
ಕಲಬುರಗಿ:ಏ.29: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ವತಿಯಿಂದ ಕೊಡಮಾಡಲಾಗುವ ರಾಜ್ಯ ಮಟ್ಟದ ಕಾಯಕ ಯೋಗಿ ಪ್ರಶಸ್ತಿಗೆ ಇಲ್ಲಿನ ಸಮಾಜ ಸೇವಕ ಬಸವರಾಜ ಧೂಳಾಗುಂಡಿ ಅವರು ಆಯ್ಕೆಯಾಗಿದ್ದಾರೆ ಎಂದು ಪರಿಷತ್ ನ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ಶಾಬಾದಿ, ಪ್ರಧಾನ ಕಾರ್ಯದರ್ಶಿ ಡಾ. ಶಿವರಂಜನ ಸತ್ಯಂಪೇಟೆ ತಿಳಿಸಿದ್ದಾರೆ.
ಕಲಬುರಗಿಯ ಜಿಲ್ಲೆಯ ಕಾಳಗಿ ತಾಲ್ಲೂಕಿನ ಮಂಗಲಗಿ ಮೂಲದವರಾದ ಇವರು ಎಚ್.ಕೆ. ಇ. ಸಂಸ್ಥೆಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸುಮಾರು 37 ವರ್ಷಗಳ ಕಾಲ ಸಹಾಯಕ ಬೋಧಕರಾಗಿ ಸೇವೆ ಸಲ್ಲಿಸಿದ್ದಾರೆ.
ವೈಚಾರಿಕತೆ, ವೈಜ್ಞಾನಿಕತೆಯ ವಚನ ಸಾಹಿತ್ಯ ಇವರಿಗೆ ಅಚ್ಚು ಮೆಚ್ಚು. ಲಿಂ. ಡಾ.ಬಸವರಾಜ ಮೋದಿ ಪ್ರತಿಷ್ಠಾಪಿಸಿದ ವಚನೋತ್ಸವ ಪ್ರತಿಷ್ಠಾನದ ಕಾರ್ಯದರ್ಶಿಯಾಗಿ ಮುನ್ನಡೆಸಿಕೊಂಡು ಹೊರಟಿದ್ದಾರೆ. 71ರ ಈ ಇಳಿವಯಸ್ಸಿನಲ್ಲೂ 17ರ ಹರೆಯದ ಹುಡುಗರಂತೆ ಸದಾ ಒಂದಿಲ್ಲೊಂದು ವಿಧಾಯಕ ಕಾರ್ಯಕ್ರಮಗಳಲ್ಲಿ ಸೇವೆ ಸಲ್ಲಿಸುತ್ತ ಬರುತ್ತಿದ್ದಾರೆ. ಹಿಟ್ಟಿನ ಗಿರಣಿ ಮಾಲೀಕರಾಗಿದ್ದರೂ ತಾವೇ ಸ್ವತಃ ಬೀಸುವ ಸ್ವಕಾಯಕ ಮಾಡುತ್ತಿದ್ದಾರೆ. ಇವರ ಈ ಅನುಪಮ ಸೇವೆ ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆಯಲ್ಲಿ ಮೇ. 1 ರಂದು ಕಾಯಕ ದಿನಾವರಣೆ ನಿಮಿತ್ತ
ಆಯೋಜಿಸಿರುವ ಕಾರ್ಯಕ್ರಮದಲ್ಲಿ ಇವರಿಗೆ ಕಾಯಕಯೋಗಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದ್ದಾರೆ.
ಆಹಾರ ಮತ್ತು ನಾಗರಿಕ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಉದ್ಘಾಟಿಸಲಿದ್ದಾರೆ. ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸ್ಥಳೀಯ ಶಾಸಕ ಶರತ್ ಬಚ್ಚೇಗೌಡ ಮತ್ತಿತರರು ಭಾಗವಹಿಸಲಿದ್ದಾರೆ. ಪರಿಷತ್ ರಾಷ್ಟ್ರೀಯ ಅಧ್ಯಕ್ಷ ಹುಲಿಕಲ್ ನಟರಾಜ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.






















