
ಶಿಡ್ಲಘಟ್ಟ.ಮಾ೪:ಶ್ರೀ ಪೂಜಮ್ಮದೇವಿ ದೇವಾಲಯ ಸೇವಾಭಿವೃದ್ಧಿ ಚಾರಿಟಬಲ್ ಟ್ರಸ್ಟ್ ಸಿದ್ಧಾರ್ಥನಗರ ಹಾಗೂ ತಾಲ್ಲೂಕಿನ ಅಪಾರ ಭಕ್ತ ವೃಂದದವರಿಂದ ಅದ್ದೂರಿಯಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀ ಪೂಜಮ್ಮದೇವಿಯ ಹೂವಿನ ಕರಗ ಮಹೋತ್ಸವವನ್ನು ಹಮ್ಮಿಕೊಂಡಿದ್ದರು.
ನಗರದ ಬೈಪಾಸ್ ರಸ್ತೆಯಲ್ಲಿರುವ ಶ್ರೀ ಪೂಜಮ್ಮ ದೇವಾಲಯದಲ್ಲಿ ಪೂಜಮ್ಮ ದೇವಿ ಅವರ ಹೂವಿನ ಕರಗ ಮಹೋತ್ಸವವು ಧಾರ್ಮಿಕ ಉತ್ಸಾಹದ ನಡುವೆ ಅದ್ದೂರಿಯಾಗಿ ಜರುಗಿತು. ಈ ಹೂವಿನ ಕರಗ ಪ್ರತಿ ವರ್ಷವೂ ಸಹ ಮೊದಲ ಕರಗದ ಸಂಭ್ರಮವಾಗಿರುತ್ತದೆ.
ದೇವಿಯ ಹೂವಿನ ಕರಗವನ್ನು ಅದ್ಬುತವಾಗಿ ಕುಣಿಸಿ ಭಕ್ತಾದಿಗಳನ್ನು ರಂಜಿಸಿದ ಕೋಲಾರ ಬಳಿಯ ಎಸ್ ಅಗ್ರಹಾರ ಗ್ರಾಮದ ಪಿ ಶಿವರಾಜ್ ಶ್ರದ್ಧಾ ಭಕ್ತಿಯಿಂದ ನಡೆಸಿಕೊಟ್ಟರು.
ತಮಟೆ ಮಾಂತ್ರಿಕ ಎಂದು ಕರೆಯಲ್ಪಡುವ ಬಂಗಾರಪೇಟೆ ತಾಲ್ಲೂಕಿನ ದೊಡ್ಡಚನ್ನಹಳ್ಳಿಯ ಅನಂತ್ ರವರ ಕಲಾತಂಡ ತಮಟೆಗಳ ತಾಳಕ್ಕೆ ಹೆಜ್ಜೆ ಹಾಕಿದ ಹೂವಿನ ಕರಗ ಹೊತ್ತ ದೇವಿಯೂ ಸಹ ಕುಣಿಯುವ ಮೂಲಕ ಜನತೆಗೆ ರಂಜಿಸಿದರು.
ಇದೇ ಮೊದಲ ಬಾರಿಗೆ ಕೋಟೆ ವೃತ್ತದಲ್ಲಿ, ಮಾರಮ್ಮ ವೃತ್ತದಲ್ಲಿ, ಬೆಸ್ಕಾಂ ಇಲಾಖೆ ವೃತ್ತದಲ್ಲಿ ಹಾಗೂ ಶ್ರೀ ಪೂಜಮ್ಮ ದೇವಸ್ಥಾನದ ಬಳಿ ನಾಲ್ಕು ಭಾಗಗಳಲ್ಲಿ ವಾದ್ಯಗೋಷ್ಠಿಗಳನ್ನು ಆಯೋಜಿಸಲಾಗಿದ್ದು ಹಲವು ಭಾಗಗಳಲ್ಲಿ ಭಕ್ತಾದಿಗಳಿಂದ ಆನ್ನ ಸಂತರ್ಪಣೆಯನ್ನು ಹಮ್ಮಿಕೊಂಡಿದ್ದರು.
ಊರಿನ ಪ್ರಮುಖ ಬೀದಿಗಳಲ್ಲಿ ಸಾಗಿದ ಹೂವಿನ ಕರಗದ ಮೆರವಣಿಗೆಯನ್ನು ಸಾರ್ವಜನಿಕರು ಹೂವಿನ ಸುರಿಮಳೆ ಮೂಲಕ ಭಕ್ತಿ ತೋರಿದರು ಹಾಗೂ ಮಹಿಳೆಯರು ಮನೆಯ ಮುಂದೆ ರಂಗೋಲಿಗಳಿಂದ ಸ್ವಾಗತಿಸುವ ಮೂಲಕ ಪೂಜೆ ಸಲ್ಲಿಸಿದರು.
ಹೂವಿನ ಕರಗ ಮಹೋತ್ಸವದ ಸಂದರ್ಭದಲ್ಲಿ ಯಾವುದೇ ಅಯುತಕರ ಘಟನೆ ನಡೆಯದಂತೆ ವೃತ್ತ ನಿರೀಕ್ಷಕ ಆನಂದ್ ಕುಮಾರ್ ನೇತೃತ್ವದಲ್ಲಿ ಪಿಎಸ್ಐ ವೇಣುಗೋಪಾಲ್ ಹಾಗೂ ಪೊಲೀಸ್ ಸಿಬ್ಬಂದಿಯಿಂದ ಬಿಗಿ ಬಂದೋಬಸ್ತು ಏರ್ಪಡಿಸಲಾಗಿತ್ತು. ಭಕ್ತರು ಶಿಸ್ತಿನಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಶಾಸಕ ಬಿ.ಎನ್.ರವಿಕುಮಾರ್, ಕಾಂಗ್ರೆಸ್ ಮುಖಂಡರಾದ ವಿ ಮುನಿಯಪ್ಪ, ರಾಜೀವ್ ಗೌಡ, ಪುಟ್ಟು ಆಂಜಿನಪ್ಪ, ಮಾಜಿ ಶಾಸಕ ರಾಜಣ್ಣ, ಬಿಜೆಪಿ ತಾಲ್ಲೂಕು ಅದ್ಯಕ್ಷ ಆನಂದಗೌಡ,
ದೇವಾಲಯದ ಟ್ರಸ್ಟ್ ಸದಸ್ಯರು ಮತ್ತು ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ಹಸಿಕರಗ ಮಹೋತ್ಸವವನ್ನು ಯಶಸ್ವಿಗೊಳಿಸಿದರು. ಪೂಜಮ್ಮ ದೇವಿಯ ಕೃಪೆಯಿಂದ ನಗರದಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದರು.


























