Home ಜಿಲ್ಲೆ ಮೈಸೂರು ಸರ್ಕಾರಿ ಶಾಲೆ ಉಳಿವಿಗೆ ಪಂಜಿನ ಮೆರವಣಿಗೆ

ಸರ್ಕಾರಿ ಶಾಲೆ ಉಳಿವಿಗೆ ಪಂಜಿನ ಮೆರವಣಿಗೆ

ಸಂಜೆವಾಣಿ ವಾರ್ತೆ
ಮಂಡ್ಯ: ಜೂ.07:-
ಏಕರೂಪ ಸಮಾನ ಶಿಕ್ಷಣ ಜಾರಿ ಹಾಗೂ ಸರ್ಕಾರಿ ಶಾಲೆಗಳ ಉಳಿವಿಗೆ ಆಗ್ರಹಿಸಿ ರೈತ ಸಂಘದ ನೇತೃತ್ವದಲ್ಲಿ ಶನಿವಾರ ಬೃಹತ್ ಪಂಜಿನ ಮೆರವಣಿಗೆ ನಡೆಯಿತು. 5 ಕಿ.ಮೀ. ಪಾದಯಾತ್ರೆಯಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಪರ ಘೋಷಣೆಗಳು ಮೊಳಗಿದವು.

ತಾಲ್ಲೂಕಿನ ಇಂಡುವಾಳು ಗ್ರಾಮದಿಂದ ಸಂಜೆ 6.30ಕ್ಕೆ ಆರಂಭವಾದ ಪಂಜಿನ ಮೆರವಣಿಗೆಯು ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಾಗಿ, ರಾತ್ರಿ 8ಕ್ಕೆ ಮಂಡ್ಯ ನಗರದ ಜೆ.ಸಿ. ವೃತ್ತ ತಲುಪಿತು.ಮಾನವ ಸರಪಳಿ ರಚಿಸಿ, ಕೆಲಕಾಲ ರಸ್ತೆ ತಡೆ ನಡೆಸಿದರು. ಪಂಜುಗಳನ್ನು ರಸ್ತೆ ಮೇಲೆ ಒಟ್ಟಿಗೆ ಸುರಿದಾಗ ಕೆಲಕಾಲ ಬೆಂಕಿ ಧಗಧಗನೆ ಉರಿಯಿತು. ಸ್ಥಳದಲ್ಲೇ ಇದ್ದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಪೆÇಲೀಸರು ಪಂಜುಗಳನ್ನು ರಸ್ತೆಯಿಂದ ತೆರವುಗೊಳಿಸಿದರು.

ರೈತಸಂಘದ ಕಾರ್ಯಕರ್ತರು, ಎಸ್‍ಡಿಎಂಸಿ ಸದಸ್ಯರು, ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳು, ಕನ್ನಡ ಶಾಲೆಗಳ ಪ್ರೇಮಿಗಳು, ವಿದ್ಯಾರ್ಥಿಗಳು, ಮಕ್ಕಳ ಪೆÇೀಷಕರು ಸೇರಿದಂತೆ 500ಕ್ಕೂ ಅಧಿಕ ಮಂದಿ ಪಂಜು ಹಿಡಿದು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಸರ್ಕಾರಿ ಕನ್ನಡ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಆಗ್ರಹಿಸಿದರು.

ಮೈಸೂರು, ತುಮಕೂರು, ಹಾಸನ, ಬೆಂಗಳೂರು, ರಾಮನಗರ, ಚಾಮರಾಜನಗರ, ಕೊಡಗು, ಹುಬ್ಬಳ್ಳಿ, ಹಾಗೂ ಮಂಡ್ಯ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಕನ್ನಡ ಪ್ರೇಮಿಗಳು ‘ಏಕರೂಪ ಶಿಕ್ಷಣ ಜಾರಿಯಾಗಬೇಕು’ ಎಂದು ಘೋಷಣೆ ಮೊಳಗಿಸಿದರು.

ರೈತ ಮುಖಂಡ ಸಂತೋಷ್‍ಗೌಡ ಮಾತನಾಡಿ, ‘ಜಿಲ್ಲೆಯ ಎಸ್.ಡಿ.ಎಂ.ಸಿ ಸಂಘದ ಸಹಕಾರದೊಂದಿಗೆ ಈಗಾಗಲೇ 1295 ಕಿ.ಮೀ. ಪಾದಯಾತ್ರೆಯು ಸತತ 55 ದಿನಗಳು ನಡೆದಿದೆ. ಒಟ್ಟು 233 ಪಂಚಾಯಿತಿಗಳ ಮೂಲಕ ಒಂದು ಸಾವಿರಕ್ಕೂ ಹೆಚ್ಚು ಹಳ್ಳಿಯ ಶಾಲೆಗಳನ್ನು ತಲುಪಿದ್ದೇವೆ. ಸಮಸ್ಯೆಗಳ ಪಟ್ಟಿಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ’ ಎಂದು ಹೇಳಿದರು.

ಪೆÇಲೀಸ್ ಬಂದೋಬಸ್ತ್: ಇಂಡುವಾಳು ಗ್ರಾಮದಿಂದ ಮಂಡ್ಯ ನಗರದ ಕಡೆಗೆ ಸಾಗಿದ ಪಂಜಿನ ಮೆರವಣಿಗೆಯು ಸುಗಮವಾಗಿ ಸಾಗುವಂತೆ ಪೆÇಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದರು. ವಾಹನಗಳ ಸುಗಮ ಸಂಚಾರಕ್ಕೂ ಕ್ರಮ ಕೈಗೊಂಡರು.