
ಸೈದಾಪುರ:ಏ.3: ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ವಾಣಿಜ್ಯ ಸ್ಥಳಗಳಲ್ಲಿ ಗೃಹ ಬಳಕೆ ಎಲ್‍ಪಿಜಿ ಸಿಲೆಂಡರ್ ಬಳಸುವುದು ಕಾನೂನು ಬಾಹಿರ ಮತ್ತು ಅತ್ಯಂತ ಅಪಯಕಾರಿ. ಇದು ಸುರಕ್ಷತ ಮಾನದಂಡಗಳಿಗೆ ಉಲ್ಲಂಘನೆಯಾಗುತ್ತದೆ ಎಂದು ಸೈದಾಪುರ ಉಪ ತಹಸೀಲ್ದಾರ್ ಭೀಮಣ್ಣಗೌಡ ಪಾಟೀಲ್ ತಿಳಿಸಿದರು.
ಪಟ್ಟಣದಲ್ಲಿ ಅಕ್ರಮವಾಗಿ ಗೃಹ ಬಳಕೆಯ ಎಲ್‍ಪಿಜಿ ಸಿಲೆಂಡರ್ ಬಳಸುತ್ತಿದ ವಿವಿಧ ಹೋಟೆಲ್ಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಗುರುವಾರ ನಡೆಸಿದ ದಿಢೀರ್ ಕಾರ್ಯಚರಣೆಯ ನೇತೃತ್ವವಹಿಸಿ ಮಾತನಾಡಿದರು. ವಿವಿಧ ಹೋಟೆಲ್‍ಗಳಲ್ಲಿ ಗೃಹ ಬಳಕೆ ಸಿಲಿಂಡರ್ ಬಳಸುತ್ತಿರುವುದು ಪತ್ತೆಯಾಗಿದೆ. ಅವರ ವಿರುದ್ಧ ಕರ್ನಾಟಕ ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿ, 9 ಸಿಲಿಂಡರ್‍ಗಳನ್ನು ಜಪ್ತಿ ಮಾಡಲಾಗಿದೆ. ಗ್ಯಾಸ್ ಏಜೆನ್ಸಿ ಹಾಗೂ ಹೋಟೆಲ್ ಮಾಲೀಕರಿಗೆ, ವ್ಯಾಪಾರಿಗಳಿಗೆ ಈ ಮೂಲಕ ಎಚ್ಚರಿಕೆ ನೀಡಿದ್ದು, ಗೃಹ ಬಳಕೆಯ ಸಿಲಿಂಡರ್‍ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಬಾರದು ಎಂಬುದನ್ನು ತಿಳಿಸಲಾಯಿತು. ಗ್ಯಾಸ್ ಸಿಲಿಂಡರ್ಗಳ ದುರುಪಯೋಗ ಆಗದಂತೆ ಜನರಿಗೆ ಅರಿವು ಮೂಡಿಸುವ ಕೆಲಸ ಗ್ಯಾಸ್ ಏಜೆನ್ಸಿಗಳು ಮಾಡಬೇಕು ಎಂದು ತಾಕೀತು ಮಾಡಿದರು.
ನಮಗೆ ವಾಣಿಜ್ಯ ಸಿಲೆಂಡರ್ ನೀಡಿ: ಆಹಾರ ಇಲಾಖೆ ಅಧಿಕಾರಿಗಳು ಪಟ್ಟಣದ ರಸ್ತೆ ಬದಿಯಲ್ಲಿ ಹೊಟೇಲ್ ವ್ಯಾಪರ ಮಾಡುತ್ತಿರುವವರ ಮೇಲೆ ದಾಳಿ ಮಾಡಿ ಗೃಹ ಬಳಕೆ ಸಿಲೆಂಡರ್ ವಶಪಡಿಸಿಕೊಳ್ಳುವ ವೇಳೆ, ನಮ್ಮ ಸಿಲೆಂಡರ್ ನಮಗೆ ನೀಡಿ, ಇಲ್ಲವಾದರೆ ನಮ್ಮಗೆ ವಾಣಿಜ್ಯ ಸಿಲೆಂಡರ್‍ಗಳನ್ನು ನೀಡಿ ಹಣ ನೀಡುತ್ತೇವೆ ಎಂದು ಅಧಿಕಾರಿಗಳಿಗೆ ಹೋಟೆಲ್ ಮಾಲೀಕರು ತರಾಟೆಗೆ ತೆಗೆದುಕೊಂಡರು. ಸಿಲೆಂಡರ್ ಇಲ್ಲದಿದ್ದರೆ ನಾವು ಹೇಗೆ ವ್ಯಾಪಾರ ಮಾಡಬೇಕು, ನಮ್ಮ ಜೀವನ ಹೇಗೆ ಸಾಗಿಸಬೇಕು ಎಂದು ಅಧಿಕಾರಿಗಳ ಮುಂದೆ ತಮ್ಮ ಅಳಲನ್ನು ವ್ಯಕ್ತಪಡಿಸಿದರು.
ಈ ವೇಳೆ ಕಂದಾಯ ನಿರೀಕ್ಷಕ ದಸ್ತಗಿರಿ ನಾಯಕ್, ಆಹಾರ ಶಿರಸ್ತೇದಾರ್ ಮಹೇಶ ಎಮ್.ಜಿ, ಆಹಾರ ನಿರೀಕ್ಷಕ ವಿಠ್ಠಲ್ ಬಂದಾಲ್, ಶರಣಮ್ಮ ಸೇರಿದಂತೆ ಗ್ಯಾಸ್ ಎಜೇನ್ಸಿಯವರು ಇದ್ದರು.

























