
ಯಾದಗಿರಿ:ಏ.೩: ಬಾಗಲಕೋಟೆ ನಗರ ರಾಜಕೀಯ ಚಟುವಟಿಕೆಗಳಿಂದ ಕಂಗೊಳಿಸುತ್ತಿದ್ದು, ಚುನಾವಣಾ ಪ್ರಚಾರವು ಉತ್ಸಾಹದ ಉನ್ನತ ಹಂತ ತಲುಪಿದೆ. ಪೌರಾಡಳಿತ ಸಚಿವ ರಹೀಂ ಖಾನ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪರ ಭರ್ಜರಿ ಪ್ರಚಾರ ಅಭಿಯಾನ ನಡೆಯುತ್ತಿದ್ದು, ಕೆಪಿಸಿಸಿ ಸಂಯೋಜಕ ಹಾಗೂ ಕಿಸಾನ್ ಘಟಕದ ಪ್ರಧಾನ ಕಾರ್ಯದರ್ಶಿ ರಾಜ್ ಮೈನುದ್ದಿನ್ ಎಂ. ಜಮಾದಾರ್ ಸಕ್ರಿಯವಾಗಿ ಭಾಗವಹಿಸಿ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಿದ್ದಾರೆ.
ನಗರದ ಪ್ರಮುಖ ವಾರ್ಡ್ಗಳು ಹಾಗೂ ಮೊಹಲ್ಲಾಗಳಲ್ಲಿ ಮನೆಮನೆಗೆ ಭೇಟಿ ನೀಡಿದ ನಾಯಕರು, ಮತದಾರರೊಂದಿಗೆ ನೇರ ಸಂವಾದ ನಡೆಸಿ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳು, ಅಭಿವೃದ್ಧಿ ಕಾರ್ಯಗಳು ಮತ್ತು ಭವಿಷ್ಯದ ದೃಷ್ಟಿಕೋಣವನ್ನು ಸಮಗ್ರವಾಗಿ ವಿವರಿಸಿದರು. ಮೊಹಲ್ಲಾ ಸಭೆಗಳು ಉತ್ಸಾಹಭರಿತವಾಗಿ ನಡೆದಿದ್ದು, ಸ್ಥಳೀಯ ಸಮಸ್ಯೆಗಳ ಕುರಿತು ಸಾರ್ವಜನಿಕರ ಮಾತುಗಳನ್ನು ಆಲಿಸಿ, ಅವುಗಳಿಗೆ ಶಾಶ್ವತ ಪರಿಹಾರ ಒದಗಿಸುವ ಭರವಸೆ ನೀಡಿದರು.
“ಸಮಗ್ರ ಅಭಿವೃದ್ಧಿ, ಸಮಾನತೆ ಮತ್ತು ಸಾಮಾಜಿಕ ನ್ಯಾಯ ಕಾಂಗ್ರೆಸ್‌ನ ಧ್ಯೇಯವಾಗಿದ್ದು, ಬಾಗಲಕೋಟೆ ನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಅಗತ್ಯ” ಎಂದು ಸಚಿವ ರಹೀಂ ಖಾನ್ ಮನವಿ ಮಾಡಿದರು. ಇದೇ ವೇಳೆ ರಾಜ್ ಮೈನುದ್ದಿನ್ ಜಮಾದಾರ್ ಅವರು ಯುವಜನತೆ, ರೈತರು ಹಾಗೂ ಕಾರ್ಮಿಕ ವರ್ಗವನ್ನು ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಬಿಂಬಿಸಿದರು.
ಪ್ರಚಾರ ಯಾತ್ರೆಯಲ್ಲಿ ಸ್ಥಳೀಯ ಮುಖಂಡರು, ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಪಾಲ್ಗೊಂಡು, ಘೋಷಣೆಗಳೊಂದಿಗೆ ವಾತಾವರಣವನ್ನು ಉತ್ಸಾಹಭರಿತಗೊಳಿಸಿದರು. ಪ್ರಚಾರದ ಈ ಜೋರಿನಿಂದ ಬಾಗಲಕೋಟೆ ರಾಜಕೀಯ ವಾತಾವರಣ ದಿನದಿಂದ ದಿನಕ್ಕೆ ಕಾವೇರಿಸುತ್ತಿದ್ದು, ಕಾಂಗ್ರೆಸ್ ಪರ ಒಲವು ಹೆಚ್ಚುತ್ತಿರುವ ಲಕ್ಷಣಗಳು ಸ್ಪಷ್ಟವಾಗುತ್ತಿವೆ

























