
ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ 9: ಕುಟುಂಬದ ಆರೋಗ್ಯ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಯೋಗ ಅಧ್ಯಯನ ವಿಭಾಗದ ನಿರ್ದೇಶಕ ಡಾ.ಮಾಧವ ಪೆರಾಜೆ ಅಭಿಪ್ರಾಯಪಟ್ಟರು.
ಗವಿಶ್ರೀ ಅಕ್ಕನ ಬಳಗ ಹಾಗೂ ಹರಪನಹಳ್ಳಿಯ ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ವತಿಯಿಂದ ಭಾನುವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಮಲಾಪುರ ಈಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಉಚಿತ ಪ್ರಕೃತಿ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ ಎನಿಸಿರುವ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯಂಥ ಔಷಧರಹಿತ ಪದ್ಧತಿಯನ್ನು ಅಳವಡಿಸಿಕೊಂಡು ಜೀವನಶೈಲಿ ಮಾರ್ಪಾಡು ಮಾಡಿಕೊಳ್ಳುವುದು ಅಗತ್ಯ. ಯೋಗ ನಮ್ಮ ದಿನಚರಿಯಲ್ಲಿ ಸೇರಿದಾಗ ರೋಗಗಳಿಂದ ಮುಕ್ತವಾಗಬಹುದು ಎಂದು ವಿಶ್ಲೇಷಿಸಿದರು.
ಜಜನಿ ಆಸ್ಪತ್ರೆಯ ನಿರ್ದೇಶಕ ಮತ್ತು ಮುಖ್ಯ ವೈದ್ಯಾಧಿಕಾರಿ ಡಾ.ರಾಜೇಶ್ ಪಾದೇಕಲ್ಲು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ,
ರೋಗ ಬಾರದಂತೆ ತಡೆಯುವ, ಬಂದ ರೋಗವನ್ನು ಗುಣಪಡಿಸುವ ಹಾಗೂ ದೇಹವನ್ನು ಸದೃಢವಾಗಿ ಇರಿಸುವ ಚಿಕಿತ್ಸಾ ಸೌಲಭ್ಯಗಳು ಪ್ರಕೃತಿ ಚಿಕಿತ್ಸಾ ಪದ್ಧತಿಯಲ್ಲಿವೆ. ಈ ಪದ್ಧತಿಯಡಿ ಲಭ್ಯವಿರುವ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ನಿರಂತರವಾಗಿ ಇಂಥ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ವಿವರಿಸಿದರು.
ಭಾರತದ ಸನಾತನ ಋಷಿಪರಂಪರೆ ನಮಗೆ ಯೋಗ, ಪ್ರಾಣಾಯಾಮದಂಥ ಅಪೂರ್ವ ವಿದ್ಯೆಯನ್ನು ಬಳುವಳಿಯಾಗಿ ನೀಡಿದೆ. ಔಷಧ ರಹಿತವಾಗಿ, ಸನಾತನ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ನಮಗೆ ರೋಗಗಳು ಬರದಂತೆ ಹಾಗೂ ಬಂದ ರೋಗಗಳನ್ನು ಗುಣಪಡಿಸಲು ಕೂಡಾ ಪ್ರಕೃತಿ ಚಿಕಿತ್ಸೆಯಲ್ಲಿ ಅವಕಾಶವಿದೆ. ಪಾಶ್ಚಾತ್ಯ ಶೈಲಿಯ ಅಂಧಾನುಕರಣೆಯನ್ನು ತೊರೆದು ನಮ್ಮ ಸಹಜ, ಸುಂದರ ಜೀವನಶೈಲಿ ಅಳವಡಿಸಿಕೊಳ್ಳಿ ಎಂದು ಸಲಹೆ ಮಾಡಿದರು.
ಮುಖ್ಯ ಅತಿಥಿಗಳಾಗಿದ್ದ ಜನನಿ ಸಂಸ್ಥೆಯ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥ ಉದಯಶಂಕರ ಭಟ್, “ಮಹಿಳೆಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಇಡೀ ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕುಟುಂಬ ಪರಿಸರದಲ್ಲಿ ಉತ್ತಮ ಆಹಾರ-ವಿಹಾರ, ಆಚಾರ-ವಿಚಾರ, ಸಂಸ್ಕೃತಿ-ಸಂಸ್ಕಾರಗಳನ್ನು ಬೆಳೆಸುವ ಮೂಲಕ ಮನೋದೈಹಿಕ ರೋಗಗಳು ಬಾಧಿಸದಂತೆ ತಡೆಯಬಹುದು” ಎಂದು ಅಭಿಪ್ರಾಯಪಟ್ಟರು.
ಪ್ರಕೃತಿ ಚಿಕಿತ್ಸೆ ಔಷಧ ರಹಿತಾ ಚಿಕಿತ್ಸಾ ಪದ್ಧತಿಯಾಗಿದ್ದು, ನಾವು ತಿನ್ನುವ ಆಹಾರವೇ ದಿವ್ಯೌಷಧಿ. ಪಂಚಭೂತಗಳ ತತ್ವವನ್ನು ಆಧರಿಸಿದ ವಿಶ್ವದ ಏಕೈಕ ವೈದ್ಯಪದ್ಧತಿ ಯಾವುದೇ ಅಡ್ಡ ಪರಿಣಾಮಗಳಿಲ್ಲದ ಪ್ರಕೃತಿ ಸಹಜ ಪದ್ಧತಿ. ಪಾಶ್ಚಾತ್ಯ ಜೀವನಶೈಲಿಯಿಂದಾಗಿ ಇಂದು ಹಲವಾರು ರೋಗಗಳು ಬಾಧಿಸುತ್ತಿದ್ದು, ಇದನ್ನು ಸಮರ್ಥವಾಗಿ ಹಿಮ್ಮೆಟ್ಟಿಸಬೇಕಾದರೆ ಭಾರತೀಯ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದರು.
ವೈದ್ಯಾಧಿಕಾರಿ ಡಾ.ಕಮಲಮ್ಮ, ಖ್ಯಾತ ವಕೀಲೆ ಸವಿತಾ ರಮೇಶ್ ಹೊಸಪೇಟೆ, ಸೃಷ್ಟಿ ಯೋಗ ಚಾರಿಟೇಬಲ್ ಟ್ರಸ್ಟ್ನ ಮುಖ್ಯಸ್ಥೆ ಸುಮಲತಾ, ಅಕ್ಕನ ಬಳಗದ ಡಾ.ನಾಗವೇಣಿ, ಶಶಿಕಲಾ, ಕವಿತಾ ಪಟ್ಟಣ ಪಂಚಾಯ್ತಿ ಮೇಲ್ವಿಚಾರಕರಾದ ಕೆ.ಹರೀಶ್ ಕುಮಾರ್, ವೀರಶೈವ ಸಮಾಜದ ಅಧ್ಯಕ್ಷ ಅಂಗಡಿ ನಾಗರಾಜ್ ಗೌಡ ಸಮಾಜದ ಗಣ್ಯರು ಶ್ರೀನಿವಾಸ್, ಪಂಪಯ್ಯಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. 100ಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನ ಪಡೆದರು. ಪೌರಕಾರ್ಮಿಕರು ಮತ್ತು ಮಹಿಳಾ ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

























