
ಸಂಜೆವಾಣಿ ವಾರ್ತೆ
ಸಂಡೂರು :ಏ:12 “ಉದ್ಯಮಿ, ಸಮಾಜ ಸೇವಕ ಕೆ.ಎಸ್. ಚನ್ನಬಸಪ್ಪ ಶೆಟ್ಟರ್ ಅವರು ಬಾಲ್ಯದಲ್ಲಿ ಕಡು ಬಡತನವಿದ್ದರೂ, ಕೇವಲ ಐದನೇ ತರಗತಿಯವರೆಗೆ ಓದಿದ್ದರೂ ತಮ್ಮ ಅಚಲ ನಿರ್ಧಾರ ಮತ್ತು ಪರಿಶ್ರಮದಿಂದ ಬೆಳೆದು ಇಂದು ಸಮಾಜಕ್ಕೆ ಮಾದರಿಯಾಗಿದ್ದಾರೆ” ಎಂದು ಅಖಂಡ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ನಿಷ್ಠಿ ರುದ್ರಪ್ಪ ಅವರು ನುಡಿದರು.
ಅವರು ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ನೆಹರೂ ಸಭಾಂಗಣದಲ್ಲಿ ಶುಕ್ರವಾರದಂದು ಆಯೋಜಿಸಲಾಗಿದ್ದ ಪ್ರೊ. ರವಿ ಬಿ. ಮತ್ತು ಡಾ. ಮಲ್ಲಯ್ಯ ಸಂಡೂರು ಅವರು ಸಂಪಾದಿಸಿರುವ ಕೆ.ಎಸ್. ಚನ್ನಬಸಪ್ಪ ಶೆಟ್ಟರ್ ಅವರ ‘ದುಡಿತದ ಕ್ರಿಯಾಶೀಲ ಸಾಧಕ’ ಅಭಿನಂದನಾ ಗ್ರಂಥದ ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು.
ಮುಂದುವರಿದು, ಎಷ್ಟೇ ಎತ್ತರಕ್ಕೆ ಬೆಳೆದರೂ ತಮ್ಮ ಮೂಲವನ್ನು ಮರೆಯದ ಚನ್ನಬಸಪ್ಪನವರ ವಿನಯವಂತಿಕೆ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸ್ಪಂದಿಸುವ ಅವರ ಔದಾರ್ಯವು ಇಂದಿನ ಸಮಾಜಕ್ಕೆ ಅತ್ಯಗತ್ಯವಾದ ಗುಣಗಳಾಗಿವೆ ಎಂದು ಅವರು ತಿಳಿಸಿದರು
ಕೂಡ್ಲಿಗಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೈಲೇಶ್ ಬೇವೂರು ಅವರು ಈ ಕಾರ್ಯಕ್ರಮ ಉದ್ಘಾಟಿಸಿ ಚನ್ನಬಸಪ್ಪನವರ ಬದುಕು ಇಂದಿನ ಯುವ ಪೀಳಿಗೆಗೆ ಶ್ರಮ ಮತ್ತು ಪ್ರಾಮಾಣಿಕತೆಯ ಪಠ್ಯಪುಸ್ತಕದಂತಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ. ರವಿ ಬಿ. ಅವರು ಚನ್ನಬಸಪ್ಪನವರನ್ನು ತಮ್ಮ ಅಂತರಂಗದ ಪ್ರೀತಿಯಿಂದ ಮನುಷ್ಯರನ್ನು ಸೆಳೆಯುವ ‘ಸೂಜಿಗಲ್ಲು’ ಎಂದು ಬಣ್ಣಿಸಿದರು. ಶೂನ್ಯದಿಂದ ಸಾಧನೆಯ ಶಿಖರಕ್ಕೇರಿದ ಇವರ ಬದುಕು ಇಂದಿನ ಯುವ ಪೀಳಿಗೆಗೆ ಒಂದು ಮಾದರಿಯಾಗಿದೆ ಎಂದರು.
ಕೃತಿಯ ಕುರಿತು ಮಾತನಾಡಿದ ಖನಿಜ ಸಂಸ್ಕರಣ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಎಸ್. ಎಂ. ಶಶಿಧರ ಅವರು ಚನ್ನಬಸಪ್ಪನವರು ಅಕ್ಷರಶಃ ಒಬ್ಬ ಕರ್ಮಯೋಗಿ ಎಂದು ವಿಶ್ಲೇಷಿಸಿದರು.
ಕನ್ನಡ ಅಧ್ಯಯನ ವಿಭಾಗದ ಅಧ್ಯಾಪಕರಾದ ಡಾ. ಮಲ್ಲಯ್ಯ ಸಂಡೂರು ಅವರು ಚನ್ನಬಸಪ್ಪನವರ ಬದುಕು ಶ್ರಮದ ಸಂಕೇತವಾಗಿದ್ದು, ಅವರು ಬದುಕನ್ನು ನೋಡಿಯೇ ಕಲಿತ ಒಬ್ಬ ನಿಸ್ವಾರ್ಥ ಸಮಾಜ ಸೇವಕ, ಚನ್ನಬಸಪ್ಪ ಶೆಟ್ಟರ್ ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ; ಅವರೊಂದು ಚೇತನ ಎಂದು ನುಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ಎಸ್. ಚನ್ನಬಸಪ್ಪ ಶೆಟ್ಟರ್ ಅವರು, ಬದುಕಿನ ಕಷ್ಟಗಳನ್ನು ನೋಡಿಯೇ ಎಲ್ಲವನ್ನೂ ಕಲಿತಿರುವುದಾಗಿ ಭಾವುಕರಾಗಿ ತಿಳಿಸಿದರು. ತಮಗೆ ಆತ್ಮಸಾಕ್ಷಿಗೆ ಸರಿಯಾಗಿ ನಡೆದುಕೊಳ್ಳುವುದು ಮತ್ತು ಯಾರಿಗೂ ಅನ್ಯಾಯ ಮಾಡದಿರುವುದೇ ಜೀವನದ ಮೂಲಮಂತ್ರವಾಗಿದೆ ಎಂದರು. ಮಾರುಕಟ್ಟೆಯಲ್ಲಿ ನಿಯತ್ತು ಒಂದೇ ಒಂದು ಬಾರಿ ಕೆಟ್ಟರೆ ಜೀವನವೇ ಮುಗಿದಂತೆ ಎಂದು ಕಿವಿಮಾತು ಹೇಳಿದ ಅವರು, ಯುವಜನತೆಯು ವ್ಯಸನಗಳಿಂದ ದೂರವಿದ್ದಾಗ ಮಾತ್ರ ನೆಮ್ಮದಿಯನ್ನು ಹೊಂದಲು ಸಾಧ್ಯ ಎಂದು ಮಾರ್ಮಿಕವಾಗಿ ನುಡಿದರು. ಇಂದಿನ ಈ ಗೌರವವು ಇಳಿವಯಸ್ಸಿನಲ್ಲೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ತಮಗೆ ಮತ್ತಷ್ಟು ಚೈತನ್ಯ ನೀಡಿದೆ ಎಂದು ಅವರು ಕೃತಜ್ಞತೆ ಸಲ್ಲಿಸಿದರು.
ಕ್ರೀಡಾ ಸಹಾಯಕ ನಿರ್ದೇಶಕ ಶಿವರಾಮಪ್ಪ ರಾಗಿ ಅವರು ಸ್ವಾಗತಿಸಿದರು. ಇತಿಹಾಸ ಅಧ್ಯಾಪಕ ಡಾ. ನರಸಿಂಹಮೂರ್ತಿ ನಿರೂಪಿಸಿದರು. ಕನ್ನಡ ಆಧ್ಯಾಪಕ ಶಿವಕುಮಾರ ಜಿ. ವಂದನಾರ್ಪಣೆ ಸಲ್ಲಿಸಿದರು. ಸ್ನಾತಕೋತ್ತರ ಕೇಂದ್ರದ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಗೂ ಚನ್ನಬಸಪ್ಪನವರ ಬಂಧು ಮಿತ್ರರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

























