Home ಸುದ್ದಿ ರಾಷ್ಟ್ರೀಯ 75 ವರ್ಷದ ವೃದ್ಧನೊಂದಿಗೆ 30 ವರ್ಷದ ಯುವತಿಯ ನಿಶ್ಚಿತಾರ್ಥ; ವೈರಲ್ ವಿಡಿಯೋ!

75 ವರ್ಷದ ವೃದ್ಧನೊಂದಿಗೆ 30 ವರ್ಷದ ಯುವತಿಯ ನಿಶ್ಚಿತಾರ್ಥ; ವೈರಲ್ ವಿಡಿಯೋ!

ಉತ್ತರ ಪ್ರದೇಶ,ಅ.16- “ಪ್ರೀತಿಗೆ ವಯಸ್ಸಿನ ಹಂಗಿಲ್ಲ” ಎಂಬ ಮಾತಿಗೆ ಸಾಕ್ಷಿಯೆಂಬಂತೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. 75 ವರ್ಷದ ಹಿರಿಯ ವ್ಯಕ್ತಿಯೊಬ್ಬರು ತಮ್ಮ ಮಗಳ ಸ್ನೇಹಿತೆಯಾಗಿರುವ 30 ವರ್ಷದ ಯುವತಿಯನ್ನು ಶೀಘ್ರದಲ್ಲೇ ವಿವಾಹವಾಗಲಿದ್ದು, ಇಬ್ಬರ ನಿಶ್ಚಿತಾರ್ಥದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.


ಉತ್ತರ ಪ್ರದೇಶದ ಅರಿಯಾರಿ ಗ್ರಾಮದ ನಿವಾಸಿ ರಾಮ್‍ಸುಗರ್ (75) ಹಾಗೂ ಔರೈಯಾ ನಗರದ ಬ್ಲಾಗರ್ ರಾಣಿ ರಾಜ್‍ಪೂತ್ (30) ವಿವಾಹವಾಗಲಿರುವ ಜೋಡಿ. ರಾಮ್‍ಸುಗರ್ ಅವರ ಮಗಳು ರಾಧಾ ಸೋಶಿಯಲ್ ಮೀಡಿಯಾ ವಿಡಿಯೋಗಳನ್ನು ಮಾಡುತ್ತಿದ್ದು, ಅವರ ಮೂಲಕ ಸ್ನೇಹಿತೆಯಾದ ರಾಣಿ ಅವರ ಪರಿಚಯ ಈ ಕುಟುಂಬಕ್ಕೆ ಆಗಿದೆ.


ಪ್ರೀತಿಯಲ್ಲಿ ಬದಲಾದ ಸ್ನೇಹ: ಕಳೆದ ಸುಮಾರು ಎರಡು ವರ್ಷಗಳಿಂದ ರಾಣಿ ಹಾಗೂ ರಾಮ್‍ಸುಗರ್ ಅವರ ನಡುವೆ ಪರಿಚಯವಿತ್ತು. ರಾಮ್‍ಸುಗರ್ ಅವರ ಪತ್ನಿ 7 ವರ್ಷಗಳ ಹಿಂದೆ ನಿಧನರಾಗಿದ್ದರು, ಹಾಗೂ ಅವರ ನಾಲ್ಕೂ ಮಕ್ಕಳು ಮದುವೆಯಾಗಿ ತಮ್ಮ ಸ್ವಂತ ಜೀವನದಲ್ಲಿ ನಿರತರಾಗಿದ್ದರು. ಇದರಿಂದಾಗಿ ರಾಮ್‍ಸುಗರ್ ಒಂಟಿತನ ಅನುಭವಿಸುತ್ತಿದ್ದರು. ಇನ್ನೊಂದೆಡೆ, ರಾಣಿ ಅವರನ್ನು ಅವರ ಪತಿ ತೊರೆದಿದ್ದು, ಇಬ್ಬರು ಮಕ್ಕಳ ಜವಾಬ್ದಾರಿ ಅವರ ಮೇಲಿತ್ತು. ಪರಸ್ಪರ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಿದ್ದ ಈ ಇಬ್ಬರ ನಡುವೆ ಪ್ರೀತಿ ಚಿಗುರಿದೆ.


ಬ್ಯೂಟಿ ಪಾರ್ಲರ್‍ನಲ್ಲಿ ನಿಶ್ಚಿತಾರ್ಥ ಇತ್ತೀಚೆಗೆ ಔರೈಯಾದ ಬ್ಯೂಟಿ ಪಾರ್ಲರ್ ಒಂದರಲ್ಲಿ ಸಾಂಪ್ರದಾಯಿಕವಾಗಿ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಸಮಾರಂಭದಲ್ಲಿ ಕುಟುಂಬದ ಸದಸ್ಯರು ಹಾಗೂ ಆಪ್ತರು ಭಾಗವಹಿಸಿದ್ದರು.
ವಧು-ವರರು ಹೇಳಿದ್ದೇನು?
ರಾಣಿ (30):
“ನಮ್ಮಿಬ್ಬರ ನಡುವೆ 45 ವರ್ಷಗಳ ವಯಸ್ಸಿನ ಅಂತರವಿದ್ದರೂ ನನಗೆ ಯಾವುದೇ ಅಭ್ಯಂತರವಿಲ್ಲ. ನನ್ನ ಜೀವನದ ಕಷ್ಟದ ಹಂತದಲ್ಲಿ ಅವರು ನನಗೆ ಆಸರೆಯಾಗಿದ್ದಾರೆ. ನಾವು ಇಬ್ಬರೂ ಪರಸ್ಪರ ಸಮ್ಮತಿಯಿಂದಲೇ ಈ ನಿರ್ಧಾರ ತಳೆದಿದ್ದೇವೆ.”
ರಾಮ್‍ಸುಗರ್ (75): “ಪತ್ನಿಯ ಅಗಲಿಕೆಯ ನಂತರ ನಾನು ಅನುಭವಿಸುತ್ತಿದ್ದ ಒಂಟಿತನಕ್ಕೆ ರಾಣಿ ಸಾಥ್ ನೀಡಿದ್ದಾರೆ. ನವರಾತ್ರಿ ಹಬ್ಬ ಮುಗಿದ ನಂತರ ಶುಭ ಮುಹೂರ್ತದಲ್ಲಿ ಸಾಂಪ್ರದಾಯಿಕವಾಗಿ ಮದುವೆ ನೆರವೇರಲಿದೆ.”


ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ:
ಇಬ್ಬರ ನಿಶ್ಚಿತಾರ್ಥ ಹಾಗೂ ಅರಿಶಿನ ಶಾಸ್ತ್ರದ ವಿಡಿಯೋಗಳು ಇನ್‍ಸ್ಟಾಗ್ರಾಮ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಕೆಲವರು ಇದನ್ನು ವಯಸ್ಸಿನ ಹಂಗಿಲ್ಲದ “ನಿಜವಾದ ಪ್ರೀತಿ” ಎಂದು ಬೆಂಬಲಿಸುತ್ತಿದ್ದರೆ, ಇನ್ನು ಕೆಲವರು 45 ವರ್ಷಗಳ ಬೃಹತ್ ವಯಸ್ಸಿನ ಅಂತರದ ಬಗ್ಗೆ ಆಶ್ಚರ್ಯ ಹಾಗೂ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.