
ಉಡುಪಿ: ಹಿಜಾಬ್ ಕುರಿತ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿಜೆಪಿಯವರು ಏನಾದರೂ ಹೇಳಲಿ. ಹಿಜಾಬ್ ಅನ್ನು ಮುಸ್ಲಿಂ ಹೆಣ್ಣು ಮಕ್ಕಳು ಮೊದಲಿನಿಂದಲೂ ಧರಿಸುತ್ತಿದ್ದಾರೆ. ಅದರಲ್ಲಿ ತಪ್ಪೇನು ಇಲ್ಲ’ ಎಂದು ಹೇಳಿದರು.
“ಹಿಂದೂಗಳಲ್ಲಿ ಜನಿವಾರ ಧರಿಸುವುದು, ವಿಭೂತಿ ಮತ್ತು ಕುಂಕುಮ ಇಟ್ಟುಕೊಳ್ಳುವ ಸಂಪ್ರದಾಯವೂ ಇದೆ. ಗಂಡು ಮಕ್ಕಳು ಕೂಡ ಕುಂಕುಮ ಇಟ್ಟುಕೊಳ್ಳುತ್ತಾರೆ. ಯಾವುದಕ್ಕೂ ನಿರ್ಬಂಧ ಇಲ್ಲವಲ್ಲ’ ಎಂದು ಪ್ರಶ್ನಿಸಿದರು.
ಹಿಜಾಬ್ ವಿಚಾರದಲ್ಲಿ ನ್ಯಾಯಾಲಯದ ತಡೆಯಾಜ್ಞೆ ಇಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, “ನ್ಯಾಯಾಲಯದಲ್ಲಿ ಯಾವುದೇ ತಡೆಯಾಜ್ಞೆ ಇಲ್ಲ. ತಡೆಯಾಜ್ಞೆ ಇಲ್ಲದಿದ್ದರೆ ಪ್ರಕರಣ ೧೦-೨೦ ವರ್ಷವೂ ಮುಂದುವರಿಯಬಹುದು. ತಡೆಯಾಜ್ಞೆ ಇದ್ದರೆ ಮಾತ್ರ ಅದನ್ನು ಪಾಲಿಸಬೇಕು” ಎಂದರು.
ದಾವಣಗೆರೆಯಲ್ಲಿ ಮುಸ್ಲಿಂ ಸಮುದಾಯದ ಅಸಮಾಧಾನ ಮತ್ತು ಸರ್ಕಾರದ ಆದೇಶಕ್ಕೆ ಸಂಬಂಧ ಇಲ್ಲ ಎಂದು ಹೇಳಿದ ಅವರು, “ದಾವಣಗೆರೆಯಲ್ಲಿ ಮುಸ್ಲಿಮರು ನಮಗೆ ಮತ ಹಾಕಿದ್ದಾರೆ. ಕೆಲ ಮತಗಳು ಎಸ್‌ಡಿಪಿಐಗೆ ಹೋಗಿವೆ. ಈಗಲೂ ಮುಸ್ಲಿಮರು ಸಾಕಷ್ಟು ಬೆಂಬಲ ನೀಡಿದ್ದಾರೆ” ಎಂದು ಹೇಳಿದರು.
“ಯಾವ ಸಮಯದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದನ್ನು ಸರ್ಕಾರ ತೆಗೆದುಕೊಂಡಿದೆ. ಸುಳ್ಳು ಹೇಳಿ ಜನರನ್ನು ಎತ್ತಿಕಟ್ಟುವುದೇ ಬಿಜೆಪಿಯವರ ಕಾಯಕ” ಎಂದು ರಾಮಲಿಂಗಾರೆಡ್ಡಿ ಟೀಕಿಸಿದರು.


























