
ಕೊಲ್ಲಂ,ಮೇ.30-“ಶಾಂತಿ ಎಂಬುದು ಕೇವಲ ಸಭಾಂಗಣಗಳಲ್ಲಿ ಸೃಷ್ಟಿಯಾಗುವಂಥದ್ದಲ್ಲ. ಅದು ನಮ್ಮ ಆಲೋಚನೆಗಳಲ್ಲಿ, ಮಾತುಗಳಲ್ಲಿ ಮತ್ತು ನಾವು ಪ್ರಸಾರ ಮಾಡುವ ಮಾಹಿತಿಯಲ್ಲಿ ಆರಂಭವಾಗುತ್ತದೆ” ಎಂದು ಕುಶಾಭಾವು ಠಾಕ್ರೆ ಜರ್ನಲಿಸಂಆಂಡ್ ಮಾಸ್ ಕಮ್ಯುನಿಕೇಷನ್ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪೆÇ್ರ.ಮಾನ್ಸಿಂಗ್ ಪರ್ಮಾರ್ ತಿಳಿಸಿದರು.
ಬ್ರಹ್ಮಕುಮಾರಿಸ್ ಕೊಲ್ಲಂ ಶಾಖೆಯು ಹಮ್ಮಿಕೊಂಡಿದ್ದ ಕೇರಳ ರಾಜ್ಯ ಮಟ್ಟದ ಮಾಧ್ಯಮ ವಿಚಾರಗೋಷ್ಠಿಯಲ್ಲಿ ಅವರು ಮುಖ್ಯ ಭಾಷಣ ಮಾಡುತ್ತಿದ್ದರು.
ಮಾಧ್ಯಮಗಳಿಗೆ ಅಸಾಧಾರಣವಾದ ಶಕ್ತಿಯಿದೆ. ಸಮಾಜದಲ್ಲಿ ಸೇತುವೆಗಳನ್ನು ನಿರ್ಮಿಸಲು ಮತ್ತು ಗೋಡೆಗಳನ್ನು ಎಬ್ಬಿಸಲು, ಭರವಸೆಯನ್ನು ಮೂಡಿಸಲು ಹಾಗೂ ಭಯವನ್ನು ಬಿತ್ತಲು ಅದರಿಂದ ಸಾಧ್ಯವಿದೆ. ದೇಶಗಳ ನಡುವೆ ಶಾಂತಿ ನೆಲೆಸಿದಾಗ ಮಾತ್ರ ಮಾನವಕುಲಕ್ಕೆ ಭರವಸೆ ಇರುತ್ತದೆ. ಮಾಧ್ಯಮಗಳು ಶಾಂತಿ, ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳ ಸಂದೇಶವಾಹಕರಾಗುವಂತಹ ಜಗತ್ತನ್ನು ಸೃಷ್ಟಿಸಲು ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ಅವರು ಕರೆ ನೀಡಿದರು.
“ಜಾಗತಿಕ ಶಾಂತಿ ಮತ್ತು ಸೌಹಾರ್ದತೆಯ ಅಗತ್ಯತೆ ಹಾಗೂ ಮಾಧ್ಯಮಗಳ ಪಾತ್ರ” ಎಂಬ ವಿಷಯದ ಕುರಿತು ಶುಕ್ರವಾರ ಈ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ‘ಮಲಯಾಳ ಮನೋರಮಾ’ (ಕೊಲ್ಲಂ ಆವೃತ್ತಿ) ಪತ್ರಿಕೆಯ ಅಸಿಸ್ಟೆಂಟ್ ಎಡಿಟರ್ ಡಿ. ಜಯಕೃಷ್ಣನ್ ಮಾತನಾಡಿ, “ವಿವಿಧ ಯುದ್ಧಗಳಲ್ಲಿ ಇದುವರೆಗೆ ಸುಮಾರು 55 ಮಾಧ್ಯಮ ಪ್ರತಿನಿಧಿಗಳು ಪ್ರಾಣ
ಕಳೆದುಕೊಂಡಿದ್ದಾರೆ.ಕೊಲ್ಲಂನ ಶ್ರೀನಾರಾಯಣ ಕಾಲೇಜಿನ ಜರ್ನಲಿಸಂ ಆಂಡ್ ಮಾಸ್ ಕಮ್ಯುನಿಕೇಷನ್ ವಿಭಾಗದ ಅಸಿಸ್ಟೆಂಟ್ ಪೆÇ್ರಫೆಸರ್ ಶಿವಮೋಳ್ ಎಸ್. ಮಾತನಾಡಿ, “ಮಾಧ್ಯಮಗಳಿಗೆ ಜನರನ್ನು ವಿಭಜಿಸುವ ಮತ್ತು ಒಗ್ಗೂಡಿಸುವ ಶಕ್ತಿಯಿದೆ. ಜನರನ್ನು ಒಟ್ಟಿಗೆ ತರಲು ಮಾಧ್ಯಮಗಳನ್ನು ಬಳಸಬೇಕು. ನಮಗೆ ಕಲಹ, ಸಂಘರ್ಷಗಳಿಲ್ಲದ ಶಾಂತಿಯುತ ಜೀವನದ ಅಗತ್ಯವಿದೆ. ಸಮಾಜದ ನಾಲ್ಕನೇ ಸ್ತಂಭವಾಗಿರುವ ಮಾಧ್ಯಮಗಳು ಜನರ ಆಲೋಚನಾ ಶೈಲಿಯನ್ನು ಪ್ರಭಾವಿಸುತ್ತವೆ ಮತ್ತು ಬದಲಾಯಿಸುತ್ತವೆ. ಒಂದು ಪರಿಸ್ಥಿತಿಯನ್ನು ಜನರು ನೋಡುವ ದೃಷ್ಟಿಕೋನವನ್ನೇ ಬದಲಾಯಿಸುವ ಶಕ್ತಿ ಮಾಧ್ಯಮಗಳಿಗಿದೆ” ಎಂದು
ಅಭಿಪ್ರಾಯಪಟ್ಟರು.
ಜಲಗಾಂವ್ನ ಕವಯಿತ್ರಿ ಬಹಿಣಾಬಾಯಿ ಚೌಧರಿ ಉತ್ತರ ಮಹಾರಾಷ್ಟ್ರ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಡಾ. ಸೋಮನಾಥ್ ವಾಧ್ನೇರೆ ಮಾತನಾಡಿ, ಬ್ರಹ್ಮಕುಮಾರಿಸ್ ಸಂಸ್ಥೆಯ ಮೀಡಿಯಾ ವಿಂಗ್ ಯಾವಾಗಲೂ ಶಾಂತಿ ಮಾಧ್ಯಮ ಮತ್ತು ಮೌಲ್ಯಾಧಾರಿತ ಪತ್ರಿಕೋದ್ಯಮವನ್ನು ಪೆÇ್ರೀತ್ಸಾಹಿಸುತ್ತದೆ. ಮಾಧ್ಯಮಗಳು ಕೇವಲ ಸಂವಹನ ಸಾಧನವಲ್ಲ, ಅವು ಮಾನವನ ದೃಷ್ಟಿಕೋನವನ್ನು ರೂಪಿಸುವ ಪ್ರಬಲ ಶಕ್ತಿಯಾಗಿವೆ ಎಂದರು.
ಮೌಂಟ್ ಅಬುವಿನ ಬ್ರಹ್ಮಕುಮಾರಿಸ್ ಮೀಡಿಯಾ ವಿಂಗ್ನ ರಾಷ್ಟ್ರೀಯ ಸಂಯೋಜಕ ಬಿ.ಕೆ.ಡಾ.ಶಾಂತನು ಭಾಯಿ ಅವರು ಮೀಡಿಯಾ ವಿಂಗ್ನ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು.
ಮಾಧ್ಯಮಗಳು ಕೇವಲ ಮಾಹಿತಿಯ ಮೂಲಗಳಲ್ಲ, ಅವು ಸಮಾಜದ ಆಲೋಚನೆ ಮತ್ತು ಮನೋಭಾವವನ್ನು ರೂಪಿಸುವ ಸಾಧನಗಳಾಗಿವೆ. ಕೇವಲ ಒಂದು ಕ್ಷಣದಲ್ಲಿ ಜನರ ಮನಸ್ಸಿನ ಮೇಲೆ ಪ್ರಭಾವ ಬೀರಲು
ಮಾಧ್ಯಮಗಳಿಗೆ ಸಾಧ್ಯವಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೈದರಾಬಾದ್ ಮೀಡಿಯಾ ವಿಂಗ್ನ ವೈಸ್ ಚೇರ್ಪರ್ಸನ್ ಬಿ.ಕೆ. ಸರಳಾ ದೀದಿ ಮಾತನಾಡಿ, “ಮಾಧ್ಯಮ ರಂಗದವರೆಲ್ಲರೂ ಗಣ್ಯ ವ್ಯಕ್ತಿಗಳಾಗಿದ್ದಾರೆ. ಸಮಾಜವು ಮಾಧ್ಯಮದವರನ್ನು ಪ್ರೀತಿಸುತ್ತದೆ ಮತ್ತು ನೀವು ಹೇಳುವುದನ್ನು ಅತ್ಯಂತ ಗಮನವಿಟ್ಟು ಕೇಳುತ್ತದೆ” ಎಂದರು.
ರಾಯ್ಪುರ (ಛತ್ತೀಸ್ಗಢ) ಭಾರತ್ ಎಕ್ಸ್ಪ್ರೆಸ್ ನ್ಯೂಸ್ ಚಾನೆಲ್ನ ರೆಸಿಡೆಂಟ್ ಎಡಿಟರ್ ಪ್ರಿಯಾಂಕಾ ಕೌಶಲ್ ಮತ್ತು ಜನಮಂತ್ರ ನ್ಯೂಸ್ನ ಎಡಿಟರ್-ಇನ್-ಚೀಫ್ ವಿಶಾಲ್ ಯಾದವ್ ವಿಚಾರಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಪಂಕಜ್ ದೀದಿ ಅವರು ನೆರೆದಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ರಾಜಯೋಗ ಜ್ಞಾನ ಮತ್ತು ಧ್ಯಾನದ ಅನುಭವವನ್ನು ಮಾಡಿಸಿದರು. ಬಿ.ಕೆ. ರಘುನಂದನ್ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ ಎಲ್ಲಾ ಪ್ರತಿನಿಧಿಗಳಿಗೆ ಸಂಘಟಕರು ಪ್ರಮಾಣಪತ್ರಗಳನ್ನು ವಿತರಿಸಿದರು.

























