Home ಜಿಲ್ಲೆ ಹಂಪಿ: ಮಹಾನವಮಿ ದಿಬ್ಬದ ಬಳಿಯ ಪುರಾತನ ಕೊಳದ ಸಂರಕ್ಷಣಾ ಕಾರ್ಯ ಸಂಪೂರ್ಣ ಯಶಸ್ವಿ

ಹಂಪಿ: ಮಹಾನವಮಿ ದಿಬ್ಬದ ಬಳಿಯ ಪುರಾತನ ಕೊಳದ ಸಂರಕ್ಷಣಾ ಕಾರ್ಯ ಸಂಪೂರ್ಣ ಯಶಸ್ವಿ

ಬಿ.ಕುಮಾರ ಸ್ವಾಮಿ

ಹೊಸಪೇಟೆ.ಜು.14 ದಕ್ಷಿಣದ ಕಾಶಿ ಎಂದೇ ಖ್ಯಾತಿ ಗಳಿಸಿರುವ ವಿಜಯನಗರ ಸಾಮ್ರಾಜ್ಯದ ವೈಭವದ ಸಂಕೇತವಾಗಿರುವ ಹಂಪಿಯ ಮಹಾನವಮಿ ದಿಬ್ಬದ ಬಳಿ ಇರುವ ಪುರಾತನ ಕೊಳದ ಸಂರಕ್ಷಣಾ ಕಾರ್ಯ ಸಂಪೂರ್ಣ ಯಶಸ್ವಿಯಾಗಿದೆ.

ಹಂಪಿಯ ಪುರಾತನ ಕೊಳಗಳಲ್ಲಿ ಒಂದಾಗಿರುವ ಮಹಾನವಮಿ ದಿಬ್ಬದ ಬಳಿಯ ಪ್ರಾಚೀನ ಕೊಳದ ಮೂಲ ಸ್ವರೂಪಕ್ಕೆ ಯಾವುದೇ ಧಕ್ಕೆ ಆಗದ ರೀತಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಅತ್ಯಂತ ಸೂಕ್ಷ್ಮವಾಗಿ ಹಾಗೂ ಬಹು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವ ಮೂಲಕ ಪ್ರಾಚೀನ ಕೊಳವನ್ನು ಸಂರಕ್ಷಿಸಿ ಮೂಲ ಸ್ವರೂಪಕ್ಕೆ ತಂದು ನಿಲ್ಲಿಸಿದ್ದಾರೆ.

1.48 ಲಕ್ಷ ರೂ ವೆಚ್ಚ: ಹಂಪಿಯ ಪುರಾತನ ಸ್ವಾರಕಗಳಲ್ಲಿ ಒಂದಾಗಿರುವ ವಿಶ್ವ ಪರಂಪರೆ ತಾಣಗಳ ಪಟ್ಟಿಯಲ್ಲಿರುವ ಹಂಪಿಯ ಮಹಾನವಮಿ ದಿಬ್ಬದ ಬಳಿ ಇರುವ ಈ ಕೊಳವನ್ನು ಕೇಂದ್ರ ಪುರಾತತ್ವ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ 1.48 ಲಕ್ಷ ರೂ ಗಳ ವೆಚ್ಚದಲ್ಲಿ ಸಂರಕ್ಷಣೆ ಮಾಡುವ ಮೂಲಕ ಅತ್ಯಂತ ಸೂಕ್ಷ್ಮವಾಗಿ ಸಂರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

15 ದಿನದಲ್ಲಿ ಪೂರ್ಣ: ಸದರಿ ಪುರಾತನ ಕೊಳವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಕಮಲಾಪುರ ಉಪವಲಯದ  ಹಿರಿಯ ಸಂರಕ್ಷಣಾ ಸಹಾಯಕಿ ಮುಹಸಿನಾ ನೇತೃತ್ವದ ತಂಡ 15 ದಿನಗಳಲ್ಲಿ ಸಂರಕ್ಷಣಾ ಕಾರ್ಯವನ್ನು ಯಶಸ್ವಿಯಾಗಿ ಹೂರ್ಣಗೊಳಿಸಿದೆ.

ಪವಿತ್ರ ಸ್ನಾನಕ್ಕೆ ಬಳಕೆ: ವಿಜಯನಗರ ಕಾಲದಲ್ಲಿ ನಿರ್ಮಿಸಲಾದ ಈ ಕೊಳ 12.3 ಮೀ ಉದ್ದ ಹಾಗೂ 12.40 ಮೀ ಅಗಲವಿದ್ದು. ಅಂದಿನ ಕಾಲದಲ್ಲಿ ರಾಜ ವೈಭೋಗದ ಪ್ರತೀಕವಾಗಿದ್ದು. ದಸರಾ ಮತ್ತಿತರ ಉತ್ಸವಗಳ ಸಂದರ್ಭದಲ್ಲಿ ಪವಿತ್ರ ಸ್ನಾನಕ್ಕಾಗಿ ಈ ಕೊಳವನ್ನು ಬಳಸಲಾಗುತ್ತಿತ್ತು ಎನ್ನಲಾಗಿದೆ.

ವೈಜ್ಙಾನಿಕ ವಿಧಾನ ಬಳಕೆ: ಪುರಾತನ ಕೊಳವನ್ನು ಸಂರಕ್ಷಣೆ ಮಾಡುವ ಸಂದರ್ಭದಲ್ಲಿ ವೈಜ್ಙಾನಿಕ ವಿಧಾನಗಳನ್ನು ಬಳಸಲಾಗಿದೆ. ಕೊಳದ ಸಡಿಲಗೊಂಡ ಹಾಗೂ ಹಾಳಾದ ಸುಣ್ಣದ ಲೇಪನವನ್ನು ಎಚ್ಚರಿಕೆಯಿಂದ ತೆಗೆದುಹಾಕಿ, ಸಡಿಲಗೊಂಡ ಹಾಗೂ ಹಾನಿಗೊಳಗಾದ ಕಲ್ಲುಗಳನ್ನು ಸುಣ್ಣದ ಗಾರೆಯಿಂದ ಮರು ಜೋಡಿಸುವ ಮೂಲಕ ಶತಮಾನಗಳ ಹಿಂದೆ ನಿರ್ಮಿತವಾದ ಕೊಳದ ಸ್ಥಿರತೆಯನ್ನು ಮತ್ತೆ ಭದ್ರಪಡಿಸಲಾಗಿದೆ. ಕೇವಲ ಆಧುನಿಕ ತಂತ್ರಜ್ಙಾನ ಬಳಸದೆ, 1:2 ಅನುಪಾತದಲ್ಲಿ ಸುಣ್ಣ-ಮರಳು ಬಳಸಿ, ಗೋಡೆಗೆ ಲೇಪನ ಮಾಡಲಾಗಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಹಂಪಿ ವೃತ್ತದ ಪುರಾತತ್ವ ಅಧೀಕ್ಷಕ ಕೆ.ರಾಮಕೃಷ್ಣ ರೆಡ್ಡಿ ಸಂಜೆವಾಣಿಗೆ ತಿಳಿಸಿದ್ದಾರೆ.

ಪುರಾತನ ಕಾಲದ ಹಂಪಿಯ ಮಹಾನವಮಿ ದಿಬ್ಬದ ಬಳಿಯ ಈ ಕೊಳದ ಸಂರಕ್ಷಣಾ ಕಾರ್ಯ ಸವಾಲಿನ ಕೆಲಸವಾಗಿತ್ತು. ಅದನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಬಹಳ ನಾಜೂಕಾಗಿ, ಕೊಳದ ಮೂಲ ಸ್ವರೂಪಕ್ಕೆ ಯಾವುದೇ ಧಕ್ಕೆಯಾಗದಂತೆ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಹಂಪಿಯ ಪುರಾತನ ಕಾಲದ ಕಲೆ, ಸಾಹಿತ್ಯ ಹಾಗೂ ಸ್ಮಾರಕಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಇಲಾಖೆಯ ಈ ಕಾರ್ಯ ಅತ್ಯಂತ ಮಹತ್ವದ್ದಾಗಿದೆ ಎಂದು ಪುರಾತತ್ವ ಅಧೀಕ್ಷರಾದ ಕೆ.ರಾಮಕೃಷ್ಣ ರೆಡ್ಡಿ ತಿಳಿಸಿದ್ದಾರೆ.

ಹಂಪಿಯ ಮಹಾನವಮಿ ದಿಬ್ಬದ ಬಳಿಯ ದಿಬ್ಬದ ಬಳಿಯ ಐತಿಹಾಸಿಕ ಪುರಾತನ ಕೊಳದ ಸಂರಕ್ಷಣೆ ಕಾರ್ಯ ಅತ್ಯಂತ ಸವಾಲಿನದ್ದಾಗಿತ್ತು. ಕೊಳದ ಮೂಲ ಸ್ವರೂಪಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ಕೊಳವನ್ನು ಯಶಸ್ವಿಯಾಗಿ ಸಂರಕ್ಷಣೆ ಮಾಡಲಾಗಿದೆ.

ಕೆ.ರಾಮಕೃಷ್ಣ ರೆಡ್ಡಿ

ಪುರಾತತ್ವ ಅಧೀಕ್ಷಕರು,

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ,

ಹಂಪಿ ವೃತ್ತ.