
ಅಥಣಿ :ಜೂ.22: ಇಂದಿನ ಒತ್ತಡ ಮಯ ಜೀವನ ಮತ್ತು ಬದಲಾದ ಆಹಾರ ಪದ್ಧತಿಯಿಂದ ಬಿಪಿ, ಶುಗರ್, ಅಸ್ತಮಾ, ಬೊಜ್ಜು, ಕ್ಯಾನ್ಸರ್. ನಂತಹ ಮಾರಕ ಕಾಯಿಲೆಗಳು ಹೆಚ್ಚಾಗುತ್ತಿವೆ. ನಮ್ಮ ಜೀವನ ಶೈಲಿ ಮತ್ತು ಆಹಾರ ಪದ್ಧತಿಯನ್ನು ಬದಲಿಸಿಕೊಂಡು ಪ್ರತಿದಿನ ಯೋಗ, ಧ್ಯಾನ, ಪ್ರಾಣಾಯಾಮಗಳನ್ನು ರೂಢಿಸಿಕೊಳ್ಳುವ ಮೂಲಕ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಸಲಹೆ ನೀಡಿದರು.
ಅವರು ಅಥಣಿ ಪಟ್ಟಣದ ಕೆಎಲ್ಇ ಸಂಸ್ಥೆಯ ಎಸ್ ಎಸ್ ಎಂಎಸ್ ಮಹಾವಿದ್ಯಾಲಯದ ಆವರಣದಲ್ಲಿ ತಾಲೂಕ ಆಡಳಿತ, ಪತಂಜಲಿ ಯೋಗ ಸಮಿತಿ ಹಾಗೂ ವಿವಿಧ ಶಾಲಾ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯೋಗ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗದೆ, ಪ್ರತಿದಿನ ಒಂದು ಗಂಟೆ ನಮ್ಮ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕಾಗಿ ಮೀಸಲೀಡಬೇಕು. ಪ್ರತಿದಿನ ತಪ್ಪದೇ ಯೋಗ ಅಭ್ಯಾಸ ರೂಡಿಸಿಕೊಳ್ಳುವ ಮೂಲಕ ಆರೋಗ್ಯವೇ ಭಾಗ್ಯ ಎಂಬ ಸಂಪತ್ತು ಕಾಪಾಡಿಕೊಳ್ಳಬೇಕು. ಆರೋಗ್ಯವಂತ ಮಾನವ ಸಂಪನ್ಮೂಲವನ್ನು ಹೊಂದಿದಾಗ ನಾವು ಸದೃಢ ಸಮಾಜ ಮತ್ತು ರೋಗಮುಕ್ತ ಭಾರತವನ್ನು ಕಟ್ಟಲು ಸಾಧ್ಯವಿದೆ. ಯೋಗ ಇಂದು ಭಾರತದಲ್ಲಿ ಅಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ಪ್ರಾಮುಖ್ಯತೆ ಪಡೆದಿದೆ. ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಯೋಗ ದಿವ್ಯ ಔಷಧಿಯಾಗಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪ್ರತಿದಿನ ಯೋಗವನ್ನು ರೂಡಿಸಿಕೊಳ್ಳುವ ಮೂಲಕ ಆರೋಗ್ಯವಂತ ಸಮಾಜವನ್ನು ಕಟ್ಟಲು ಕೈಜೋಡಿಸಬೇಕು ಎಂದು ಹೇಳಿದರು.
ಪತಂಜಲಿ ಯೋಗಪೀಠದ ಕರ್ನಾಟಕ ರಾಜ್ಯ ಪ್ರಭಾರಿ, ಅಂತರಾಷ್ಟ್ರೀಯ ಯೋಗ ಪಟು ಭವರ ಲಾಲ್ ಆರ್ಯ ಮಾತನಾಡಿ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಪುರಾತನ ಕಾಲದಿಂದಲೂ ಯೋಗ ಸಂಸ್ಕøತಿಗೆ ಬಹಳ ಮಹತ್ವವಿದೆ. ನಮ್ಮ ಪೂರ್ವಜರು ಋಷಿಮುನಿಗಳು ನೀಡಿದ ಈ ಯೋಗ ಸಂದೇಶ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಾಧಾನ್ಯತೆ ಪಡೆದುಕೊಂಡಿರುವುದು ನಮ್ಮೆಲ್ಲರಿಗೆ ಹೆಮ್ಮೆ. ಮಾನವನ ದೇಹ ಮತ್ತು ಮನಸ್ಸಿಗೆ ಯೋಗ ಶ್ರೇಷ್ಠವಾದ ಉಡುಗೊರೆ. ಪತಂಜಲಿ ಯೋಗ ಪೀಠದ ಬಾಬಾ ರಾಮದೇವ್ ರವರ ಕನಸಿನಂತೆ ಯೋಗ ವಿಶ್ವಮಯವಾಗಬೇಕು. ಆರೋಗ್ಯವಂತ ಮತ್ತು ಸದೃಢ ಸಮಾಜ ಕಟ್ಟಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಯೋಗವನ್ನು ರೂಡಿಸಿಕೊಂಡು, ಸಾತ್ವಿಕ ಆಹಾರ, ಶುದ್ಧವಾದ ನೀರು ಮತ್ತು ಆಮ್ಲಜನಕ ಸೇವನೆ ಮಾಡಿದಾಗ ಆರೋಗ್ಯವಂತ ಸಮಾಜ ಕಟ್ಟಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಪ್ರತಿ ಗ್ರಾಮಗಳಲ್ಲಿ, ನಗರ ಪಟ್ಟಣಗಳಲ್ಲಿ ಯೋಗ ಸಂದೇಶ ಮನೆ, ಮನಗಳಿಗೆ ತಲುಪಬೇಕು ಎಂದು ಹೇಳುವ ಮೂಲಕ ಯೋಗ ಪ್ರಾತ್ಯಕ್ಷತೆ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಉದ್ಯಮಿ, ಸಮಾಜಸೇವಕ ರಫೀಕ್ ಡಾಂಗೆ ಅವರಿಗೆ ಸಮಾಜ ಸೇವ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇತ್ತೀಚಿಗೆ ನಡೆದ ಯೋಗ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ವಿವಿಧಡೆ ಯೋಗಾಭ್ಯಾಸ ನಡೆಸುತ್ತಿರುವ ಯೋಗ ಶಿಕ್ಷಕರಿಗೆ ಸನ್ಮಾನಿಸಲಾಯಿತು.
ಈ ವೇಳೆ ಪುರಸಭೆ ಅಧ್ಯಕ್ಷ ಶಿವಲೀಲಾ ಬೂಟಾಳಿ, ಉಪಾಧ್ಯಕ್ಷ ಭುವನೇಶ್ವರಿ ಯಕ್ಕಂಚಿ, ಹಿರಿಯ ವೈದ್ಯ ಡಾ. ಮಲ್ಲಿಕಾರ್ಜುನ ಹಂಜಿ, ತಹಸೀಲ್ದಾರ್ ಸಿದ್ದರಾಯ ಬೋಸಗಿ, ತಾಲೂಕ ಪಂಚಾಯತ್ ಅಧಿಕಾರಿ ಶಿವಾನಂದ ಕಲ್ಲಾಪುರ, ಪುರಸಭೆ ಮುಖ್ಯ ಅಧಿಕಾರಿಯ ಅಶೋಕ ಗುಡಿಮನಿ, ಅಭಿಯಂತರರಾದ ವೀರಣ್ಣ ವಾಲಿ, ಪ್ರವೀಣ್ ಹುಣಸಿಕಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಬಿ ಮೋರಟಗಿ, ಸಿಪಿಐ ಸಂತೋಷ ಹಳ್ಳೂರ, ಪತಂಜಲಿ ಯೋಗ ಪೀಠದ ಎಸ್ ಕೆ ಹೊಳೆಪ್ಪನವರ, ಎ ಬಿ ಪಾಟೀಲ, ಶಿವಾನಂದ ಬುರ್ಲಿ, ಸುರೇಶ ಚಿಕ್ಕಟ್ಟಿ, ಶಿವಾನಂದ ಮಾಲಗಾವಿ, ರಾಮಣ್ಣ ದರಿಗೌಡ, ದೇವಿಂದ್ರ ಬಿಸ್ವಾಗರ, ಡಾ. ವಿನಾಯಕ ಚಿಂಚೋಳಿ ಮಠ, ರೋಹಿಣಿ ಯಾದವಾಡ, ಅಂಬಿಕಾ ಹೂಟಿ, ಉಜ್ವಲ ಹಿರೇಮಠ ಸೇರಿದಂತೆ ಅನೇಕ ಯೋಗ ಶಿಬಿರಾರ್ಥಿಗಳು, ತಾಲೂಕಾ ಮಟ್ಟದ ಅಧಿಕಾರಿಗಳು, ವಿವಿಧ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಯೋಗ ದಿನಾಚರಣೆಯ ಪ್ರಾತ್ಯಕ್ಷತೆಯಲ್ಲಿ ಪಾಲ್ಗೊಂಡಿದ್ದರು.