Home Lead News ದೇಶದ್ರೋಹಿ ಬಂಧನ

ದೇಶದ್ರೋಹಿ ಬಂಧನ

ಪಠಾಣ್‌ಕೋಟ್,ಮೇ೨೨: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ಭಾರತೀಯ ಸೇನೆ ಹಾಗೂ ಅರೆಸೇನಾ ಪಡೆಗಳ ಚಲನವಲನದ ದೃಶ್ಯಗಳನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಏಜೆಂಟರೊಂದಿಗೆ ಹಂಚಿಕೊಳ್ಳುತ್ತಿದ್ದ ಶಂಕಿತ ದೇಶದ್ರೋಹಿಯನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.


ಬಂಧಿತ ಆರೋಪಿಯನ್ನು ಪಠಾಣ್‌ಕೋಟ್‌ನ ಚಕ್ ಧರಿವಾಲ್ ಗ್ರಾಮದ ನಿವಾಸಿ ಬಲ್ಜೀತ್ ಸಿಂಗ್ ಅಲಿಯಾಸ್ ಬಿಟ್ಟು ಎಂದು ಗುರುತಿಸಲಾಗಿದೆ. ಹೆದ್ದಾರಿ ಸೇತುವೆ ಮೇಲೆ ಪಠಾಣ್‌ಕೋಟ್-ಜಮ್ಮು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-೪೪ರ ಸುಜಾನ್‌ಪುರ ಬಳಿಯ ಸೇತುವೆಯೊಂದರ ಪಕ್ಕದ ಅಂಗಡಿಯಲ್ಲಿ ಆರೋಪಿ ಬಲ್ಜೀತ್ ಸಿಂಗ್ ಇಂಟರ್ನೆಟ್ ಆಧಾರಿತ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದನು. ಈ ಮಾರ್ಗವಾಗಿ ಸಂಚರಿಸುವ ಸೇನಾ ವಾಹನಗಳು ಮತ್ತು ಯೋಧರ ಚಲನವಲನಗಳ ಮೇಲೆ ನಿರಂತರ ನಿಗಾ ಇಡುವುದು ಇದರ ಮುಖ್ಯ ಉದ್ದೇಶವಾಗಿತ್ತು.

ಈ ಕ್ಯಾಮೆರಾದ ಲೈವ್ ಫೀಡ್ (ನೇರ ದೃಶ್ಯಾವಳಿ) ಅನ್ನು ಆತ ಪಾಕಿಸ್ತಾನ ಹಾಗೂ ವಿದೇಶಗಳಲ್ಲಿರುವ ವ್ಯಕ್ತಿಗಳಿಗೆ ರವಾನಿಸುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿ ದಲ್ಜಿಂದರ್ ಸಿಂಗ್ ಧಿಲ್ಲೋನ್ ತಿಳಿಸಿದ್ದಾರೆ. ದುಬೈನಿಂದ ಕರೆ, ೪೦ ಸಾವಿರ ಹಣ!ಪೊಲೀಸ್ ವಿಚಾರಣೆ ವೇಳೆ ಆರೋಪಿ ಬಲ್ಜೀತ್ ಸಿಂಗ್ ತನ್ನ ತಪ್ಪೊಪ್ಪಿಕೊಂಡಿದ್ದಾನೆ. ಕಳೆದ ಜನವರಿ ತಿಂಗಳಲ್ಲಿ ತಾನು ಈ ವೈಫೈ ಆಧಾರಿತ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದಾಗಿ ತಿಳಿಸಿದ್ದಾನೆ.

ಈ ಕೃತ್ಯಕ್ಕಾಗಿ ದುಬೈನಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬನಿಂದ ತನಗೆ ನಿರ್ದೇಶನಗಳು ಬರುತ್ತಿದ್ದವು ಮತ್ತು ಅದಕ್ಕಾಗಿ ತನಗೆ ೪೦,೦೦೦ ರೂಪಾಯಿ ಹಣ ಸಂದಾಯವಾಗಿತ್ತು ಎಂದು ಆತ ಹೆಳಿಕೆ ನೀಡಿದ್ದಾನೆ. ಆರೋಪಿಯಿಂದ ಸಿಸಿಟಿವಿ ಕ್ಯಾಮೆರಾ ಹಾಗೂ ವೈಫೈ ರೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ನಾಲ್ವರ ವಿರುದ್ಧ ಎಫ್‌ಐಆರ್ ದಾಖಲುಹೆದ್ದಾರಿಯಲ್ಲಿ ನಡೆಯುತ್ತಿದ್ದ ಶಂಕಿತ ಚಟುವಟಿಕೆಗಳ ಬಗ್ಗೆ ಗುಪ್ತಚರ ಇಲಾಖೆ ನೀಡಿದ ಸುಳಿವಿನ ಆಧಾರದ ಮೇಲೆ ಸುಜಾನ್‌ಪುರ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಲ್ಜೀತ್ ಸಿಂಗ್ ಜೊತೆಗೆ ವಿಕ್ರಮಜೀತ್ ಸಿಂಗ್, ಬಲ್ವಿಂದರ್ ಸಿಂಗ್ ಮತ್ತು ತರಣ್‌ಪ್ರೀತ್ ಸಿಂಗ್ ಎಂಬುವವರನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ. ಸದ್ಯ ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

ಗಡಿಯಾಚೆಗಿನ ಜಾಲ: ಇಡೀ ಪ್ರಕರಣ ಹಿಂದೆ ಪಾಕಿಸ್ತಾನದ ಐಎಸ್‌ಐ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಈ ಜಾಲಕ್ಕೆ ಧನಸಹಾಯ ಹೇಗೆ ತಲುಪುತ್ತಿತ್ತು ಮತ್ತು ಬೇರೆ ಯಾರಿಗೆಲ್ಲ ಸಂಪರ್ಕವಿತ್ತು ಎಂಬ ಬಗ್ಗೆ ತನಿಖೆ ತೀವ್ರಗೊಂಡಿದೆ. ಭಾರತೀಯ ನ್ಯಾಯ ಸಂಹಿತೆ ಹಾಗೂ ಅಧಿಕೃತ ರಹಸ್ಯಗಳ ಕಾಯ್ದೆಯಡಿ ಮೊಕದ್ದಮೆ ಹೂಡಲಾಗಿದೆ.

ಪಂಜಾಬ್‌ನಲ್ಲಿ ಹೆಚ್ಚಿದ ಹೈಟೆಕ್ ಕಣ್ಣಾವಲು: ಚೀನಾ ನಿರ್ಮಿತ ಸೋಲಾರ್ ಕ್ಯಾಮೆರಾಗಳ ಬಳಕೆ!ಕಳೆದ ಕೆಲವು ತಿಂಗಳುಗಳಿಂದ ಪಂಜಾಬ್ ಗಡಿ ಭಾಗದಲ್ಲಿ ಇಂತಹ ಹೈಟೆಕ್ ಬೇಹುಗಾರಿಕೆ ಜಾಲಗಳು ಸರಣಿ ರೂಪದಲ್ಲಿ ಪತ್ತೆಯಾಗುತ್ತಿರುವುದು ಭದ್ರತಾ ಸಂಸ್ಥೆಗಳನ್ನು ಕಳವಳಗೊಳಿಸಿದೆ. ಕಳೆದ ತಿಂಗಳಷ್ಟೇ ಪಂಜಾಬ್ ಪೊಲೀಸರು ಪಾಕಿಸ್ತಾನದ ಐಎಸ್‌ಐ ಬೆಂಬಲಿತ ಎರಡು ಪ್ರಮುಖ ಬೇಹುಗಾರಿಕಾ ಮಾಡ್ಯೂಲ್‌ಗಳನ್ನು ಧ್ವಂಸಗೊಳಿಸಿದ್ದರು.

ವೈರಿಗಳ ಹೊಸ ತಂತ್ರಜ್ಞಾನ:
ಜಲಂಧರ್ ಮತ್ತು ಕಪುರ್ತಲಾದಲ್ಲಿ ನಡೆದ ಕಾರ್ಯಾಚರಣೆ ವೇಳೆ ಚೀನಾ ನಿರ್ಮಿತ, ಸೋಲಾರ್ ಹಾಗೂ ೪ಉ ಸಿಮ್ ಕಾರ್ಡ್ ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ವಶಪಡಿಸಿಕೊಳ್ಳಲಾಗಿತ್ತು. ವೈರಿಗಳಿಗೆ ಅನುಕೂಲ: ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಈ ಬಗ್ಗೆ ಮಾತನಾಡಿ, “ಈ ಚೀನಾ ನಿರ್ಮಿತ ಕ್ಯಾಮೆರಾಗಳು ಸೋಲಾರ್ ಶಕ್ತಿ ಮತ್ತು ಸಂಪರ್ಕದ ಮೂಲಕ ಕಾರ್ಯನಿರ್ವಹಿಸುವುದರಿಂದ ಇವುಗಳಿಗೆ ಯಾವುದೇ ವೈರಿಂಗ್ ಅಥವಾ ವಿದ್ಯುತ್ ಸಂಪರ್ಕದ ಅಗತ್ಯವಿರುವುದಿಲ್ಲ. ಹೀಗಾಗಿ ಯಾರಿಗೂ ಅನುಮಾನ ಬಾರದಂತೆ ಸೇನಾ ಕಂಟೋನ್ಮೆಂಟ್ ಹಾಗೂ ಗಡಿ ಪ್ರದೇಶಗಳ ದೃಶ್ಯಗಳನ್ನು ಪಾಕಿಸ್ತಾನಕ್ಕೆ ರವಾನಿಸಲು ಇವುಗಳನ್ನು ಬಳಸಲಾಗುತ್ತಿತ್ತು” ಎಂದಿದ್ದಾರೆ.

ಡ್ರಗ್ಸ್ ಮತ್ತು ಬೇಹುಗಾರಿಕೆ ಲಿಂಕ್:
ಕಪುರ್ತಲಾದಲ್ಲಿ ಸಿಕ್ಕಿಬಿದ್ದ ಆರೋಪಿಗಳಿಗೆ ಪಾಕಿಸ್ತಾನದ ’ಫೌಜಿ’ ಎಂಬ ಹ್ಯಾಂಡ್ಲರ್ ಹಣ ನೀಡಿದ್ದನು. ಇದೇ ಜಾಲದಲ್ಲಿದ್ದ ಸಂದೀಪ್ ಸಿಂಗ್ ಎಂಬಾತ ಪಾಕಿಸ್ತಾನದಿಂದ ಡ್ರೋನ್‌ಗಳ ಮೂಲಕ ಬರುತ್ತಿದ್ದ ಹೆರಾಯಿನ್ ಡ್ರಗ್ಸ್ ಅನ್ನು ಭಾರತದಲ್ಲಿ ವಿತರಿಸುವ ಕಳ್ಳಸಾಗಣೆ ದಂಧೆಯಲ್ಲೂ ಭಾಗಿಯಾಗಿದ್ದ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.