Home ಜಿಲ್ಲೆ ಮಂಗಳೂರು ಮಳೆ: ಕರಾವಳಿಗೆ ಆರೆಂಜ್ ಅಲರ್ಟ್

ಮಳೆ: ಕರಾವಳಿಗೆ ಆರೆಂಜ್ ಅಲರ್ಟ್

ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉತ್ತರ ಒಳನಾಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಜೂನ್ ೪ ರಂದು ವ್ಯಾಪಕವಾದ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಜೂನ್ ೫ ರಿಂದ ಜೂ. ೧೦ ರವರೆಗೆ ಮಳೆಯ ತೀವ್ರತೆ ಗಮನಾರ್ಹವಾಗಿ ಹೆಚ್ಚಾಗಲಿದ್ದು, ಕರಾವಳಿ ಭಾಗದಲ್ಲಿ ವ್ಯಾಪಕ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಮುನ್ಸೂಚನೆಯ ಸಂಪೂರ್ಣ ಅವಧಿಯಲ್ಲಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಲ್ಲಲ್ಲಿ ವ್ಯಾಪಕವಾದ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಮಲೆನಾಡು ಜಿಲ್ಲೆಗಳಲ್ಲಿ ಜೂನ್ ೯ ರವರೆಗೆ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
ಮಾನ್ಸೂನ್‌ನ ಉತ್ತರ ಮಿತಿಯು ಮತ್ತಷ್ಟು ಪ್ರಗತಿ ಸಾಧಿಸಿದ್ದು, ಅರೇಬಿಯನ್ ಸಮುದ್ರದ ಹೆಚ್ಚಿನ ಭಾಗಗಳು, ಕರಾವಳಿ ಕರ್ನಾಟಕ, ದಕ್ಷಿಣ ಒಳನಾಡಿನ ಒಂದು ಸಣ್ಣ ಭಾಗ, ದಕ್ಷಿಣ ತಮಿಳುನಾಡಿನ ಕೆಲವು ಭಾಗಗಳಿಗೆ ಮುಂದುವರಿಯುತ್ತಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಐಎಂಡಿ ನಿರ್ದೇಶಕಿ ನೀತಾ ಕೆ ಗೋಪಾಲ್ ಅವರು, ‘ನೈಋತ್ಯ ಮಾನ್ಸೂನ್ ಕೇರಳಕ್ಕೆ ಆಗಮಿಸಿದೆ; ಎಲ್ ನಿನೊ ಬಲಗೊಳ್ಳುವುದರಿಂದ ಈ ವರ್ಷದ ಭಾರತೀಯ ಬೇಸಿಗೆ ಮಾನ್ಸೂನ್ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ನಿರೀಕ್ಷೆಯಿದೆ” ಎಂದು ಹೇಳಿದರು.