
ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಮಾ.09: ಹೆಣ್ಣು ಕುಟುಂಬದ ಕಣ್ಣಾಗಿ ಕೌಟುಂಬಿಕ ವಿಚಾರಗಳನ್ನು ಕನ್ನಡಿಯಂತೆ ಪಾರದರ್ಶಕವಾಗಿ ನಿರ್ವಹಿಸುತ್ತಾಳೆ ಎಂದು ಪ್ರಿಯದರ್ಶಿನಿ ಸ್ವತಂತ್ರ ಪ.ಪೂ.ಕಾಲೇಜಿನ ಪ್ರಾಚಾರ್ಯ ಎಂ ಅಶೋಕ ಅಭಿಪ್ರಾಯಪಟ್ಟರು.
ಅವರು ಪ್ರಿಯದರ್ಶಿನಿ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂವಿಧಾನ ರಚನಾ ಸಮಿತಿಯಲ್ಲಿಯೂ ಕೂಡ 15 ಮಹಿಳೆಯರಿದ್ದರು.ಆ ಕಾರಣದಿಂದ ಭಾರತ ಸಂವಿಧಾನದಲ್ಲಿ ಮಹಿಳೆಯರ ರಕ್ಷಣೆಯ ಕುರಿತಾದ ಕಾಯಿದೆ ಕಾನೂನುಗಳಿರುವುದರಿಂದಲೇ ನಮ್ಮ ಸಂವಿಧಾನವನ್ನು ಮಾತೃ ಸಂವಿಧಾನ ಎಂದು ಕರೆಯಲಾಗಿದೆ ಎಂದು ಅಭಿಪ್ರಾಯಪಟ್ಟರು.
ಮಹಿಳೆ ಆರ್ಥಿಕ, ರಾಜಕೀಯ, ಸಾಮಾಜಿಕ ಹಾಗೂ ಇನ್ನಿತರೆ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಬೇಕಿದೆ. ಅಲ್ಲದೇ ಸಮಾಜದಲ್ಲಿ ಅವರಿಗೆ ಸಮಾನ ಸ್ಥಾನಮಾನಗಳು ದೊರೆತಾಗ ಮಾತ್ರ ಈ ರೀತಿಯ ಆಚರಣೆಗಳು ಸಾರ್ಥಕವಾಗಿಲಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಪದವಿ ಕಾಲೇಜಿನ ಪ್ರಾಚಾರ್ಯ ಪಕ್ಕೀರಪ್ಪ ಮಾತನಾಡಿ, ಸ್ತ್ರೀ ಎಂದರೆ ಸೌಂದರ್ಯದ ಗಣಿ, ಭೂಮಿ ತೂಕದ ತಾಯಿಯಾಗಿದ್ದಾಳೆ.ಎಷ್ಟೇ ಕಷ್ಟ ಬಂದರೂ ನಗುನಗುತ್ತಾ ಸ್ವೀಕರಿಸುತ್ತಾ ಮಕ್ಕಳ ಬೇಕು ಬೇಡಗಳನ್ನು ನಿಭಾಯಿಸುತ್ತಾಳೆ ಎಂದರು. ಇಂದಿನ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅರ್ಥಪೂರ್ಣವಾಗಿದೆ ಎಂದರು. ನೀವುಗಳು ಕೂಡ ಸಾಧನೆ ಮಾಡಿ ಸಮಾಜದಲ್ಲಿ ಪ್ರತಿಷ್ಟಿತ ಪ್ರಜೆಗಳಾಗಿ ಬಾಳಿ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕಿ ತಾರಾ ಪ್ರಾಸ್ತಾವಿಕವಾಗಿ ಹಾಗೂ ವೇದಿಕೆಯಲ್ಲಿದ್ದ ಅತಿಥಿಗಳಾದ ಲೋಕಮಾತೆ, ಎ. ಸೋಮಪ್ಪ, ಪರುಶುರಾಮ ಮಾತನಾಡಿದರು.
ಕಾರ್ಯಕ್ರಮದಲ್ಲಿ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಸೃಷ್ಟಿ, ಅಂಕಿತ, ಹೇಮಾವತಿ, ಗಾಯಿತ್ರಿ ಹಾಗೂ ಉಮಾ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಪ್ರಿಯದರ್ಶಿನಿ ಪದವಿ ಹಾಗೂ ಪದವಿಪೂರ್ವ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿನಿಯರಿಂದ ಮನರಂಜನಾ ಕಾರ್ಯಕ್ರಮಗಳು ಜರುಗಿದವು.

























