
ಕನಕಪುರ/ಬೆಂಗಳೂರು:ಜೂ೭:ನಾನು ಮುಖ್ಯಮಂತ್ರಿಯಾಗಿದ್ದೇನೆ ಎನ್ನುವುದಕ್ಕಿಂತ ಮೊದಲು , ನಿಮ್ಮ ಮನೆ ಮಗ. ನಾನು ನಿಮ್ಮ ಸೇವಕ ಜೀವನದಲ್ಲಿ ನಾವು ಮಾಡುವ ಪ್ರಯತ್ನಗಳು ಕೈಕೊಡಬಹುದು ಆದರೆ ಭಗವಂತನ ಕೃಪೆ ಇದ್ದರೆ , ಜನರ ಅಶೀರ್ವಾದವಿದ್ದರೇ ನಮ್ಮ ಫಲನೀಡಲಿದೆ, ನಾನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಲು ಸಾಧ್ಯವಾಗಿದೆ. ನಿಮ್ಮ ಸಮಸ್ಯೆ ಪರಿಹಾರಕ್ಕೆ ನಾನು ಸದಾ ಸಿದ್ಧ ಎಂದು ಮುಖ್ಯಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಡಿ.ಕೆ. ಶಿವಕುಮಾರ್ ಸ್ವಕ್ಷೇತ್ರವಾದ ಕನಕಪುರ ಹಾಗೂ ನೂತನವಾಗಿ ಘೋಷಣೆಯಾಗಿರುವ ‘ಬೆಂಗಳೂರು ದಕ್ಷಿಣ ಜಿಲ್ಲೆ’ಯ ಹಾರೋಹಳ್ಳಿಗೆ ಪ್ರಥಮ ಬಾರಿಗೆ ಭೇಟಿ ನೀಡಿ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.
ಸಿಎಂ ಆದ ಬಳಿಕ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ತಮ್ಮ ನೆಚ್ಚಿನ ನಾಯಕನನ್ನು ಬರಮಾಡಿಕೊಳ್ಳಲು ತಾಲೂಕಿನಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಅಭಿಮಾನಿಗಳು ಹಾಗೂ ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರು ಡಿಕೆಶಿರಿಗೆ ಭರ್ಜರಿ ಸ್ವಾಗತ ಕೋರಿದರು.
ಕನಕಪುರಕ್ಕೆ ತೆರಳುವ ಮುನ್ನ ಸಿಎಂ ಡಿ.ಕೆ. ಶಿವಕುಮಾರ್ ಅವರು ’ನಮ್ಮ ಮೆಟ್ರೋ’ದಲ್ಲಿ ಸಾಮಾನ್ಯ ಸಾರ್ವಜನಿಕರೊಂದಿಗೆ ಪ್ರಯಾಣ ಬೆಳೆಸಿದರು. ಈ ಕುರಿತು ’ಎಕ್ಸ್’ (ಟ್ವಿಟರ್) ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ಅವರು, “ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವ ಬೆಂಗಳೂರಿನ ನಾಗರಿಕರ ಮುಖದಲ್ಲಿನ ನೆಮ್ಮದಿಯನ್ನು ಕಂಡಾಗ ಸುರಕ್ಷಿತ, ಜನಸ್ನೇಹಿ ಹಾಗೂ ಕೈಗೆಟುಕುವ ಸಾರ್ವಜನಿಕ ಸಾರಿಗೆ ನಮ್ಮ ಜನತೆಗೆ ಎಷ್ಟು ಮುಖ್ಯ ಎಂಬುದು ಮತ್ತೊಮ್ಮೆ ಮನವರಿಕೆಯಾಯಿತು. ಬೆಂಗಳೂರು ನಮ್ಮೆಲ್ಲರ ಹೆಮ್ಮೆ,” ಎಂದು ಬರೆದುಕೊಂಡಿದ್ದಾರೆ.
ಹಾಗೂ ಜಿರೋ ಟ್ರಾಫಿಕ್ನಿಂದ ಜನಸಾಮನ್ಯರಿಗೆ ಆಗುವ ತೊಂದರೆ ತಪ್ಪಿಸಲು ಮುಖ್ಯಮಂತ್ರಿಗಳು ವಿಧಾನಸೌದದಿಂದ ರೇಷ್ಮೆ ಕೇಂದರದವರೆಗೆ ಮೆಟ್ರೋದಲ್ಲಿ ಪ್ರಯಾಣಿಸಿ ಗಮನ ಸೆಳೆದರು. ಈ ಮೊದಲು ಸಾರ್ವಜನಿಕವಾಗಿ ಸೆಲ್ಫಿ ಎಂದರೆ ಸಿಟ್ಟಾಗುತ್ತಿದ್ದ ಡಿಕೆಶಿಯವರು ಮೆಟ್ರೋದಲ್ಲಿ ಬಾಲಕಿಯರು ಹಾಗೂ ಯುವಕ ಯುವತಿಯರೊಂದಿಗೆ ಹಸ್ತಲಾಘವ ಮಾಡಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಮಹಿಳೆಯರು ಹಾಗೂ ಇತರೆ ಪ್ರಯಾಣಿಕರೊಂದಿಗೆ ನಗುತ್ತಾ ಮಾತಾನಾಡಿದ್ದು ಕಂಡುಬಂದಿತು. ರೇಷ್ಮೆ ಸಂಸ್ಥೆ ನಿಲ್ದಾಣದಲ್ಲಿ ಇಳಿದು ನಂತರ ಕಾರಿನಲ್ಲಿ ಕನಕಪುರಕ್ಕೆ ತೆರಳಿದರು.
ಮೆಣಸಿನಕಾಯಿ-ಬೆಳ್ಳುಳ್ಳಿ ಬೃಹತ್ ಹಾರ, ಹೂಮಳೆ
ಸ್ವಕ್ಷೇತ್ರ ಪ್ರವಾಸದ ಭಾಗವಾಗಿ ಮುಖ್ಯಮಂತ್ರಿಗಳು ಮೊದಲು ಕಗ್ಗಲಿಪುರ ಹಾಗೂ ಹಾರೋಹಳ್ಳಿಗೆ ಆಗಮಿಸಿದರು. ಸಿಎಂ ವಾಹನ ಸರಣಿ ಗಡಿ ಪ್ರವೇಶಿಸುತ್ತಿದ್ದಂತೆ ಪಟಾಕಿ ಸಿಡಿಸಿ, ಜಯಘೋಷಗಳೊಂದಿಗೆ ಬರಮಾಡಿಕೊಳ್ಳಲಾಯಿತು. ಹಾರೋಹಳ್ಳಿ ಸರ್ಕಲ್ನಲ್ಲಿ ಬೃಹತ್ ಕಟೌಟ್ಗಳು ಹಾಗೂ ಪಕ್ಷದ ಬಾವುಟಗಳು ರಾರಾಜಿಸಿದವು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಸಹೋದರ ಹಾಗೂ ಮಾಜಿ ಸಂಸದ ಡಿಕೆ ಸುರೇಶ್ ಮುಖ್ಯಮಂತ್ರಿಗಳಿಗೆ ಸಾಥ್ ನೀಡಿದರು.
ಜೆಸಿಬಿಗಳ ಮೂಲಕ ಟನ್ಗಟ್ಟಲೆ ಹೂವುಗಳನ್ನು ಸಿಎಂ ಮೇಲೆ ಎರಚಿ ಹೂಮಳೆ ಸುರಿಸಲಾಯಿತು. ಮಹಿಳೆಯರು ಪೂರ್ಣಕುಂಭ ಹಾಗೂ ಆರತಿಯೊಂದಿಗೆ ಸ್ವಾಗತಿಸಿದರು. ಇದೇ ವೇಳೆ ಮುಖ್ಯಮಂತ್ರಿಯವರಿಗೆ ದೃಷ್ಟಿ ತಾಗದಿರಲಿ ಎಂಬ ಉದ್ದೇಶದಿಂದ ಹಸಿ ಮೆಣಸಿನಕಾಯಿ, ಒಣ ಮೆಣಸಿನಕಾಯಿ ಹಾಗೂ ಬೆಳ್ಳುಳ್ಳಿಯಿಂದ ತಯಾರಿಸಲಾಗಿದ್ದ ಬೃಹತ್ ಹಾರವನ್ನು ಕ್ರೇನ್ ಮೂಲಕ ಅರ್ಪಿಸಿದ್ದು ಎಲ್ಲರ ಗಮನ ಸೆಳೆಯಿತು. ತಮಟೆ, ಡೊಳ್ಳು, ನಗಾರಿ, ಹುಲಿವೇಷ ಹಾಗೂ ಪೂಜಾ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ರಂಗು ತುಂಬಿದವು.
ಸ್ಥಳೀಯ ಶಾಸಕ ಇಕ್ಬಾಲ್ ಹುಸೇನ್ ಕುರಿತು ಮಾತನಾಡಿದ ಸಿಎಂ, “ಇಕ್ಬಾಲ್ ಹುಸೇನ್ಗೆ ಸ್ವಲ್ಪ ಬಾಯಿ ಚಪಲ ಜಾಸ್ತಿ. ಇದೆಲ್ಲಾ ಆಗುವುದಕ್ಕಿಂತ ಮುಂಚೆ ಆತ ತುಂಬಾ ಮಾತನಾಡಿದ್ದ. ಆದರೆ, ನನ್ನ ಮೇಲೆ ಅಪಾರ ವಿಶ್ವಾಸವಿಟ್ಟು ನೀವು ಆತನನ್ನು ಚುನಾವಣೆಯಲ್ಲಿ ಗೆಲ್ಲಿಸಿ, ಸೇವೆ ಮಾಡಲು ಉತ್ತಮ ಅವಕಾಶ ಮಾಡಿಕೊಟ್ಟಿದ್ದೀರಿ. ನಿಮ್ಮ ಶಾಸಕ ಸೋಮಶೇಖರ್ ಹಾಗೂ ಇಕ್ಬಾಲ್ ಇಬ್ಬರೂ ನನ್ನ ಜೊತೆಗಿದ್ದಾರೆ,” ಎಂದರು.
*ಕನಕಪುರಕ್ಕೆ ಪ್ರಮುಖ ಕೊಡುಗೆಗಳು
ಈ ಭಾಗವನ್ನು ‘ಬೆಂಗಳೂರು ದಕ್ಷಿಣ ಜಿಲ್ಲೆ’ ಎಂದು ಅಧಿಕೃತವಾಗಿ ಘೋಷಣೆ ಮಾಡಿರುವುದು ಐತಿಹಾಸಿಕ ನಿರ್ಧಾರ ಎಂದ ಸಿಎಂ, ಇದರಿಂದಾಗಿ ಈ ಭಾಗದ ಜನರ ಭೂಮಿಯ ಮೌಲ್ಯ ಗಣನೀಯವಾಗಿ ಹೆಚ್ಚಾಗಲಿದ್ದು, ಆರ್ಥಿಕವಾಗಿ ದೊಡ್ಡ ಮಟ್ಟದ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಿದರು.
ಕನಕಪುರದಲ್ಲಿ ಶೀಘ್ರದಲ್ಲೇ ಸುಸಜ್ಜಿತ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಪ್ರಕಟಿಸಿದರು. ಇದರಿಂದ ಸ್ಥಳೀಯರಲ್ಲದೆ, ನೆರೆಯ ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗದ ಜನರಿಗೂ ಆರೋಗ್ಯ ಮತ್ತು ಶಿಕ್ಷಣದ ದೃಷ್ಟಿಯಿಂದ ಭಾರಿ ಅನುಕೂಲವಾಗಲಿದೆ ಎಂದರು.
ನಮ್ಮ ಭಾಗದ ಯುವಕರು ಉದ್ಯೋಗ ಅಥವಾ ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರು ನಗರಕ್ಕೆ ವಲಸೆ ಹೋಗುವುದನ್ನು ತಪ್ಪಿಸುವುದು ನಮ್ಮ ಮುಖ್ಯ ಉದ್ದೇಶವಾಗಿದ್ದು, ಕ್ಷೇತ್ರದಲ್ಲೇ ಉನ್ನತ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಮುಖ್ಯಮಂತ್ರಿಯವರ ಪ್ರವಾಸದ ಹಿನ್ನೆಲೆಯಲ್ಲಿ ಹಾರೋಹಳ್ಳಿ ಹಾಗೂ ಕನಕಪುರದಲ್ಲಿ ಬಾಂಬ್ ಸ್ಕ್ವಾಡ್ ಸೇರಿದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ದಿನಪೂರ್ತಿ ಕ್ಷೇತ್ರದಲ್ಲಿ ಸಂಚರಿಸಲಿರುವ ಸಿಎಂ ಪ್ರವಾಸವು ಇಂದು ರಾತ್ರಿ ೮ ಗಂಟೆಗೆ ಕನಕಪುರ ಪಟ್ಟಣದ ಚನ್ನಬಸಪ್ಪ ವೃತ್ತದಲ್ಲಿ ಸಮಾರೋಪಗೊಂಡಿತು.





























