
ಬೆಂಗಳೂರು,ಜೂ.೩-ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಸಂಜೆ ಪ್ರಮಾಣವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ನಗರ ಲೋಕಭವನ,ವಿಧಾನಸೌಧ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಇದಲ್ಲದೇ ನಗರದ ಹಲವೆಡೆ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು,ಸಮಾರಂಭದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಸಮಾರಂಭದ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಸುಮಾರು ೩,೫೦೦ಕ್ಕೂ ಹೆಚ್ಚು ಪೊಲೀಸರು,೧೩೦೦ ಸಂಚಾರ ಪೊಲೀಸರು ಸೇರಿ ೪,೮೦೦ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಭದ್ರತಾ ವ್ಯವಸ್ಥೆಯ ಬಗ್ಗೆ ನಗರ ಪೊಲೀಸ್ ಕಮೀಷನರ್ ಸೀಮಾಂತ್ ಕುಮಾರ್ ಸಿಂಗ್ ನಿಗಾ ವಹಿಸಿದ್ದು,ಅವರೊಂದಿಗೆ ಓರ್ವ ಹೆಚ್ಚುವರಿ ಪೊಲೀಸ್ ಆಯುಕ್ತ,ಮೂವರು ಜಂಟಿ ಪೊಲೀಸ್ ಆಯುಕ್ತರು, ೯ ಡಿಸಿಪಿಗಳು, ೨೫ ಎಸಿಪಿಗಳು, ೬೦ ಇನ್ಸ್‌ಪೆಕ್ಟರ್‌ಗಳು, ೧೬೦ ಪಿಎಸ್‌ಐಗಳು ಹಾಗೂ ಕೆಎಸ್‌ಆರ್‌ಪಿ ತುಕಡಿಗಳು ಭದ್ರತಾ ವ್ಯವಸ್ಥೆಯ ಜವಾಬ್ದಾರಿ ಹೊತ್ತಿದ್ದಾರೆ.
ವಿಧ್ವಂಸಕ ಕೃತ್ಯಗಳನ್ನ ತಡೆಯುವ ಉದ್ದೇಶದಿಂದ ಡಿಸಿಪಿ ವಿವಿಐಪಿ ಭದ್ರತಾ ವಿಭಾಗದ ಸಿಬ್ಬಂದಿ ವಿಶೇಷ ತಪಾಸಣೆ ನಡೆಸಲಿದ್ದಾರೆ. ಲೋಕಭವನದ ಮೆಟ್ಟಿಲುಗಳು, ವಿಧಾನಸೌಧ ಸುತ್ತಮುತ್ತ ಹಾಗೂ ಪ್ರವೇಶ ದ್ವಾರಗಳಲ್ಲಿ ಶ್ವಾನದಳ ಮತ್ತು ಅತ್ಯಾಧುನಿಕ ತಪಾಸಣಾ ಉಪಕರಣಗಳನ್ನು ಬಳಸಲಾಗುತ್ತಿದೆ.
ಕಾರ್ಯಕ್ರಮ ಹಿನ್ನೆಲೆ ಲೋಕಭವನ ಸುತ್ತಮುತ್ತ ವಾಹನ ಸಂಚಾರ ನಿರ್ಬಂಧಿಸಿ ಪರ್ಯಾಯ ಮಾರ್ಗ ಬಳಸುವಂತೆ ಸಂಚಾರ ಪೊಲೀಸರಿಂದ ಪ್ರಕಟಣೆ ಹೊರಡಿಸಲಾಗಿದೆ.
ದೆಹಲಿ ಸೇರಿದಂತೆ ಹಲವು ರಾಜ್ಯಗಳಿಂದ ಗಣ್ಯರು ಹಾಗೂ ಅತಿಗಣ್ಯರು ಆಗಮನ ಹಿನ್ನೆಲೆಯಲ್ಲಿ ಅವರ ಭದ್ರತೆಗಾಗಿ ಸೂಕ್ತ ಪೊಲೀಸರನ್ನ ನಿಯೋಜಿಸಲಾಗಿದೆ.
ಪಾಸ್ ಇದ್ದವರಿಗಷ್ಟೇ ಲೋಕಭವನ ಪ್ರವೇಶಿಸಬಹುದಾಗಿದೆ. ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ ನೀಡಿದ ಸೂಚನೆಗಳನ್ನ ಪಾಲಿಸಿ ಅದರಂತೆ ಅಗತ್ಯ ಕಡೆಗಳಲ್ಲಿ ಪೊಲೀಸರನ್ನ ಭದ್ರತೆಗಾಗಿ ನೇಮಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಭದ್ರತಾಲೋಪ ಆಗದಂತೆ ಎಚ್ಚರ ವಹಿಸಲಾಗಿದ್ದು, ಲೋಕಭವನಕ್ಕೆ ಧಾವಿಸಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗದ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದರು.
ವಿಧಾನಸೌಧ, ಲೋಕಭವನ ಸುತ್ತಮುತ್ತ ಜನರ ಜಮಾವಣೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಅಗತ್ಯ ಅನುಸಾರ ಪೊಲೀಸರನ್ನ ಭದ್ರತೆಗೆ ನಿಯೋಜಿಸಲಾಗಿದೆ. ಕಿರಿದಾದ ಹಾಗೂ ಹೆಚ್ಚು ಜನ ಸೇರುವ ಕಡೆಗಳಲ್ಲಿ ಬ್ಯಾರಿಕೇಡ್ ಗಳನ್ನು ಹಾಕಲಾಗಿದೆ.
ನಗರದ ಎಲ್ಲಾ ಡಿಸಿಪಿಗಳು, ಎಲ್ಲೆಲ್ಲಿ ಕಾರ್ಯ ನಿರ್ವಹಿಸಬೇಕು? ಎಂಬುದರ ಚರ್ಚೆ ನಡೆಸಲಾಗಿದೆ. ಎಲ್ಲೆಡೆ ಫೆಕ್ಸ್, ಬ್ಯಾನರ್ ಗಳ ಅಬ್ಬರದಡಿ. ಕೆ.ಶಿವಕುಮಾರ್ ಮುಖ್ಯಮಂತ್ರಿ ಪ್ರಮಾಣವಚನ ಹಿನ್ನೆಲೆಯಲ್ಲಿ ಲೋಕಭವನ, ವಿಧಾನಸೌಧ, ರೇಸ್ ಕೋರ್ಸ್ ರಸ್ತೆ, ಚಾಲುಕ್ಯ ರಸ್ತೆ, ಓಲ್ಡ್ ಏರ್ ಪೋರ್ಟ್ ರಸ್ತೆ ಸೇರಿದಂತೆ ಹಲವೆಡೆ ಫ್ಲೆಕ್ಸ್, ಬ್ಯಾನರ್‌ಗಳನ್ನ ಹಾಕಲಾಗಿದೆ.
೪ ಸಾವಿರ ಪೊಲೀಸ್ ಭದ್ರತೆ:
ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಹಾಗೂ ಭದ್ರತಾ ಲೋಪವಾಗದಿರಲು ಪ್ರಮಾಣವಚನ ಕಾರ್ಯಕ್ರಮಕ್ಕಾಗಿ ಸಂಚಾರ ಪೊಲೀಸರು ಒಳಗೊಂಡಂತೆ ಸುಮಾರು ೪ ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಹೆಚ್ಚುವರಿ,ಜಂಟಿ ಆಯುಕ್ತರು, ಡಿಸಿಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಭದ್ರತೆ ಜವಾಬ್ದಾರಿ ವಹಿಸಲಿದ್ದಾರೆ.
ನೋ ಫ್ಲೈಯಿಂಗ್ ಝೋನ್?:
ಪ್ರಮಾಣವಚನ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನ ಹೈಕಮಾಂಡ್ ನಾಯಕ ರಾಹುಲ್ ಗಾಂಧಿ ನಗರಕ್ಕೆ ಆಗಮನ ಹಿನ್ನೆಲೆ ನಗರ ಪೊಲೀಸ್ ಇಲಾಖೆಯು ತಾತ್ಕಾಲಿಕವಾಗಿ ನೋ ಫ್ಲೈಯಿಂಗ್ ಝೋನ್ ಎಂದು ಆದೇಶ ಹೊರಡಿಸಿದೆ.
ರಾಹುಲ್ ಗಾಂಧಿ ವಾಸ್ತವ್ಯ ಹೂಡಲಿರುವ ಶಾಂಗ್ರಿಲಾ ಹೋಟೆಲ್ ಹಾಗೂ ಕೆಪಿಸಿಸಿ ಕಚೇರಿ ಸೇರಿದಂತೆ ೧ ಕಿಲೋಮೀಟರ್ ವ್ಯಾಪ್ತಿಯಲ್ಲಿ ಡ್ರೋನ್ ಗಳು, ಸಣ್ಣ ಏರ್ ಕ್ರಾಫ್ಟ್ ಗಳ ಹಾರಾಟ ನಿಷೇಧಿಸಿ ಪೊಲೀಸ್ ಕಮೀಷನ್ ಸೀಮಂತ್ ಕುಮಾರ್ ಸಿಂಗ್ ಆದೇಶ ಹೊರಡಿಸಿದ್ದಾರೆ.
ಪ್ರತಿಭಟನೆ ಎಚ್ಚರಿಕೆ:
ಕಾರ್ಯಕ್ರಮ ನಡೆಯುವ ಸಮಯದಲ್ಲಿ ವಿವಿಧ ಸಂಘಟನೆಗಳು, ಸಂಘ ಸಂಸ್ಥೆಗಳು, ಮುಖಂಡರುಗಳು, ಗಮನ ಸೆಳೆಯಲು ನಗರಾದ್ಯಂತ ವಿವಿಧ ಕಡೆಗಳಿಂದ ಮೆರವಣಿಗೆಯಲ್ಲಿ ಬರುವವರಿದ್ದಾರೆ.
ಇಂತಹ ಮೆರವಣಿಗೆಗೆ ಅನುಮತಿ ಪಡೆದುಕೊಂಡಲ್ಲಿ, ಅಂತಹವರನ್ನು ಆಯಾ ಸರಹದ್ದಿನ ಅಧಿಕಾರಿಗಳು ತಮ್ಮ ಸಿಬ್ಬಂದಿ ಜೊತೆ ಬಂದೋಬಸ್ತ್ ಉಸ್ತುವಾರಿ ಮಾಡುವುದು.
ಯಾವುದೇ ಕಾರಣಕ್ಕೂ ಈ ಮೆರವಣಿಗೆಕಾರರು, ಪ್ರತಿಭಟನಾಕಾರರು, ಕೆ.ಆರ್. ವೃತ್ತ, ಮಹಾರಾಣಿ ವೃತ್ತ, ಬಸವೇಶ್ವರ ವೃತ್ತ, ಸಿ.ಟಿ.ಓ. ವೃತ್ತಗಳಿಂದ ಮುಂದಕ್ಕೆ ಬರದಂತೆ ಎಚ್ಚರ ವಹಿಸಲು ಕಮೀಷನರ್ ಸೂಚನೆ ನೀಡಿದ್ದಾರೆ.
























