ಲೇಖಕಿ ಬಾನು ಮುಷ್ತಾಕ್‌ಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ

ಕನ್ನಡಕ್ಕೆ ಒಲಿದ ಮೊದಲ ಗೌರವ

ಬೆಂಗಳೂರು,ಮೇ೨೧:ಕನ್ನಡದ ಖ್ಯಾತ ಲೇಖಕಿ ಬಾನುಮುಷ್ತಾಕ್ ಅವರಿಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡ ಭಾಷೆಗೆ ಈ ಪ್ರತಿಷ್ಠಿತ ಪ್ರಶಸ್ತಿ ಒಲಿದಿದೆ.


ಬರಹಗಾರ್ತಿ ವಕೀಲೆ, ಕಾರ್ಯಕರ್ತೆ ಬಾನು ಮುಷ್ತಾಕ್ ಅವರ ಹೃದಯದೀಪ ಕೃತಿ ಇಂಗ್ಲಿಷ್‌ಗೆ ’ಹಾರ್ಟ್ ಆಫ್ ಲ್ಯಾಂಪ್’ ಎಂಬ ಹೆಸರಲ್ಲಿ ಅನುವಾದಗೊಂಡಿತ್ತು. ಈಗ ಇದು ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಪಾತ್ರವಾಗಿದೆ.


ಬೂಕರ್ ಪ್ರಶಸ್ತಿಗೆ ಬಾನು ಮುಷ್ತಾಕ್ ಅವರ ಇಂಗ್ಲಿಷ್ ಅನುವಾದಿತ ಕೃತಿ ’ಹಾರ್ಟ್ ಆಫ್ ಲ್ಯಾಂಪ್’ ಕೃತಿ ಆಯ್ಕೆಯಾಗಿತ್ತು. ೬ ಕೃತಿಗಳ ಪೈಕಿ ಅಂತಿಮವಾಗಿ ಕನ್ನಡದ ಖ್ಯಾತ ಲೇಖಕಿ ಬಾನು ಮುಷ್ತಾಕ್ ಅವರ ಕೃತಿಗೆ ಪ್ರಶಸ್ತಿ ಲಭಿಸಿತು.
ಲಂಡನ್‌ನಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿ ಘೋಷಣೆಯಾದ ಸುದ್ದಿ ಹೊರ ಬೀಳುತ್ತಿದ್ದಂತೆ ಬಾನು ಮುಷ್ತಾಕ್ ಮತ್ತು ಅನುವಾದಕಿ ದೀಪಭಸ್ತಿ ಇಬ್ಬರು ಪರಸ್ಪರ ಅಪ್ಪಿಕೊಂಡು ಸಂತಸ ವ್ಯಕ್ತಪಡಿಸಿದರು.


ಈ ಪ್ರಶಸ್ತಿ ೫೦ ಸಾವಿರ ಪೌಂಡ್ ನಗದು ಬಹುಮಾನ ಒಳಗೊಂಡಿದೆ.ಈ ಹಣವನ್ನು ಬಾನು ಮುಷ್ತಾಕ್ ಮತ್ತು ಕೃತಿಯನ್ನು ಇಂಗ್ಲಿಷ್‌ಗೆ ಅನುವಾದಿಸಿದ ದೀಪಭಸ್ತಿ ಅವರಿಗೆ ಹಂಚಿಕೆ ಮಾಡಲಾಗಿದೆ.


ಬೂಕರ್ ಪ್ರಶಸ್ತಿಗೆ ಪಾತ್ರರಾಗಿರುವ ಬಾನು ಮುಷ್ತಾಕ್ ಅವರ ಹಸೀನಾ ಮತ್ತು ಇತರ ಕತೆಗಳು ಕಥಾಸಂಕಲನವು ಮುಸ್ಲಿಂ ಸಮುದಾಯದ ಬಾಲಕಿಯರ ಮತ್ತು ಇತರ ಹೆಣ್ಣು ಮಕ್ಕಳ ದೈನಂದಿನ ಜೀವನದ ಆಧಾರಿತವಾಗಿದೆ.


ಲಂಡನ್‌ನಲ್ಲಿ ಪ್ರಶಸ್ತಿ ಸ್ವೀಕಾರ


ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಬಾನು ಮುಷ್ತಾಕ್ ಹಾಗೂ ಅನುವಾದಕಿ ದೀಪಭಸ್ತಿ ಪ್ರಶಸ್ತಿ ಸ್ವೀಕರಿಸಿದರು. ಈ ವೇಳೆ ಪ್ರತಿಕ್ರಿಯಿಸಿ ತಮ್ಮ ಈ ಗೆಲುವು ವೈವಿಧ್ಯತೆಯ ಸಂಕೇತ ಎಂದು ಬಣ್ಣಿಸಿದ್ದಾರೆ.


ಯಾವುದೇ ಕತೆ ಎಂದಿಗೂ ಚಿಕ್ಕದಲ್ಲ, ಮಾನವ ಅನುಭವದ ವಸ್ತ್ರದಲ್ಲಿ ಪ್ರತಿಯೊಂದು ದಾರವು ತನ್ನದೇ ತೂಕ ಹೊಂದಿರುತ್ತದೆ ಎಂಬ ನಂಬಿಕೆ ಹುಟ್ಟಿದೆ ಎಂದು ಹೇಳಿದ್ದಾರೆ.
ನಮ್ಮನ್ನು ವಿಭಜಿಸಲು ಪ್ರಯತ್ನಿಸುವ ಜಗತ್ತಿನಲ್ಲಿ ಸಾಹಿತ್ಯವು ಕಳೆದು ಹೋದ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ ಎಂದು ಹೇಳಿರುವರು. ಅನುವಾದಕಿ ದೀಪಭಸ್ತಿ ಮಾತನಾಡಿ, ನನ್ನ ಸುಂದರ ಭಾಷೆಗೆ ಇದು ಎಂತಹ ಸುಂದರವಾದ ಗೆಲುವು ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ತೀರ್ಪುಗಾರರ ಅಧ್ಯಕ್ಷರಾದ ಮ್ಯಾಕ್ಸ್‌ಪೋರ್ಟರ್ ಮಾತನಾಡಿ ಈ ಪಟ್ಟಿಯು ಮಾನವೀಯತೆಯ ಬಗ್ಗೆ ಹೊತ್ತುವ ಹಾಗೂ ಆಶ್ಚರ್ಯಕರ ಸಂಭಾಷಣೆಗಳಿಗೆ ಒಂದು ವಾಹಕವಾದ ಕಾದಂಬರಿಗಳ ಆಚರಣೆಯಾಗಿದೆ ಎಂದು ಹೇಳಿದರು.

ಸಿಎಂ ಸೇರಿ ಗಣ್ಯರ ಅಭಿನಂದನೆ


ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿರುವ ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಷ್ತಾಕ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ, ಕನ್ನಡ ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಹಲವರು ಅಭಿನಂದನೆ ಹೇಳಿದ್ದಾರೆ.


ಇದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಸಂಭ್ರಮಿಸುವ ಹೊತ್ತು. ಈ ನೆಲದ ಸೌಹಾರ್ದತೆ, ಜಾತ್ಯಾತೀತತೆ ಮತ್ತು ಸಹೋದರತ್ವದ ನಿಜ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬರೆಯುತ್ತಿರುವ ಬಾನುಮುಷ್ತಾಕ್ ಅವರು ಕನ್ನಡದ ಹಿರಿಮೆಯ ಬಾವುಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ ನಮಗೆಲ್ಲ ಗೌರವ ತಂದುಕೊಟ್ಟಿದ್ದಾರೆ. ಅವರು ಇನ್ನಷ್ಟು ಕಾಲ ಸತ್ವಹಿತವಾಗಿ ಬರೆಯುತ್ತ ಕನ್ನಡದ ಕಂಪನ್ನು ಜಗದಗಲಕ್ಕೆ ಪಸರಿಸುತ್ತ ಇರಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.


ಬೂಕರ್ ಪ್ರಶಸ್ತಿಗೆ ಭಾಜನರಾಗಿರುವ ಬಾನು ಮುಷ್ತಾಕ್ ಅವರ ಕೃತಿ ಹೃದಯ ದೀಪವನ್ನು ಇಂಗ್ಲಿಷ್‌ಗೆ ಅನುವಾದಿಸಿರುವ ಪ್ರತಿಭಾವಂತ ಲೇಖಕಿ ದೀಪಭಸ್ತಿ ಅವರಿಗೂ ಕನ್ನಡಿಗರ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಹೇಳಿದ್ದಾರೆ.


ಕನ್ನಡದ ಸಾಹಿತ್ಯದ ಗರಿಮೆಯನ್ನು ಬಾನತ್ತೆರಕ್ಕೆ ಏರಿಸಿದ ಬಾನುಮುಷ್ತಾಕ್ ಅವರಿಗೆ ಅಭಿನಂದನೆಗಳು, ಅವರ ಹಾರ್ಟ್ ಲ್ಯಾಂಪ್ ಸಣ್ಣ ಕತೆಗಳ ಸಂಕಲನವು ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆಯ ವಿಚಾರ. ಈ ಮೂಲಕ ಇದೇ ಮೊದಲ ಬಾರಿಗೆ ಕನ್ನಡದ ಕೃತಿಗೆ ಈ ಪ್ರತಿಷ್ಠಿತ ಪ್ರಶಸ್ತಿ ದೊರೆತಿದೆ. ಈ ಕೃತಿಯನ್ನು ಕನ್ನಡಕ್ಕೆ ಅನುಬವಾದಿಸಿದ ರೂಪಾಭಸ್ತಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಇನ್ನಷ್ಟು ಉತ್ತಮ ಕೃತಿಗಳು ನಿಮ್ಮ ಲೇಖನಿಯಿಂದ ಮೂಡಿ ಬರಲಿ ಸಾಹತ್ಯ ಸೇವೆಯು ಜಗದಗಲ ಯಶಸ್ಸು ಮಾಡಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಶುಭಹಾರೈಸಿದ್ದಾರೆ.


ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿಯವರು ಬೂಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಅವರನ್ನು ಅಭಿನಂದಿಸಿದ್ದು, ಸಮಸ್ತ ಕನ್ನಡಿಗರಿಗೆ ಇದು ಹೆಮ್ಮೆಯ ಕ್ಷಣ, ಜಾಗತಿಕ ಬೂಕರ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾಗಿರುವ ನಾಡಿನ ಹೆಮ್ಮೆಯ ಲೇಖಕಿ ಬಾನು ಮುಷ್ತಾಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು, ಹಾಗೆಯೇ ಬೂಕರ್ ಪ್ರಶಸ್ತಿಗೆ ಭಾಜನರಾಗಿರುವ ಹೃದಯದೀಪ ಕೃತಿಯನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿರುವ ಲೇಖಕಿ ದೀಪಭಸ್ತಿ ಅವರಿಗೂ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.


ಕನ್ನಡ ಸಂಸ್ಕೃತಿ ಮತ್ತು ಹಿಂದುಳಿದ ವರ್ಗಗಳ ಸಚಿವ ಶಿವರಾಜ್‌ತಂಗಡಗಿ ಸಹ ಬಾನು ಮುಷ್ತಾಕ್ ಅವರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದು, ಕನ್ನಡ ಸಾಹಿತ್ಯದ ಸಂವೇದನಾಶೀಲ ಲೇಖಕಿ ಭಾನುಮುಷ್ತಾಕ್ ಅವರಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ದೊರೆತಿರುವುದು ಸಮಸ್ತ ಕನ್ನಡಿಗರಿಗೆ ಹೆಮ್ಮೆ ತಂದಿದೆ. ಸರ್ಕಾರದ ಪರವಾಗಿ, ನಾಡಿನ ಜನರ ಪರವಾಗಿ ಬಾನು ಮುಷ್ತಾಕ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.