
ಉಡುಪಿ- ರತ್ನ ಮತ್ತು ಆಭರಣ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿಗೆ ಹೊಸ ಉತ್ತೇಜನ ನೀಡುವ ಉದ್ದೇಶದಿಂದ ಉಡುಪಿಯ ಭಾರತೀಯ ರತ್ನ ಮತ್ತು ಆಭರಣ ಸಂಸ್ಥೆ (ಐಐಜಿಜೆ)ಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವೆ, ದಕ್ಷಿಣ ಭಾರತದ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಮತ್ತು ಉದ್ಯಮಾಧಾರಿತ ಕೌಶಲ್ಯಗಳನ್ನು ಬೆಳೆಸುವಲ್ಲಿ ಐಐಜಿಜೆ ಪ್ರಮುಖ ಪಾತ್ರವಹಿಸಲಿದೆ ಎಂದು ಹೇಳಿದರು. ಕರ್ನಾಟಕ ಸೇರಿದಂತೆ ಕೇರಳ, ತಮಿಳುನಾಡು ಭಾಗಗಳ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ತರಬೇತಿ ನೀಡುವ ಮೂಲಕ ಉದ್ಯಮಶೀಲತೆಯತ್ತ ದಾರಿದೀಪವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಜಿಜೆಇಪಿಸಿ ಅಧ್ಯಕ್ಷ ಕಿರಿತ್ ಬನ್ಸಾಲಿ ಮಾತನಾಡಿ, ದೇಶದಾದ್ಯಂತ ಐಐಜಿಜೆ ಕೇಂದ್ರಗಳು ಕಳೆದ ನಾಲ್ಕು ವರ್ಷಗಳಲ್ಲಿ ೭,೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿವೆ. ರತ್ನ ಮತ್ತು ಆಭರಣ ವಲಯವು ಪ್ರಸ್ತುತ ೨೮ ಬಿಲಿಯನ್ ಡಾಲರ್ ರಫ್ತು ಮೌಲ್ಯ ಹೊಂದಿದ್ದು, ೫೦ ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿದೆ ಎಂದು ತಿಳಿಸಿದರು.
ಐಐಟಿ ಮದ್ರಾಸ್ ಜತೆ ಒಪ್ಪಂದ ಈ ವೇಳೆ ಐಐಜಿಜೆ ಮತ್ತು ಐಐಟಿ ಮದ್ರಾಸ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಪ್ರಯೋಗಾಲಯದಲ್ಲಿ ಬೆಳೆದ ವಜ್ರ ತಂತ್ರಜ್ಞಾನದಲ್ಲಿ ವಿಶೇಷ ಪ್ರಮಾಣಪತ್ರ ಕೋರ್ಸ್ ಆರಂಭಿಸುವ ಉದ್ದೇಶ ಇದಾಗಿದೆ. ಇದು ‘ಮೇಕ್ ಇನ್ ಇಂಡಿಯಾ’ ಮತ್ತು ‘ಸ್ಕಿಲ್ ಇಂಡಿಯಾ’ ಯೋಜನೆಗಳಿಗೆ ಮತ್ತಷ್ಟು ಬಲ ನೀಡಲಿದೆ.
ಕೌಶಲ್ಯಾಭಿವೃದ್ಧಿಗೆ ಒತ್ತು
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಅನುಗುಣವಾಗಿ, ತಳಮಟ್ಟದ ಕುಶಲಕರ್ಮಿಗಳಿಗೆ ತರಬೇತಿ ನೀಡುವಲ್ಲಿ ಐಐಜಿಜೆ ಮುಂದಾಗಿದೆ. ಸಂಸ್ಥೆ ಈಗಾಗಲೇ ೪೦ಕ್ಕೂ ಹೆಚ್ಚು ವಿಶೇಷ ಕೋರ್ಸ್ಗಳನ್ನು ನಡೆಸುತ್ತಿದ್ದು, ಉತ್ತಮ ಉದ್ಯೋಗಾವಕಾಶಗಳನ್ನೂ ಒದಗಿಸುತ್ತಿದೆ.
ಉಡುಪಿ ಕೇಂದ್ರದ ವೈಶಿಷ್ಟ್ಯ ೨೦೧೭ರಲ್ಲಿ ಸ್ಥಾಪಿತವಾದ ಐಐಜಿಜೆ ಉಡುಪಿ, ಆಧುನಿಕ ತರಗತಿಗಳು, ರತ್ನಶಾಸ್ತ್ರ ಮತ್ತು ಸಿಎಡಿ ಪ್ರಯೋಗಾಲಯಗಳು, ಉತ್ಪಾದನಾ ಘಟಕಗಳೊಂದಿಗೆ ಸಜ್ಜುಗೊಂಡಿದೆ. ದಕ್ಷಿಣ ಭಾರತದಲ್ಲಿ ರತ್ನ?ಆಭರಣ ಶಿಕ್ಷಣದ ಪ್ರಮುಖ ಕೇಂದ್ರವಾಗಿ ಇದು ಹೊರಹೊಮ್ಮಿದೆ.
ಹೊಸ ಶ್ರೇಷ್ಠತಾ ಕೇಂದ್ರವು ಯುವಕರು, ಕುಶಲಕರ್ಮಿಗಳು ಮತ್ತು ಉದ್ಯಮಿಗಳಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಿ, ಭಾರತದ ರತ್ನ?ಆಭರಣ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಲಿದೆ.
ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಜಿಜೆಇಪಿಸಿ ಅಧ್ಯಕ್ಷ ಕಿರಿತ್ ಬನ್ಸಾಲಿ, ಉಪಾಧ್ಯಕ್ಷ ಶೌನಕ್ ಪಾರಿಖ್, ದಕ್ಷಿಣ ವಲಯ ಅಧ್ಯಕ್ಷ ಮಹೇಂದರ್ ತಯಾಲ್ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಸಬ್ಯಸಾಚಿ ರೇ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

























