
ಬೆಂಗಳೂರು:ಏ.೨೯ ಬೆಂಗಳೂರಿನಲ್ಲಿ ಇಂದು ಸಂಜೆ ಸುರಿದ ಭಾರಿ ಮಳೆಯಿಂದ ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಬಿದ್ದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಎಂಟು ಮಂದಿ ದುರ್ಮರಣಕ್ಕೀಡಾದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಪೌಂಡ್ ಗೋಡೆಯ ಪಕ್ಕದಲ್ಲೇ ಬೀದಿಬದಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳು ಮತ್ತು ಮಳೆಯಿಂದ ತಪ್ಪಿಸಿಕೊಳ್ಳಲು ಆಶ್ರಯ ಪಡೆದಿದ್ದವರ ಮೇಲೆ ಸೂಕ್ತ ನಿರ್ವಹಣೆ ಇಲ್ಲದ ಹಳೆಯ ಗೋಡೆ ಮಳೆಯಿಂದಾಗಿ ಕುಸಿದು ಬಿದ್ದದ್ದೇ ಈ ದುರ್ಘಟನೆಗೆ ಕಾರಣವೆಂದು ಹೇಳಲಾಗುತ್ತಿರುವುದು ದುಃಖವನ್ನು ಮತ್ತಷ್ಟು ಹೆಚ್ಚಿಸಿದೆ. ರಾಜಧಾನಿ ಬೆಂಗಳೂರಿನಲ್ಲೇ ಈ ಪಾಡಾದರೆ ಉಳಿದ ಕಡೆ ಗತಿ ಏನು? ಎಂದು ಕೇಳಿದ್ದಾರೆ.
ಈ ಭೀಕರ ದುರ್ಘಟನೆಗೆ ಹೊಣೆ ಹೊತ್ತು ರಾಜ್ಯ ಸರ್ಕಾರ ಗಾಯಗೊಂಡವರಿಗೆ ಚಿಕಿತ್ಸೆ, ಮೃತ ಕುಟುಂಬದವರಿಗೆ ಸಾಂತ್ವನ ಮತ್ತು ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು, ಮಳೆಗೆ ಇನ್ನೊಂದು ಅವಘಡ ಸಂಭವಿಸದಂತೆ ಶಿಥಿಲ ನಿರ್ಮಾಣಗಳ ದುರಸ್ತಿ ಸೇರಿದಂತೆ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ದುರ್ಘಟನೆಯಲ್ಲಿ ಸಾವನ್ನಪ್ಪಿದವರಿಗೆ ಚಿರಶಾಂತಿ ಪ್ರಾರ್ಥಿಸುತ್ತಾ, ಪುಟ್ಟ ಮಕ್ಕಳ ಕುಟುಂಬ ಸದಸ್ಯರು ಸೇರಿದಂತೆ ಮೃತಪಟ್ಟವರ ಎಲ್ಲ ಕುಟುಂಬದವರಲ್ಲಿ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ.





















