
ಬೀದರ್:ಏ.29:ಗೋ ಸೇವೆ ಹಾಗೂ ಸಮಾಜ ಸೇವೆಯಲ್ಲಿ ಕಳೆದ ಒಂದು ದಶಕದಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವ ವಿಶ್ವ ಹಿಂದೂ ಪರಿಷತ್ ಬೀದರ್ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ ಅವರಿಗೆ ಪ್ರತಿಷ್ಠಿತ ‘ಗೋಪಾಲ ಗೌರವ’ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭಾನುಳಿಯಲ್ಲಿರುವ ಶ್ರೀರಾಮಚಂದ್ರಾಪುರ ಮಠದ ರಾಮದೇವ ಗೋಸ್ವರ್ಗದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು ಪ್ರಶಸ್ತಿ ನೀಡಿ ಆಶೀರ್ವದಿಸಿದರು.
ಮಠದ ಅಧೀನದ ಕಾಮದುಘಾ ಟ್ರಸ್ಟ್ ಹಾಗೂ ಮುಂಬೈನ ದಿನೇಶ್ ಶಹರಾ ಫೌಂಡೇಶನ್ ವತಿಯಿಂದ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿಯೊಂದಿಗೆ ರೂ.10 ಸಾವಿರ ನಗದು ಹಾಗೂ ಸ್ಮರಣಿಕೆ ಫಲಕ ನೀಡಲಾಯಿತು. ಈ ಬಾರಿ ಖ್ಯಾಮಾ ಸೇರಿದಂತೆ ನಾಲ್ವರು ಈ ಗೌರವಕ್ಕೆ ಆಯ್ಕೆಯಾಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ, ಗೋ ಸೇವೆ ಮತ್ತು ಸಮಾಜ ಸೇವೆಯಲ್ಲಿ ತೊಡಗಿರುವವರನ್ನು ಪೆÇ್ರೀತ್ಸಾಹಿಸುವುದು ಸಮಾಜದ ಕರ್ತವ್ಯವಾಗಿದ್ದು, ಬೀದರ್ ಗಡಿಭಾಗದಲ್ಲಿ ಖ್ಯಾಮಾ ಅವರು ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ವೀರಶೆಟ್ಟಿ ಖ್ಯಾಮಾ, ದೇಶದ ಧಾರ್ಮಿಕ, ಆಧ್ಯಾತ್ಮಿಕ, ಪರಿಸರ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಶ್ರೀಗಳ ಸೇವೆ ಅಪ್ರತಿಮವಾಗಿದೆ. ಭಾನುಳಿಯಲ್ಲಿ ವಿಶ್ವದಲ್ಲೇ ಅಪರೂಪವಾದ ಗೋಸ್ವರ್ಗ ನಿರ್ಮಿಸಿ ಭಾರತೀಯ ಸಂಸ್ಕøತಿ ಹಾಗೂ ಗೋ ಸಂರಕ್ಷಣೆಯ ಮಹತ್ವವನ್ನು ಸಮಾಜಕ್ಕೆ ಪರಿಚಯಿಸುತ್ತಿರುವ ಶ್ರೀಗಳ ಸೇವೆ ಅವಿಸ್ಮರಣೀಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ವೈ.ವಿ. ಕೃಷ್ಣಮೂರ್ತಿ, ಮಧು ಗೋಮತಿ, ಈಶ್ವರಿ ಭಟ್, ಹರಿಪ್ರಸಾದ ಪೆರಿಯಪ್ಪು, ಮಹೇಶ ಚಟ್ನಳ್ಳಿ, ಚಂದನ್ ಶಾಸ್ತ್ರಿ, ರಾಜೇಶ್ವರಿ ವೀರಶೆಟ್ಟಿ ಖ್ಯಾಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.






















