Home ಜಿಲ್ಲೆ ಹೊಸ ವಿನ್ಯಾಸಕ್ಕೆ ಆದ್ಯತೆ ನೀಡಿ: ಮುಂಡ್ರಿಗಿ ನಾಗರಾಜ್

ಹೊಸ ವಿನ್ಯಾಸಕ್ಕೆ ಆದ್ಯತೆ ನೀಡಿ: ಮುಂಡ್ರಿಗಿ ನಾಗರಾಜ್

(ಸಂಜೆವಾಣಿ ವಾರ್ತೆ)

ಬಳ್ಳಾರಿ; ಇಂದು ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಬೆಂಗಳೂರಿನ ಉಳ್ಳಾಲ ಉಪನಗರದಲ್ಲಿರುವ ಕರ್ನಾಟಕ ಚರ್ಮ ಮತ್ತು ಫ್ಯಾಷನ್ ತಾಂತ್ರಿಕ ಸಂಸ್ಥೆಯಲ್ಲಿ ರಾಜ್ಯ ಮಟ್ಟದ ಚರ್ಮ ಪಾದರಕ್ಷೆ ತಯಾರಿಕಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ್ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ, ಕರ್ನಾಟಕ ಚರ್ಮ ಮತ್ತು ಫ್ಯಾಷನ್ ತಾಂತ್ರಿಕ ಸಂಸ್ಥೆಯ ನಿರ್ದೇಶಕರಾದ ಸಿದ್ದಲಿಂಗಪ್ಪ ಪೂಜಾರ್, ಲಿಡ್ಕರ್ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಕೆ.ಎಂ ವಸುಂಧರಾ ಮುಂತಾದವರು ಉಪಸ್ಥಿತರಿದ್ದರು.

ಕ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಂಡರಗಿ ನಾಗರಾಜ್, ಲಿಡ್ಕರ್ ಸಂಸ್ಥೆಯು ಚರ್ಮಕುಶಲ ಕರ್ಮಿಗಳ ಏಳಿಗೆಗಾಗಿ ಹಲವಾರು ವಿಭಿನ್ನ ಯೋಜನೆಗಳನ್ನು ರೂಪಿಸುತ್ತಿದ್ದು, ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಚರ್ಮ ಪಾದರಕ್ಷೆ ತಯಾರಿಕಾ ಸ್ಪರ್ಧೆ ಹಮ್ಮಿಕೊಂಡಿದ್ದು ಇದು ಚರ್ಮ ಕುಶಲಕರ್ಮಿಗಳಲ್ಲಿ ಅಡಗಿರುವ ವಿಭಿನ್ನ ಶೈಲಿಯ ಕೌಶಲ್ಯವನ್ನು ಗುರುತಿಸುವಲ್ಲಿ ಮಹತ್ತರ ಸ್ಥಾನ ಪಡೆದುಕೊಳ್ಳುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಸಂಸ್ಥೆಯ ವತಿಯಿಂದ ಬಹುಮಾನ ಮತ್ತು ಪ್ರೋತ್ಸಾಹಧನ ಸಿಗಲಿದ್ದು, ಕುಶಲಕರ್ಮಿಗಳು ನೂತನ ಶೈಲಿಯ ವಿನ್ಯಾಸಗಳನ್ನು ತಯಾರಿಸಲು ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಮುಂಬರುವ ದಿನಗಳಲ್ಲಿ ಈ ಕಾರ್ಯಕ್ರಮವನ್ನು ಮತ್ತುಷ್ಟು ದೊಡ್ಡ ಮಟ್ಟದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು ಹಾಗೂ ಇದೇ ಸಮಯದಲ್ಲಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದ ಲಿಡ್ಕರ್ ಸಂಸ್ಥೆಯ ಎಲ್ಲಾ ಅಧಿಕಾರಿ ವರ್ಗದವರನ್ನು ಶ್ಲಾಘಿಸಿದರು.