Home Lead News ನೀಟ್ ಅಕ್ರಮ: ಕೈ ಪ್ರತಿಭಟನೆ

ನೀಟ್ ಅಕ್ರಮ: ಕೈ ಪ್ರತಿಭಟನೆ

ಬೆಂಗಳೂರು, ಮೇ ೨೧- ವೈದ್ಯಕೀಯ ಕೋರ್ಸ್‌ನ ಪ್ರವೇಶ ಪರೀಕ್ಷೆಯಾದ ನೀಟ್‌ನಲ್ಲಿ ನಡೆದಿರುವ ಅಕ್ರಮ ವಿರುದ್ಧ ಕಾಂಗ್ರೆಸ್ ಪಕ್ಷ ಬೆಂಗಳೂರಿನಲ್ಲಿಂದು ಬೃಹತ್ ಪ್ರತಿಭಟನಾ ಧರಣಿ ನಡೆಸಿ ನೀಟ್ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು.


ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ಯುವ ಕಾಂಗ್ರೆಸ್ ಹಮ್ಮಿಕೊಂಡಿದ್ದ ಈ ಪ್ರತಿಭಟನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಹಲವು ಸಚಿವರು, ಶಾಸಕರು ಸಂಸದರು, ಮುಖಂಡರು ಸೇರಿದಂತೆ ಸಾವಿರಾರು ಭಾಗಿಯಾಗಿ ನೀಟ್ ಅಕ್ರಮನ್ನು ಖಂಡಿಸಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.


ನೀಟ್ ಪರೀಕ್ಷೆಯ ಅಕ್ರಮದ ಕುರಿತು ಉನ್ನತ ಮಟ್ಟದ ಸಮಗ್ರ ಮತ್ತು ಪಾರದರ್ಶಿಕೆ ತನಿಖೆ ಆಗಬೇಕು. ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡಿದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾನಿರತ ಯುವ ಕಾಂಗ್ರೆಸ್ ನಾಯಕರು ಆಗ್ರಹಿಸಿದರು.


ನೀಟ್ ಪರೀಕ್ಷಾ ಅಕ್ರಮಕ್ಕೆ ಕೇಂದ್ರ ಸರ್ಕಾರವೇ ಹೊಣೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರದ ಮಾನವ ಸಂಪನ್ನೂಲ ಸಚಿವ ಧರ್ಮೇಂದ್ರ ಪ್ರಧಾನ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕರು ಒಕ್ಕೊರಲಿನಿಂದ ಆಗ್ರಹಿಸಿದರು.

ಈ ವರ್ಷ ದೇಶಾದ್ಯಂತ ೨೨ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದರು. ನೀಟ್ ರದ್ದುಗೊಳಿಸಿರುವುದರಿಂದ ಈ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ನೀಟ್ ರದ್ದುಗೊಳಿಸಿರುವ ನಿರ್ಧಾರ ಕೇಂದ್ರ ಸರ್ಕಾರದ ಆಡಳಿತಾತ್ಮಕ ವೈಫಲ್ಯ ಎಂದು ಕಾಂಗ್ರೆಸ್ ನಾಯಕರು ಕಿಡಿಕಾರಿದರು.
ನೀಟ್ ರದ್ದು ಮಾಡಿ ಮರು ಪರೀಕ್ಷೆ ನಡೆಸುವ ಮೂಲಕ ಕೇಂದ್ರ ಸರ್ಕಾರ ಯುವ ಜನತೆಗೆ ದ್ರೋಹ ಬಗೆದಿದೆ. ನೀಟ್ ಅಕ್ರಮಕ್ಕೆ ಕೇಂದ್ರವೇ ಹೊಣೆ ಹೊರಬೇಕು ಎಂದು ಪ್ರತಿಭಟನಾನಿರತ ಕಾಂಗ್ರೆಸ್ ನಾಯಕರು ಒತ್ತಾಯಿಸಿದರು.

ನೀಟ್ ಅಕ್ರಮದ ಆರೋಪಿಗಳ ಜತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನಂಟು ಹೊಂದಿದ್ದಾರೆ. ಅವರು ಸಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೈ ನಾಯಕರು ಆಗ್ರಹಿಸಿದರು.

ನೀಟ್ ಬೇಡ, ನಾವೇ ಪರೀಕ್ಷೆ ನಡೆಸುತ್ತೇವೆ


. ನೀಟ್ ಪರೀಕ್ಷೆಯನ್ನು ರದ್ದು ಮಾಡಿ ಮೊದಲಿನಂತೆ ಆಯಾ ರಾಜ್ಯಗಳಿಗೆ ವೈದ್ಯಕೀಯ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲು ಅವಕಾಶ ನೀಡಬೇಕು ಎಂಬ ಹಕ್ಕೋತ್ತಾಯವನ್ನು ಈ ಪ್ರತಿಭಟನೆ ಮೂಲಕ ಮಂಡಿಸಲಾಯಿತು.

ನೀಟ್ ಪರೀಕ್ಷೆಯಲ್ಲಿ ಪದೇ ಪದೇ ಅಕ್ರಮಗಳಾಗುತ್ತಿವೆ. ನೀಟ್ ಪರೀಕ್ಷೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಅಕ್ರಮಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಕೂಡಲೇ ನೀಟ್ ಪರೀಕ್ಷೆಯನ್ನು ರದ್ದು ಮಾಡಿ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪರೀಕ್ಷೆಯನ್ನು ನಡೆಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡಬೇಕು ಎಂದು ಒತ್ತಾಯಿಸಲಾಯಿತು.

ನೀಟ್ ಅಕ್ರಮಕ್ಕೆ ಕಾರಣರಾಗಿರುವ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು. ಕಾಲ ಮಿತಿಯಲ್ಲಿ ನೀಟ್ ಅಕ್ರಮದ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದರು.

ಧಿಕ್ಕಾರದ ಘೋಷಣೆ

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕರು ಮತ್ತು ಮುಖಂಡರುಗಳು ನೀಟ್ ಅಕ್ರಮಕ್ಕೆ ಕೇಂದ್ರ ಸರ್ಕಾರ ಕಾರಣ. ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬ ಬಿತ್ತಿ ಪತ್ರಗಳನ್ನು ಪ್ರದರ್ಶಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವವರೆಗೂ ಹಾಗೂ ನೀಟ್ ಹಗರಣದ ಆರೋಪಿಗಳಿಗೆ ಶಿಕ್ಷೆ ಆಗುವವರೆಗೂ ಕಾಂಗ್ರೆಸ್ ಹೋರಾಟ ಮುಂದುವರೆಸಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆ ನಂತರ ಯುವ ಕಾಂಗ್ರೆಸ್ ಕಾರ್ಯಕರ್ತರು ರಾಜಭವನ ಚಲೋ ನಡೆಸಲು ಮುಂದಾದರಾದರೂ ಅದಕ್ಕೆ ಪೊಲೀಸರು ಅವಕಾಶ ಕೊಡಲಿಲ್ಲ.
ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ದೊಡ್ಡ ಸಂಖ್ಯೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸೇರಿದ್ದು, ರಾಜ್ಯದ ಎಲ್ಲೆಡೆಯಿಂದ ಕಾರ್ಯಕರ್ತರು ಪ್ರತಿಭಟನೆಗೆ ಆಗಮಿಸಿದ್ದರು.

ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಗಮ್ ಭಂಡಾರಿ ಮಾತನಾಡಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಾವಧಿಯಲ್ಲಿ ೮೯ ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ವಿದ್ಯಾರ್ಥಿಗಳ ಸಂಕಷ್ಟವನ್ನು ಹೆಚ್ಚಿಸಿದೆ ಎಂದು ಆರೋಪಿಸಿದರು.
ಕೇಂದ್ರವು ವಿದ್ಯಾರ್ಥಿಗಳನ್ನು ನರಕಕ್ಕೆ ತಳ್ಳಿದೆ, ನಾಲ್ಕು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮಾತ್ರ ಪ್ರಶ್ನೆಪತ್ರಿಕೆ ಸೋರಿಕೆ ನಡೆಯುತ್ತಿದೆ ಎಂದು ಕಿಡಿಕಾರಿದರು.


ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಮಾತನಾಡಿ ಇಂಡಿಯನ್ ಪ್ರೀಮಿಯರ್ ಲೀಗ್ ನಂತರ, ಮೋದಿ ಆಡಳಿತದಲ್ಲಿ ನಡೆದಿರುವುದು ಇಂಡಿಯನ್ ಪೇಪರ್ ಲೀಕ್ ಎಂದು ಅವರು ವ್ಯಂಗ್ಯವಾಡಿದರು.


ರಾಜಸ್ಥಾನ ಶಿಕ್ಷಣ ಸಚಿವರ ಆಪ್ತರು ಪ್ರಶ್ನೆ ಪತ್ರಿಕೆ ಸೋರಿಕೆಯ ಹಿಂದಿದ್ದು,ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ಬಳಿಕ ಲೋಕಭವನಕ್ಕೆ ಮುತ್ತಿಗೆ ಹಾಕಲು ಹೊರಟ ಪ್ರತಿಭಟನಾಕಾರರನ್ನು ಪೊಲೀಸರು ಮಾರ್ಗ ಮಧ್ಯದಲ್ಲಿ ತಡೆದರು,ನಂತರ ಮುಖಂಡರ ನಿಯೋಗ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು


ಬಿಗಿ ಭದ್ರತೆ

ನೀಟ್ ಅಕ್ರಮದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸ್ವತಂತ್ರ ಉದ್ಯಾನವನದ ಸುತ್ತ ಬಿಗಿ ಪೊಲೀಸ್ ಕಾವಲನ್ನು ಹಾಕಲಾಗಿತ್ತು.
ಕಾಂಗ್ರೆಸ್‌ನ ಈ ಪ್ರತಿಭಟನೆಯಿಂದ ಸ್ವತಂತ್ರ ಉದ್ಯಾನವನದ ಸುತ್ತಲಿನ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು.