Home ಜಿಲ್ಲೆ ಮಂಗಳೂರು ಸನಾತನ ಧರ್ಮ ರಕ್ಷಕರಿಗೆ ಬೆಂಬಲ ಅಗತ್ಯ- ಕಂಚಿ ಕಾಮಕೋಟಿ ಸ್ವಾಮೀಜಿ

ಸನಾತನ ಧರ್ಮ ರಕ್ಷಕರಿಗೆ ಬೆಂಬಲ ಅಗತ್ಯ- ಕಂಚಿ ಕಾಮಕೋಟಿ ಸ್ವಾಮೀಜಿ

ಪುತ್ತೂರು: ಸಮಷ್ಟಿ ಚಿಂತನೆಯಲ್ಲಿ ಗರ್ವ ಇದ್ದಾಗ ಮಾತ್ರ ಸಮಾಜದಲ್ಲಿ ಧರ್ಮ ರಕ್ಷಣೆ ಮಾಡಲು ಸಾಧ್ಯ. ಈ ಸನಾತನ ಧರ್ಮ ರಕ್ಷಕರಿಗೆ ಬೆಂಬಲ ನೀಡಬೇಕು. ಧರ್ಮ ರಕ್ಷಣೆ ಮೂಲಕ ಸಮಾಜ ರಕ್ಷಣೆಗೆ ಎಲ್ಲರ ಸಹಕಾರ ಅಗತ್ಯ ಎಂದು ತಮಿಳುನಾಡಿನ ಕಂಚಿಪುರದ ಕಂಚಿ ಕಾಮಕೋಟಿ ಪೀಠದ ಶಂಕರ ವಿಜಯೇಂದ್ರ ಸರಸ್ವತಿ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ಹನುಮಗಿರಿ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದಲ್ಲಿ ೩ನೇ ದಿನವಾದ ಶನಿವಾರ ಅವರು ಧರ್ಮ ಸಂದೇಶ ನೀಡಿದರು.
ನಮ್ಮಲ್ಲಿ ವ್ಯಕ್ತಿಗತವಾದ ವಿನಯತೆ ಬೇಕು. ಶಾಸ್ತ್ರೀಯ ಕುಟುಂಬಗಳಿಂದ ಬಂದವರು ಕನಿಷ್ಟ ಒಬ್ಬರಾದರೂ ವೇದಾಧ್ಯಯನ ಮಾಡಬೇಕು. ಆ ಮೂಲಕ ಸನಾತನ ಶ್ರೀಮಂತಿಕೆಯ ಪರಂಪರೆಯನ್ನು ಉಳಿಸುವ ಕೆಲಸಕ್ಕೆ ಮುಂದಾಗಬೇಕು. ಹನುಮಗಿರಿ ಕ್ಷೇತ್ರ ರಾಮ-ಹನುಮರ ಸಮ್ಮಿತಳಿತವಾದ ಶಕ್ತಿಯ ತಾಣವಾಗಿದೆ. ಈ ಕ್ಷೇತ್ರದ ಮೂಲಕ ವಿದ್ಯೆ, ವೈದ್ಯ ಹಾಗೂ ಲಘು ಉದ್ಯೋಗದ ಕ್ಷೇತ್ರಗಳಿಗೆ ಪ್ರೋತ್ಸಾಹ ನೀಡುವ ಕೆಲಸ ನಡೆಯಬೇಕು ಎಂದರು.
ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ತೀರ್ಥ ಸ್ವಾಮೀಜಿ ಅವರು ಸಂದೇಶ ನೀಡಿ, ಅತ್ಯಂತ ಶ್ರೇಷ್ಟವಾದ ವ್ಯಕ್ತಿತ್ವ ಹೊಂದಿದ್ದ ರಾಮ ಜಗತ್ತಿಗೆ ಆದರ್ಶಪ್ರಾಯ. ಶ್ರೀರಾಮನಷ್ಟು ಶ್ರೇಷ್ಟವಾದ ವ್ಯಕ್ತಿತ್ವ ಹೊಂದಿದ ಮನುಷ್ಯ ಈ ಜಗತ್ತಿನಲ್ಲಿ ಬೇರೆ ಯಾರೂ ಹುಟ್ಟಿಲ್ಲ. ಹನುಮಗಿರಿಯಲ್ಲಿ ಹನುಮ ಪಂಚಮುಖಿಯಾಗಿ ನೆಲೆ ನಿಂತಿದ್ದಾನೆ. ಇದು ನಿಜವಾದ ಪಾವನ ತಾಣ ಎಂದ ಅವರು ರಾಮ ನಾಮ ತಾರಕ ಮಂತ್ರವನ್ನು ೧೩ ಸಾವಿರ ಭಕ್ತರು ದೀಕ್ಷೆ ಮೂಲಕ ಪಠಿಸಿದ್ದಾರೆ ಎಂದರೆ ಇದೊಂದು ಇತಿಹಾಸವಾಗಿದೆ ಎಂದರು.
ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರು ಮಾತನಾಡಿ, ಹನುಮಗಿರಿ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳು ಹಿಂದೂ ಸಮಾಜದ ಕಲ್ಯಾಣಕ್ಕೆ ಪೂರಕ. ಆಚಾರ್ಯರು ಲೋಕ ಕಲ್ಯಾಣಕ್ಕಾಗಿ ಚಿಂತಿಸುತ್ತಾರೆ. ತಪಸ್ವಿಗಳ ನೈಪುಣ್ಯದಿಂದಾಗಿ ಭರತ ಭೂಮಿ ತೇಜಸ್ಸು ಪಡೆದುಕೊಂಡಿದೆ ಎಂದರು. ಧರ್ಮಶ್ರೀ ಪ್ರತಿಷ್ಠಾನದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಪ್ರಧಾನ ಕಾರ್ಯದರ್ಶಿಗಳಾದ ಆರ್.ಸಿ. ನಾರಾಯಣ ರೆಂಜ, ನಹುಷ, ಪದಾಕಾರಿಗಳಾದ ಸೀತಾರಾಮ ರೈ ಕೆದಂಬಾಡಿ ಗುತ್ತು, ಸಾಜ ರಾಧಾಕೃಷ್ಣ ಆಳ್ವ, ಶಶಿಕುಮಾರ್ ರೈ ಬಾಲ್ಯೊಟ್ಟು, ಮುರಳಿಕೃಷ್ಣ ಹಸಂತಡ್ಕ, ಚನಿಲ ತಿಮ್ಮಪ್ಪ ಶೆಟ್ಟಿ, ಜೀವಂಧರ ಜೈನ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಅಳದಂಗಡಿ ತಿಮ್ಮಣ್ಣರಸರಾದ ಪದ್ಮಪ್ರಸಾದ್ ಅಜಿಲ ಮತ್ತಿತರರು ಉಪಸ್ಥಿತರಿದ್ದರು. ಹಿರಿಯ ನ್ಯಾಯವಾದಿ ಮಹೇಶ್ ಕಜೆ ಕಾರ್ಯಕ್ರಮ ನಿರೂಪಿಸಿದರು.
ಶ್ರೀರಾಮ ತಾರಕ ಯಾಗ ಸಂಪನ್ನ
ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಹನುಮಗಿರಿ ಕೋದಂಡರಾಮ ಪಂಚಮುಖ ಆಂಜನೇಯ ಕ್ಷೇತ್ರದಲ್ಲಿ ಶನಿವಾರ ಶ್ರೀರಾಮ ತಾರಕ ಮಹಾಯಾಗ ಸಂಪನ್ನಗೊಂಡಿತು.
ಕಂಚಿ ಕಾಮಕೋಟಿ ಪೀಠದ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ, ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ತೀರ್ಥ ಸ್ವಾಮೀಜಿ ಸಮ್ಮುಖದಲ್ಲಿ ಯಾಗದ ಪೂರ್ಣಾಹುತಿ ನಡೆಯಿತು.
ಶುಕ್ರವಾರ ಯಾಗ ಮಂಟಪದಲ್ಲಿ ಅಷ್ಟೋತ್ತರ ಶತ ನಾಳಿಕೇರ ಗಣಹೋಮ ಬಳಿಕ ೧೦೦ ವೈದಿಕರಿಂದ ಜಪ ಪಠಣ ಆರಂಭಗೊಂಡಿತ್ತು. ಶನಿವಾರ ಶ್ರೀರಾಮ ತಾರಕ ಯಾಗ ನಡೆಸಲಾಯಿತು. ಪ್ರಾರ್ಥನೆ, ಪುಣ್ಯಾಹ ನಡೆದ ಮೇಲೆ ಅರಣಿ ಮಥನದ ಮೂಲಕ ಅಗ್ನಿ ಸೃಜಿಸಿ ಅದರಿಂದ ಪ್ರಧಾನ ಕುಂಡದಲ್ಲಿ ಅಗ್ನಿ ಸ್ಥಾಪನೆ ಮಾಡಲಾಯಿತು. ಬಳಿಕ ೧೧೦ ವೈದಿಕರು ಯಾಗ ನಡೆಸಿಕೊಟ್ಟರು. ೧೦ ಕುಂಡಗಳಲ್ಲಿ ಹೋಮ ನಡೆದು, ಪ್ರಧಾನ ಕುಂಡದಲ್ಲಿ ಪೂರ್ಣಾಹುತಿ ನಡೆಯಿತು. ಬೆಳಗ್ಗೆ ೭ ಗಂಟೆಗೆ ಆರಂಭಗೊಂಡ ಯಾಗ ೧೧ ಗಂಟೆಗೆ ಪೂರ್ಣಗೊಂಡಿದ್ದು, ೧೨ ಗಂಟೆಗೆ ಪೂರ್ಣಾಹುತಿ ನೀಡಲಾಯಿತು.