
ಜಮಖಂಡಿ :ಏ.27:ನಗರದ ಜಂಬಗಿ ರಸ್ತೆಯಲ್ಲಿ ಏಪ್ರಿಲ್ 25ರಿಂದ 26ರವರೆಗೆ ತಾಲೂಕು ಮಟ್ಟದ ಉಮುಮಿ ಇಜ್ತಮಾ ಕಾರ್ಯಕ್ರಮ ಭಕ್ತಿಭಾವದಿಂದ ಹಾಗೂ ವೈಭವದಿಂದ ಜರುಗಿತು. ಕಾರ್ಯಕ್ರಮವು ಧಾರ್ಮಿಕ ಭಾವನೆಗಳ ಸಮ್ಮಿಲನವಾಗಿದ್ದು, ಎಲ್ಲೆಡೆ ಶಾಂತಿ, ಸೌಹಾರ್ದತೆ ಮತ್ತು ಆಧ್ಯಾತ್ಮಿಕತೆಯ ವಾತಾವರಣವನ್ನು ಮೂಡಿಸಿತು.
ಕಾರ್ಯಕ್ರಮದ ಅಂಗವಾಗಿ ಬೆಳಗ್ಗಿನಿಂದಲೇ ತಾಲೂಕಿನ ವಿವಿಧ ಹಳ್ಳಿಗಳಿಂದ ಲಕ್ಷಾಂತರ ಮುಸ್ಲಿಂ ಸಮಾಜದ ಬಾಂಧವರು ಆಗಮಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯ ವೇಳೆ ಭಕ್ತರ ಭಕ್ತಿಭಾವ, ಶಿಸ್ತಿನ ನಡೆ ಹಾಗೂ ಏಕಾಗ್ರತೆ ಎಲ್ಲರ ಗಮನ ಸೆಳೆದವು. ಧಾರ್ಮಿಕ ಉಪನ್ಯಾಸಗಳು, ಕುರಾನ್ ಪಠಣ ಮತ್ತು ದುವಾಗಳ ಮೂಲಕ ಕಾರ್ಯಕ್ರಮವು ಅತ್ಯಂತ ಆತ್ಮೀಯ ಹಾಗೂ ಭಾವಪೂರ್ಣವಾಗಿ ಸಾಗಿತು.
ಈ ಸಂದರ್ಭದಲ್ಲಿ ಬೆಳಗಾವಿಯ ಮೌಲಾನಾ ಬಿಲಾಲ್ ಹಾಗೂ ಅಥಣಿಯ ಮೌಲಾನಾ ಹಿದಾಯತ್ತುಲ್ಲಾ ಅವರು ಪ್ರಾರ್ಥನೆ ನಡೆಸಿ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಸಹಬಾಳ್ವೆ ಹಾಗೂ ನೈತಿಕ ಮೌಲ್ಯಗಳ ಮಹತ್ವವನ್ನು ಪ್ರತಿಪಾದಿಸಿದರು. ಧರ್ಮದ ಮಾರ್ಗದಲ್ಲಿ ನಡೆಯುವುದರಿಂದ ಮಾನವೀಯತೆ ಬೆಳೆಯುತ್ತದೆ ಎಂಬ ಸಂದೇಶವನ್ನು ಅವರು ನೀಡಿದರು.
ಕಾರ್ಯಕ್ರಮವು ಶಿಸ್ತುಬದ್ಧವಾಗಿ ನಡೆಯುವುದರೊಂದಿಗೆ ಭಾಗವಹಿಸಿದ ಭಕ್ತರಿಗೆ ಕುಡಿಯುವ ನೀರು, ಊಟದ ವ್ಯವಸ್ಥೆ, ವಿಶ್ರಾಂತಿ, ವಾಹನ ನಿಲುಗಡೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಲಾಗಿತ್ತು. ಕಾರ್ಯಕ್ರಮದ ಯಶಸ್ಸಿಗೆ ಸ್ಥಳೀಯರು, ಸ್ವಯಂಸೇವಕರು ಹಾಗೂ ಆಯೋಜಕರು ಮಹತ್ವದ ಪಾತ್ರವಹಿಸಿದರು.






















