
ಜೇವರ್ಗಿ:ಏ.29: ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವದ ಅಂಗವಾಗಿ ಪಟ್ಟಣದ ಬುಗ್ಗಿ ಪ್ರದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ “ಭೀಮರತ್ನ ಪ್ರಶಸ್ತಿ” ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಅಂಬೇಡ್ಕರ್ ಹಾಗೂ ಗೌತಮ ಬುದ್ಧ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಪಂಚಶೀಲ ಮಂತ್ರ ಪಠಣ ಮಾಡುವ ಮೂಲಕ ವಕೀಲರ ಸಂಘದ ಜೇವರ್ಗಿ ತಾಲೂಕು ಪ್ರಧಾನ ಕಾರ್ಯದರ್ಶಿ ರಾಜಶೇಖರ ಶಿಲ್ಪಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಕಸಾಪ ಜೇವರ್ಗಿ ತಾಲೂಕು ಅಧ್ಯಕ್ಷ ಎಸ್.ಕೆ. ಬಿರಾದಾರ ಮಾತನಾಡಿ, ಅಂಬೇಡ್ಕರ್ ಅವರು ಭಾರತ ದೇಶಕ್ಕೆ ಮಹಾನ್ ಸಂವಿಧಾನವನ್ನು ನೀಡಿ ಎಲ್ಲರಿಗೂ ನ್ಯಾಯ ಒದಗಿಸುವ ಶ್ರೇಷ್ಠ ಗ್ರಂಥವನ್ನು ನೀಡಿದ್ದಾರೆ. ಅದನ್ನು ಕಾಪಾಡಿಕೊಂಡು ಸಾಗಿಸುವುದು ನಮ್ಮೆಲ್ಲರ ಕರ್ತವ್ಯವೆಂದು ಹೇಳಿದರು.
ಇದಾದ ನಂತರ ಬಿಜೆಪಿ ಯುವ ಮುಖಂಡ ನಿಂಗಣ್ಣ ರದ್ದೇವಾಡಗಿ ಮಾತನಾಡಿ, ಧ್ವನಿ ಇಲ್ಲದವರಿಗೆ ಧ್ವನಿಯಾಗಿ ನಿಂತು ಸಮಾನತೆ ಮತ್ತು ನ್ಯಾಯಕ್ಕಾಗಿ ಹೋರಾಡಿದ ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ “ಭೀಮರತ್ನ ಪ್ರಶಸ್ತಿ” ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಕೆ. ಬಿರಾದಾರ, ರಾಜಶೇಖರ ಶಿಲ್ಪಿ, ಮರೆಪ್ಪ ಬೇಗಾರ್, ನಿಂಗಣ್ಣ ರದ್ದೇವಾಡಗಿ, ರಾಜಶೇಖರಯ್ಯ ಹಿರೇಮಠ, ಸಿದ್ದಲಿಂಗ ಎಚ್. ಪೂಜಾರಿ, ಸುರೇಶ್ ಹಿರೇಮಠ, ರವಿಕುಮಾರ ಬೀರನಳ್ಳಿ ಸೇರಿದಂತೆ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.
ಅಂಬೇಡ್ಕರ್ ಅಭಿಮಾನಿಗಳಿಂದ ಅನ್ನಪ್ರಸಾದ ವಿತರಣೆ: ಕೃತಜ್ಞತೆ ಸಲ್ಲಿಕೆ
ಡಾ. ಬಿ.ಆರ್. ಅಂಬೇಡ್ಕರ್ ಅವರ ಅಭಿಮಾನಿಗಳಿಂದ ಆಯೋಜಿಸಲಾದ ಅನ್ನಪ್ರಸಾದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಹಲವರು ಸೇವಾ ಮನೋಭಾವದಿಂದ ಭಾಗವಹಿಸಿ ಸಹಕರಿಸಿದರು.
ಈ ಸಂದರ್ಭದಲ್ಲಿ ನಾಗರಾಜ್ ಜಟನಕಾರ್, ಕಾಸಿಂಷಾ, ಸುರೇಶ್ ಕುಮಾರ್ ಬಿರನಹಳ್ಳಿ, ಬಾಬುರಾವ್ ಬಿರನಹಳ್ಳಿ, ದರ್ಶನ್ ಭೋವಿ, ಶಂಕರ್ ಹರನೂರು, ಮೊಹಮ್ಮದ್ ರಫೀಕ್, ಎಂ.ಡಿ. ಅಸ್ಲಾಂ ಜೋಪದಪತಿ, ದಾವೂದ್ ತೆಲ್ವಾಲೆ, ಅಕ್ತರ್ ಪಟೇಲ್ ತೆಲ್ವಾಲೆ, ಗುರಪ್ಪ ಅಣ್ಣ ಹಾಗೂ ಸುಭಾಷ್ ಕಟ್ಟಿಮನಿ ರೆಡ್ಡೆವಾಡಗಿ ಸೇರಿದಂತೆ ಅನೇಕರು ತಮ್ಮ ಸಹಕಾರ ನೀಡಿದ್ದಾರೆ.
ಅನ್ನಪ್ರಸಾದ ವಿತರಣೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ ರವಿಕುಮಾರ ಬೀರನಳ್ಳಿ ಅವರು, ವಿಶೇಷವಾಗಿ ಮುದಕಪ್ಪ ಕುಡಚಿ ಅವರ ಸೇವೆಯನ್ನು ಪ್ರಶಂಸಿಸಿ ಅವರಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.
ಈ ರೀತಿಯ ಸೇವಾ ಕಾರ್ಯಕ್ರಮಗಳು ಸಮಾಜದಲ್ಲಿ ಏಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಹೆಚ್ಚಿಸುತ್ತವೆ ಎಂದು ರವಿಕುಮಾರ ಬೀರನಳ್ಳಿ ಹೇಳಿದರು.






















