Home ಜಿಲ್ಲೆ ವನ ಮಹೋತ್ಸವ ಆಚರಣೆ

ವನ ಮಹೋತ್ಸವ ಆಚರಣೆ

ಸಂಜೆವಾಣಿ ವಾರ್ತೆ,
ಜಮಖಂಡಿ, ಜೂ.೧೪: ತಾಲೂಕು ಆಡಳಿತ ಸೌಧ ಆವರಣದಲ್ಲಿ ಜಿಲ್ಲಾ ದಸ್ತೂ ಬರಹಗಾರರ ಕ್ಷೇಮಾಭಿವೃದ್ಧಿ ಸಂಘ ಜಮಖಂಡಿ ಹಾಗೂ ಲಯನ್ಸ್ ಕ್ಲಬ್ ಜಮಖಂಡಿಯವರ ಸಂಯುಕ್ತ ಆಶ್ರಯದಲ್ಲಿ ವನ ಮಹೋತ್ಸವವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ದಸ್ತೂ ಬರಹಗಾರರು ಹಾಗೂ ಅವರ ಸಹಾಯಕರು ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಿದರು. ಹಸಿರು ಪರಿಸರ ನಿರ್ಮಾಣ, ಪರಿಸರ ಸಮತೋಲನ ಕಾಪಾಡುವುದು ಹಾಗೂ ಮರಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಮೋಹನ್ ಸಬರದ, ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇಂದಿನ ದಿನಗಳಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು ಅದನ್ನು ಪೋಷಿಸುವ ಸಂಕಲ್ಪ ಮಾಡಬೇಕು. ಮರಗಳು ಮಾನವ ಜೀವನದ ಅವಿಭಾಜ್ಯ ಅಂಗವಾಗಿದ್ದು, ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ದಸ್ತೂ ಬರಹಗಾರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಸದಸ್ಯರು, ಲಯನ್ಸ್ ಕ್ಲಬ್ ಸದಸ್ಯರು ಹಾಗೂ ಸಹಾಯಕರು ಭಾಗವಹಿಸಿ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು. ವನ ಮಹೋತ್ಸವ ಅಂಗವಾಗಿ ನೆಡಲಾದ ಸಸಿಗಳನ್ನು ಸಂರಕ್ಷಿಸುವ ಸಂಕಲ್ಪವನ್ನೂ ಕೈಗೊಳ್ಳಲಾಯಿತು.