
ಕಲಬುರಗಿ,ಜೂ.6-ನೌಕರಿ ಕೊಡಿಸುವುದಾಗಿ ಹೇಳಿ ನಂಬಿಸಿ ವಂಚಿಸುತ್ತಿದ್ದ ಇಬ್ಬರು ಅಂತರರಾಜ್ಯ ವಂಚಕರನ್ನು ರಾಘವೇಂದ್ರ ನಗರ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ರಾಜ್ಯದ ಶರಣ ಜಿಲ್ಲೆಯ ಕೊರಿಪಾಕರ್ ಗೋವಿಂದ ಗ್ರಾಮದ ಪ್ರೇಮಶಾಮಕುಮಾರ ತಂದೆ ಮೋಹನಸಿಂಗ್ (32) ಮತ್ತು ಬಿಹಾರದ ಬನಸಿದಿಲಾದ ಗಣೇಶಕುಮಾರ ಸಿಂಗ್ ತಂದೆ ಜಗನ್ನಾಥ ಸಿಂಗ್ ಪ್ರಸಾದ್ ಎಂಬುವವರನ್ನು ಬಂಧಿಸಿ 4 ಮೊಬೈಲ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ ಎಟಿಎಂ ಕಾರ್ಡ್‍ಗಳನ್ನು ಜಪ್ತಿ ಮಾಡಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಚಿಕನ್ ವೆಸ್ಟೇಜ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ನಗರದ ಆಜಾದಪೂರ ರಸ್ತೆಯ ಅಶರಫ್ ಸತ್ತಾರ್ ಎಂಬುವವರು ಚಿಕನ್ ವೆಸ್ಟೇಜ್ ಕಳುಹಿಸಲು ಕರೆ ಮಾಡಬೇಕಿದ್ದ ನಂಬರ್ ಬದಲಾಗಿ ತಪ್ಪಾಗಿ ಬೇರೆ ನಂಬರ್‍ಗೆ ಕರೆ ಮಾಡಿದ್ದಾರೆ. ನಂತರ ಅಶರಫ್ ಅವರು ನಂಬರ್ ತಪ್ಪಾಗಿ ಕರೆ ಮಾಡಲಾಗಿದೆ ಎಂದು ಹೇಳಿದರು ಕೇಳದೆ ಕರೆ ಸ್ವೀಕರಿಸಿದವರು ರೈಲ್ವೆ, ಪೋಸ್ಟ್ ಆಫೀಸ್ ಹಾಗೂ ಪೊಲೀಸ್ ಇಲಾಖೆಯಲ್ಲಿ ಕರ್ನಾಟಕ, ಬಿಹಾರ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಸರಕಾರಿ ನೌಕರಿ ಕೊಡಿಸಲು 5 ಲಕ್ಷ ರೂಪಾಯಿ ತೆಗೆದುಕೊಂಡು ನೌಕರಿ ಕೊಡಿಸುವುದಾಗಿ ಮತ್ತು ನೀವು ಒಬ್ಬ ಅಭ್ಯರ್ಥಿ ಕೊಟ್ಟರೆ 1 ಲಕ್ಷ ರೂಪಾಯಿ ಕಮಿಷನ್ ಕೊಡುವುದಾಗಿ ಹೇಳಿ ಪದೇ ಪದೇ ಕರೆ ಮಾಡುತ್ತಿದ್ದರಿಂದ ಅನುಮಾನ ಬಂದು ಅವರು ಕರೆ ಮಾಡಿದವರ ವಿರುದ್ಧ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಆರೋಪಿಗಳ ಪತ್ತೆಗೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಅವರ ಮಾರ್ಗದರ್ಶನದಲ್ಲಿ ಉಪ ಪೊಲೀಸ್ ಆಯುಕ್ತರಾದ ಶಾಲೂ, ಪ್ರವೀಣ್ ಹೆಚ್.ನಾಯಕ್, ಸಹಾಯಕ ಪೊಲೀಸ್ ಆಯುಕ್ತ ಶರಣಬಸಪ್ಪ ಸುಬೇದಾರ ಅವರ ಮಾರ್ಗದರ್ಶನದಲ್ಲಿ ಆರ್.ಜಿ.ನಗರ ಪಿಐ ವಾಜೀದ್ ಪಟೇಲ್ ಅವರ ನೇತೃತ್ವದಲ್ಲಿ ಎಎಸ್‍ಐ ಮಲ್ಲಿಕಾರ್ಜುನ ಜಾನೆ, ಸಿಬ್ಬಂದಿಗಳಾದ ಮಲ್ಲನಗೌಡ, ಉಮೇಶ, ಶರಣಬಸವ, ಬಸವರಾಜ, ಪ್ರಶಾಂತ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಬಿಹಾರ ಮೂಲದ ಪ್ರೇಮಶಾಮಕುಮಾರ ಹಾಗೂ ಗಣೇಶಕುಮಾರ ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ವಂಚಕರನ್ನು ಪತ್ತೆ ಹಚ್ಚಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್.ಡಿ.ಅವರು ಶ್ಲಾಘಿಸಿದ್ದಾರೆ.
ನಿರುದ್ಯೋಗಿ ಯುವಕ, ಯುವತಿಯರು ಮತ್ತು ವಿದ್ಯಾರ್ಥಿಗಳ ಪಾಲಕರು ಈ ರೀತಿ ವಂಚಸಿ ಮೋಸ ಮಾಡುತ್ತಿರುವವರ ಬಗ್ಗೆ ಜಾಗೃತರಾಗಿರಬೇಕು ಮತ್ತು ಇಂತಹ ಅನುಮಾನಾಸ್ಪದ ವ್ಯಕ್ತಿಗಳು ಕಂಡಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದ್ದಾರೆ.


























