
ಬೆಂಗಳೂರು, ಮೇ ೩೦- ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಡಿ.ಕೆ. ಶಿವಕುಮಾರ್ ಅವರ ಜತೆ ಎಷ್ಟು ಜನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೊದಲ ಹಂತದಲ್ಲಿ ಯಾರನ್ನೆಲ್ಲಾ ಸಚಿವರನ್ನಾಗಿಸಬೇಕು ಎಂಬ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಇಂದು ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ಇಂದು ಸಂಜೆ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿ ಡಿ.ಕೆ. ಶಿವಕುಮಾರ್ ಅವರನ್ನು ಆಯ್ಕೆ ಮಾಡಿದ ನಂತರ ಕೈ ವರಿಷ್ಠರು ಶಿವಕುಮಾರ್ ಜತೆ ಪ್ರಮಾಣ ವಚನ ಸ್ವೀಕರಿಸಲಿರುವ ಸಚಿವರುಗಳ ಹೆಸರುಗಳನ್ನು ಅಂತಿಮಗೊಳಿಸುವರು.
ಮೊದಲ ಹಂತದಲ್ಲಿ ಮುಖ್ಯಮಂತ್ರಿ ಶಿವಕುಮಾರ್ ಜತೆ ೮-೧೦ ಸಚಿವರ ಪ್ರಮಾಣ ವಚನ ನಡೆಯಲಿದ್ದು, ನಂತರ ೨ನೇ ಹಂತದಲ್ಲಿ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯಾಗಲಿದೆ
ಮುಖ್ಯಮಂತ್ರಿ ಪದಗ್ರಹಣ ಜತೆಗೆ ಪೂರ್ಣ ಪ್ರಮಾಣದ ಸಚಿವರುಗಳ ಪ್ರಮಾಣ ವಚನ ನಡೆಸಲು ಹೈಕಮಾಂಡ್ ಉದ್ದೇಶಿಸಿತ್ತಾದರೂ ಸಚಿವ ಸ್ಥಾನಕ್ಕೆ ಇರುವ ಪೈಪೋಟಿ ಜಾತಿವಾರು, ಪ್ರಾದೇಶಿಕವಾರು, ಆದ್ಯತೆ ಇವುಗಳನ್ನೆಲ್ಲಾ ಅಳೆದು ತೂಗಿ ಸಚಿವರ ಪಟ್ಟಿ ಅಂತಿಮಗೊಳಿಸಬೇಕಾಗಿರುವ ಅನಿರ್ವಾಯತೆ ಇರುವುದರಿಂದ ಮೊದಲ ಹಂತದಲ್ಲಿ ೮-೧೦ ಮಂದಿಯನ್ನು ಮಾತ್ರ ಸಚಿವರನ್ನಾಗಿಸಲು ಹೈಕಮಾಂಡ್ ನಿರ್ಧರಿಸಿದೆ.
ಮೊದಲ ಹಂತದಲ್ಲಿ ಯಾರನ್ನೆಲ್ಲಾ ಸಚಿವರನ್ನಾಗಿಸಬೇಕು ಎಂಬ ಬಗ್ಗೆ ಬೆಂಗಳೂರಿನಲ್ಲಿರುವ ಎಐಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಇವರುಗಳು ಶಾಸಕಾಂಗ ಪಕ್ಷದ ನಾಯಕರಾಗಲಿರುವ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಚರ್ಚಿಸಿ ಮೊದಲ ಹಂತದ ಸಚಿವರು ಪಟ್ಟಿಯನ್ನು ಇಂದು ರಾತ್ರಿಯೇ ಅಂತಿಮಗೊಳಿಸುವರು.
ಮೊದಲ ಹಂತದಲ್ಲಿ ಹಿರಿಯ ೮-೧೦ ಹಿರಿಯರು ಮಾತ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ೨ನೇ ಹಂತದಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡಲು ಹೈಕಮಾಂಡ್ ನಿರ್ಧರಿಸಿದೆ. ಹಾಗಾಗಿ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಸಾಧ್ಯವಾಗಿಲ್ಲ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜತೆ ಹಿರಿಯರಾದ ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ಈಶ್ವರ ಖಂಡ್ರೆ, ಕೆ.ಹೆಚ್. ಮುನಿಯಪ್ಪ, ಡಾ.ಜಿ. ಪರಮೇಶ್ವರ್, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಜಮೀರ್ ಅಹಮದ್ ಚಲುವರಾಯಸ್ವಾಮಿ ಇವರುಗಳು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ.
ಇಂದು ನಡೆಯುವ ಸಭೆಯಲ್ಲಿ ಈ ಪಟ್ಟಿಯನ್ನು ಅಂತಿಮಗೊಳಿಸಿ ವರಿಷ್ಠರ ಅನುಮೋದನೆ ಪಡೆಯಲಾಗುತ್ತದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಹೊಸ ಮುಖಗಳಿಗೆ ಆದ್ಯತೆ
ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ೧೫ ಅಥವಾ ೧೬ ಸಚಿವರನ್ನು ಕೈಬಿಟ್ಟು ೧೫-೧೬ ಹೊಸ ಮುಖಗಳಿಗೆ ಸಚಿವ ಸಂಪುಟದಲ್ಲಿ ಆದ್ಯತೆ ನೀಡಲು ನಿರ್ಧರಿಸಿದೆ. ಹಾಗಾಗಿ ಸಿದ್ದರಾಮಯ್ಯ ಸಂಪುಟದಲ್ಲಿದ್ದ ಹಲವು ಸಚಿವರು ಸಚಿವ ಪಟ್ಟ ಕಳೆದುಕೊಳ್ಳಲಿದ್ದಾರೆ.
ಜಾತಿವಾರು, ಪ್ರಾದೇಶಿಕತೆ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಎರಡನೇ ಹಂತದ ಸಚಿವರ ಪಟ್ಟಿಯನ್ನು ಹೈಕಮಾಂಡ್ ಅಂತಿಮಗೊಳಿಸಲಿದ್ದು, ೨ನೇ ಹಂತದ ಸಚಿವರ ಪ್ರಮಾಣ ವಚನ ಸ್ವಲ್ಪ ತಡವಾಗಬಹುದು.
ಸಚಿವ ಪಟ್ಟಕ್ಕಾಗಿ ಸುಮಾರು ೪೦ ಕ್ಕೂ ಹೆಚ್ಚು ಶಾಸಕರು ಲಾಬಿ ನಡೆಸಿದ್ದು, ಯಾರನ್ನು ಸಚಿವರನ್ನಾಗಿಸಬೇಕು ಎಂಬುದು ಹೈಕಮಾಂಡ್ಗೆ ತಲೆನೋವಾಗಿದೆ. ಹಾಗಾಗಿಯೇ ಎಲ್ಲವನ್ನು ಅಳೆದು ತೂಗಿ ಸ್ವಲ್ಪ ಸಮಯ ತೆಗೆದುಕೊಂಡು ಪೂರ್ಣ ಪ್ರಮಾಣದ ಸಚಿವ ಸಂಪುಟವನ್ನು ರಚಿಸಲು ಹೈಕಮಾಂಡ್ ನಿರ್ಧರಿಸಿದೆ.
























