
ಬೆಂಗಳೂರು.ಮಾ೫:ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕಚೇರಿಗಳಲ್ಲಿ ಮುಂದಿನ ಹಣಕಾಸು ವರ್ಷದಿಂದ ಹಸ್ತಚಾಲಿತ ರಿಜಿಸ್ಟರ್‌ಗಳ ಬದಲು ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಲು ಕ್ರಮ ಕೈಗೊಳ್ಳುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಆರ್.ಆರ್.ನಗರ ವಲಯ ಕಚೇರಿಗೆ ಭೇಟಿ ನೀಡಿದ ಅವರು ಜಾಬ್ ಕೋಡ್ ಹಾಗೂ ತಾಂತ್ರಿಕ ಅನುಮೋದನೆಗೆ ಸಂಬಂಧಿಸಿದ ರಿಜಿಸ್ಟರ್ ಪುಸ್ತಕಗಳನ್ನು ಪರಿಶೀಲಿಸಿದರು. ಈ ವೇಳೆ ಇನ್ನೂ ಹಸ್ತಚಾಲಿತ ಪದ್ಧತಿಯಲ್ಲಿ ದಾಖಲೆಗಳನ್ನು ನಿರ್ವಹಿಸುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆ, ಮುಂದಿನ ಹಣಕಾಸು ವರ್ಷದಿಂದ ಎಲ್ಲ ರಿಜಿಸ್ಟರ್‌ಗಳನ್ನು ಆನ್‌ಲೈನ್ ವ್ಯವಸ್ಥೆಗೆ ವರ್ಗಾಯಿಸುವಂತೆ ನಿರ್ದೇಶನ ನೀಡಿದರು.
ವಲಯ ಕಚೇರಿಯ ಮೂರನೇ ಮಹಡಿಯಲ್ಲಿ ನಿರ್ಮಾಣವಾಗುತ್ತಿರುವ ಹೆಚ್ಚುವರಿ ಕಚೇರಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಿದ ಅವರು, ಕಚೇರಿ ಆವರಣದಲ್ಲಿ ಸ್ವಚ್ಛತೆ ಕಾಪಾಡಿ ಸೌಂದರ್ಯಪೂರ್ಣ ವಾತಾವರಣ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿದರು. ಕಚೇರಿಯ ಸಭಾಂಗಣವನ್ನು ಪರಿಶೀಲಿಸಿದ ಮಹೇಶ್ವರ್ ರಾವ್, ಅದನ್ನು ನವೀಕರಿಸಿ ಮೇಲ್ದರ್ಜೆಗೆ ತರುವಂತೆ ಹಾಗೂ ಕಾರಿಡಾರ್‌ಗಳಲ್ಲಿ ಇಡಲಾಗಿರುವ ಪೆಟ್ಟಿಗೆಗಳನ್ನು ತೆರವುಗೊಳಿಸುವಂತೆ ತಿಳಿಸಿದರು.
ಮಹಾಲಕ್ಷ್ಮಿ ಬಡಾವಣೆಯ ಶಂಕರ ಮಠ ರಸ್ತೆಯಲ್ಲಿ ನಡೆದಿರುವ ಡಾಂಬರೀಕರಣ ಕಾಮಗಾರಿಯನ್ನು ಪರಿಶೀಲಿಸಿದ ಅವರು, ಶಂಕರ ಮಠ ವೃತ್ತದಲ್ಲಿ ಸಂಚಾರ ಸುಗಮವಾಗಲು ಮೋದಿ ಆಸ್ಪತ್ರೆ ರಸ್ತೆಯಿಂದ ಬಸವೇಶ್ವರ ಮುಖ್ಯ ರಸ್ತೆಗೆ ಹಾಗೂ ಕುರುಬರಹಳ್ಳಿ ರಸ್ತೆಯಿಂದ ಶಂಕರ ಮಠ ರಸ್ತೆಗೆ ಫ್ರೀ ಲೆಫ್ಟ್ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು. ಈ ಸಂಬಂಧ ಅರ್ಬನ್ ಪ್ಲಾನರ್‌ಗಳ ಮೂಲಕ ವಿನ್ಯಾಸ ರೂಪಿಸಿ ವೃತ್ತದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ವೇಳೆ ಮಾತನಾಡಿದ ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ. ರಾಜೇಂದ್ರ ಕೆ.ವಿ, ಕುರುಬರಹಳ್ಳಿ ಮುಖ್ಯ ರಸ್ತೆ ಕಿರಿದಾಗಿರುವುದರಿಂದ ಅದನ್ನು ಅಗಲೀಕರಣ ಮಾಡಿದರೆ ಈ ಭಾಗದಲ್ಲಿನ ಸಂಚಾರ ದಟ್ಟಣೆ ಬಹುತೇಕ ನಿವಾರಣೆಯಾಗಲಿದೆ ಎಂದು ಹೇಳಿದರು. ರಸ್ತೆ ಅಗಲೀಕರಣ ಕುರಿತು ಪರಿಶೀಲಿಸಿ ವರದಿ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.ಇನ್ನೂ..
ನಾಗಪುರ ಪೈಪ್‌ಲೈನ್ ಪಾರ್ಕ್‌ನಲ್ಲಿ ಎಲೆ ಸಂಸ್ಕರಣ ಘಟಕ ಸ್ಥಾಪನೆ, ನಾಗಪುರ ದ್ವಿತೀಯ ಹಂತದ ಸಂಗ್ರಹಣೆ ಹಾಗೂ ಸಾಗಾಣಿಕೆ ಕೇಂದ್ರ ಅಭಿವೃದ್ಧಿ ಹಾಗೂ ಮಹಾಲಕ್ಷ್ಮಿ ಲೇಔಟ್ ಮುಖ್ಯ ರಸ್ತೆಯ ವೈಟ್‌ಟಾಪಿಂಗ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಪರಿಶೀಲನೆ ವೇಳೆ ಪಶ್ಚಿಮ ನಗರ ಪಾಲಿಕೆ ಅಭಿವೃದ್ಧಿ ಅಪರ ಆಯುಕ್ತ ದಿಗ್ವಿಜಯ್ ಬೋಡ್ಕೆ, ಜಂಟಿ ಆಯುಕ್ತರಾದ ಸಂಗಪ್ಪ ಹಾಗೂ ಆರತಿ ಆನಂದ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.





















