾಜೆ ಪ್ಯಾಕ್ಸ್ ಕೆ. ಪ್ರಕಾಶ ನಾರಾಯಣ್, ಉಪಾಧ್ಯಕ್ಷ ರಾಘವ ಗೌಡ ಕೆ.,ಸಿಇಒ ಪ್ರಸನ್ನ ಪರಾಂಜಪೆ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.
























