
ಬೆಂಗಳೂರು, ಮೇ 30:ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಆಯ್ಕೆ ಆಗಿರುವ ಡಿ ಕೆ ಶಿವಕುಮಾರ್ ಅವರು ಜೂನ್ 3 ರಂದು ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಲೋಕಭವನದಲ್ಲಿ ಬುಧವಾರ ಸಂಜೆ 4.05 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಡಿ ಕೆ ಶಿವಕುಮಾರ್ ಹಾಗೂ ಅವರ ಸಂಪುಟ ಸಹೋದ್ಯೋಗಿಗಳಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೊಟ್ ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ.
ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಸಿಎಲ್ ಪಿ ನೂತನ ನಾಯಕರಾಗಿ ಆಯ್ಕೆಯಾದ ಡಿ ಕೆ ಶಿವಕುಮಾರ್ ಅವರು ಅಲ್ಲಿಂದ ನೇರವಾಗಿ ರಾಜಭವನಕ್ಕೆ ತೆರಳಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ಅನುವು ಮಾಡುವಂತೆ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ಇದಕ್ಕೆ ಪ್ರತಿಯಾಗಿ ಶಿವಕುಮಾರ್ ಹಾಗೂ ಅವರ ಸಂಪುಟದ ಸಂಭವನೀಯ ಸದಸ್ಯರಿಗೆ ಪ್ರಮಾಣ ವಚನ ಸ್ವೀಕರಿಸಲು ಅನುಮತಿ ಪತ್ರ ನೀಡಿದ್ದಾರೆ.
ಇದಕ್ಕೂ ಮುನ್ನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಐಸಿಸಿ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಡಿ.ಕೆ. ಶಿವಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೆಮ್ಮೆಯಿಂದ ಹೇಳುತ್ತೇನೆ” ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಪ್ರಕಟಿಸಿದರು.
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸೂಚಿಸಿತು. ಸಭೆಯಲ್ಲಿ ಹಂಗಾಮಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸಿದ್ದು, ಕಾಂಗ್ರೆಸ್ ಶಾಸಕಾಂಗ ಸಭೆಯು ಸರ್ವಾನುಮತದಿಂದ ಒಪ್ಪಿಕೊಂಡಿತು. ಡಾ.ಜಿ. ಪರಮೇಶ್ವರ ಅವರು ಈ ಪ್ರಸ್ತಾವನೆಯನ್ನು ಅನುಮೋದಿಸಿದರು ಎಂದು ಮಾಹಿತಿ ನೀಡಿದರು.
ಅಧಿಕಾರ ಹಸ್ತಾಂತರದಿಂದ ಕಾಂಗ್ರೆಸ್ ಪಕ್ಷಕ್ಕೆ ಸಂಕಷ್ಟ ಎದುರಾಗಲಿದೆ ಎಂದು ಅನೇಕರು ನಿರೀಕ್ಷಿಸಿದ್ದರು. ಆದರೆ ನಮ್ಮದು ಕುಟುಂಬವಿದ್ದಂತೆ. ಎಲ್ಲರೂ ಸಿದ್ದರಾಮಯ್ಯ ಅವರ ನಡೆ ಹೇಗಿರಲಿದೆ ಎಂದು ಕೇಳುತ್ತಿದ್ದರು. ಆದರೆ ಸಿದ್ದರಾಮಯ್ಯ ಅವರು ನನ್ನ ಹೃದಯದಲ್ಲಿ ಕೇವಲ ಕಾಂಗ್ರೆಸ್ ಪಕ್ಷವಿದೆ. ಕಾಂಗ್ರೆಸ್ ಹೈಕಮಾಂಡ್ ನಿರ್ಧಾರವನ್ನು ಪಾಲಿಸುತ್ತೇನೆ ಎಂದು ಉತ್ತರ ನೀಡಿದ್ದರು. ಸಿದ್ದರಾಮಯ್ಯ ಅವರು ತಮ್ಮ ನಡೆ ಮೂಲಕ ಸಾಬೀತಪಡಿಸಿದರು. ಇದು ಕಾಂಗ್ರೆಸ್ ಒಂದು ಕುಟುಂಬ ಎಂಬುದಕ್ಕೆ ಸಾಕ್ಷಿ ಎಂದು ಬಣ್ಣಿಸಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ ಅವರ 8 ವರ್ಷಗಳ ಅತ್ಯುತ್ತಮ ಸೇವೆಯನ್ನು ಶ್ಲಾಘಿಸಲಾಗಿದೆ. ಈ ನಿರ್ಣಯವನ್ನು ಸ್ವತಃ ಡಿ.ಕೆ. ಶಿವಕುಮಾರ್ ಅವರು ಮಂಡಿಸಿದರು. ಇದು ಕಾಂಗ್ರೆಸ್ ಪಕ್ಷಕ್ಕೆ ಹೆಮ್ಮೆಯ ಕ್ಷಣ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ಮಾರ್ಗದರ್ಶನದಂತೆ ಈ ಅಧಿಕಾರ ಹಸ್ತಾಂತರ ಮಾಡಲಾಗಿದೆ. ಸಿದ್ದರಾಮಯ್ಯ ಅವರ ಬೆಂಬಲದೊಂದಿಗೆ ಡಿ.ಕೆ. ಶಿವಕುಮಾರ್ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ 2028ರಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
























