Home ಜಿಲ್ಲೆ ಪೊಲೀಸ್ ಧ್ವಜ ದಿನಾಚರಣೆ: ಕರ್ತವ್ಯ, ಕಾಳಜಿ ಮತ್ತು ಕಲ್ಯಾಣದ ಸಂಕಲ್ಪಕ್ಕೆ ನವಚೈತನ್ಯ

ಪೊಲೀಸ್ ಧ್ವಜ ದಿನಾಚರಣೆ: ಕರ್ತವ್ಯ, ಕಾಳಜಿ ಮತ್ತು ಕಲ್ಯಾಣದ ಸಂಕಲ್ಪಕ್ಕೆ ನವಚೈತನ್ಯ

ಯಾದಗಿರಿ:ಏ.೨: ಪೊಲೀಸ್ ಇಲಾಖೆಯ ಸೇವಾ ಪರಂಪರೆ, ತ್ಯಾಗ ಮತ್ತು ಸಾರ್ವಜನಿಕರ ರಕ್ಷಣೆಗೆ ಸಲ್ಲಿಸುವ ಬದ್ಧತೆಯನ್ನು ಸ್ಮರಿಸುವ ಪೊಲೀಸ್ ಧ್ವಜ ದಿನಾಚರಣೆ ನಗರದಲ್ಲಿ ಶಿಸ್ತಿನ ವೈಭವದೊಂದಿಗೆ ನಡೆಯಿತು. ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ನಿವೃತ್ತ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿ ಇಲಾಖೆಯ ಗೌರವವನ್ನು ಹೆಚ್ಚಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ನಿವೃತ್ತ ಪೊಲೀಸ್ ಅಧೀಕ್ಷಕರಾದ ಅರುಣಕುಮಾರ್ ಕೊಳೂರ ಅವರು ಮಾತನಾಡಿ, “ಪೊಲೀಸ್ ಸೇವೆ ಕೇವಲ ಕರ್ತವ್ಯವಲ್ಲ, ಅದು ನಿರಂತರ ಸಮರ್ಪಣೆ ಮತ್ತು ತ್ಯಾಗದ ಪ್ರತೀಕ. ಆದರೆ ಈ ಸೇವೆಯಲ್ಲಿ ತೊಡಗಿರುವವರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯ” ಎಂದು ಹೇಳಿದರು.

ಅವರು ಮುಂದುವರೆದು, “ಇಂದಿನ ವೇಗದ ಮತ್ತು ಒತ್ತಡಭರಿತ ಜೀವನಶೈಲಿಯಲ್ಲಿ ಪೊಲೀಸ್ ಸಿಬ್ಬಂದಿಗಳು ಸಮಯ ನಿರ್ವಹಣೆ, ವ್ಯಾಯಾಮ ಮತ್ತು ಕುಟುಂಬದೊAದಿಗೆ ಸಮಯ ಕಳೆಯುವ ಮೂಲಕ ಮನೋಬಲವನ್ನು ಹೆಚ್ಚಿಸಿಕೊಳ್ಳಬೇಕು. ಸಾರ್ವಜನಿಕರೊಂದಿಗೆ ಸೌಹಾರ್ದಯುತ ನಡೆದುಕೊಂಡರೆ ಇಲಾಖೆಯ ಮೇಲಿನ ನಂಬಿಕೆ ಮತ್ತಷ್ಟು ಬಲವಾಗುತ್ತದೆ” ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ ಎಸ್.ಪಿ ಅವರು ಪೊಲೀಸ್ ಧ್ವಜ ದಿನಾಚರಣೆಯ ಮಹತ್ವವನ್ನು ವಿವರಿಸಿ, “೧೯೬೫ರ ಏಪ್ರಿಲ್ ೨ರಂದು ಜಾರಿಗೆ ಬಂದ ರಾಜ್ಯ ಪೊಲೀಸ್ ಕಾಯ್ದೆಯ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ. ಇದು ಪೊಲೀಸ್ ಮತ್ತು ಸಾರ್ವಜನಿಕರ ನಡುವಿನ ಸಂಬAಧವನ್ನು ಮತ್ತಷ್ಟು ಗಟ್ಟಿಗೊಳಿಸುವ ದಿನ” ಎಂದು ಹೇಳಿದರು.

ಪೊಲೀಸ್ ಕ್ಷೇಮ ನಿಧಿ ಕುರಿತು ಮಾಹಿತಿ ನೀಡಿದ ಅವರು, ಧ್ವಜ ಮಾರಾಟದ ಮೂಲಕ ಸಂಗ್ರಹವಾಗುವ ನಿಧಿಯನ್ನು ನಿವೃತ್ತ ಸಿಬ್ಬಂದಿ, ಅವರ ಕುಟುಂಬಗಳು ಹಾಗೂ ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಬಳಸಲಾಗುತ್ತಿದೆ ಎಂದರು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಸಹಾಯಧನ, ಆರೋಗ್ಯ ಸೇವೆಗಳು, ವಾರ್ಷಿಕ ತಪಾಸಣೆ, ವೈದ್ಯಕೀಯ ನೆರವು ಸೇರಿದಂತೆ ಹಲವಾರು ಯೋಜನೆಗಳು ಜಾರಿಯಲ್ಲಿವೆ ಎಂದು ವಿವರಿಸಿದರು.

ಕಾರ್ಯಕ್ರಮದ ಅಂಗವಾಗಿ ರಾಷ್ಟ್ರಧ್ವಜ ಹಾಗೂ ಪೊಲೀಸ್ ಧ್ವಜಕ್ಕೆ ಗೌರವ ಸಲ್ಲಿಸಲಾಯಿತು. ಸೇವೆ ಸಲ್ಲಿಸಿ ನಿವೃತ್ತರಾದ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಹುದ್ದೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೌರವ ಸಲ್ಲಿಸಿದರು.

ಪರೇಡ್ ಕಮಾಂಡರ್ ಲಚ್ಛಪ್ಪ ಚವ್ಹಾಣ ನೇತೃತ್ವದಲ್ಲಿ ನಡೆದ ಕವಾಯತು ಶಿಸ್ತಿನ ಪ್ರತೀಕವಾಗಿ ಗಮನ ಸೆಳೆಯಿತು. ಒಟ್ಟಾರೆ, ಪೊಲೀಸ್ ಧ್ವಜ ದಿನಾಚರಣೆ ಇಲಾಖೆಯ ಕರ್ತವ್ಯನಿಷ್ಠೆ, ಸೇವಾ ಮನೋಭಾವ ಮತ್ತು ಕಲ್ಯಾಣದ ದೃಷ್ಟಿಕೋಣವನ್ನು ಮತ್ತೊಮ್ಮೆ ಎತ್ತಿ ಹಿಡಿದ ಮಹತ್ವದ ಸಂದರ್ಭವಾಯಿತು.