ರಾಜ್ಯ ಸರ್ಕಾರ ಬಂಡೆಯಂತೆ 5 ವರ್ಷ ಭದ್ರ

ಸಂಜೆವಾಣಿ ನ್ಯೂಸ್
ಮೈಸೂರು: ಜು.01:-
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಕಾಲ ಬಂಡೆ ಕಲ್ಲಿನಂತೆ ಇರುತ್ತದೆ. ನಮ್ಮಿಬ್ಬರ ನಡುವೆ ತಂದಿಡುವ ಕೆಲಸ ಮಾಡುತ್ತಿದ್ದರೂ ನಾವಿಬ್ಬರು ಜತೆಯಾಗಿ ಒಗ್ಗಟ್ಟಿನಿಂದ ಇದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆತ್ಮವಿಶ್ವಾಸದಿಂದ ಹೇಳಿದರು.


ಮೈಸೂರು ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಮತ್ತು ಡಿ.ಕೆ.ಶಿವಕುಮಾರ್ ಚೆನ್ನಾಗಿಯೇ ಇದ್ದೇವೆ, ಮುಂದೆಯೂ ಇರುತ್ತೇವೆ. ನಮ್ಮ ಸರ್ಕಾರ ಐದು ವರ್ಷಗಳ ಕಾಲ ಬಂಡೆಯಂತೆ ಇರುತ್ತದೆ. ನಮ್ಮಿಬ್ಬರ ನಡುವೆ ತಂದಿಡುವ ಪ್ರಯತ್ನ ಮಾಡಿದರೂ ಅದು ಆಗುವುದಿಲ್ಲ. ನಾವಿಬ್ಬರೂ ಜತೆಯಾಗಿಯೇ ಇದ್ದೇವೆ ಎಂದು ಪಕ್ಕದಲ್ಲಿ ನಿಂತಿದ್ದ ಡಿ.ಕೆ.ಶಿವಕುಮಾರ್ ಅವರ ಕೈ ಹಿಡಿದು ಎತ್ತಿ ಒಗ್ಗಟ್ಟು ಪ್ರದರ್ಶಿಸಿದರು.


ನಮ್ಮ ಬಗ್ಗೆ ಮಾತನಾಡುವ ಬಿ.ಶ್ರೀರಾಮುಲು ಎಷ್ಟು ಚುನಾವಣೆಯಲ್ಲಿ ಸೋತಿದ್ದಾನೆ ಹೇಳಿ. ನನ್ನ ವಿರುದ್ಧ ಒಂದು ಸಾರಿ, ಬಳ್ಳಾರಿ ಗ್ರಾಮೀಣ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಸೋತಿದ್ದಾನೆ. ಹೀಗಿರುವಾಗ ಅವರು ನಮ್ಮ ಬಗ್ಗೆ ಏನು ಮಾತನಾಡುತ್ತಾರೆ? ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ನಾನೇ ದಸರಾ ಉದ್ಘಾಟನೆ ಮಾಡುತ್ತೇನೆ ಎಂದು ಮಾಧ್ಯಮದವರಿಗೆ ಅನಿಸಿದೆ ಅಲ್ವಾ. ಅದೇ ಸತ್ಯ ಎಂದು ಹೇಳಿದರು.


ರಣದೀಪ್ ಸಿಂಗ್ ಸುರ್ಜೇವಾಲಾ ರಾಜ್ಯದ ಕಾಂಗ್ರೆಸ್ ಉಸ್ತುವಾರಿಯಾಗಿದ್ದಾರೆ. ಕಾಂಗ್ರೆಸ್ ಶಾಸಕರ ಕಷ್ಟ ಸುಖವನ್ನು ಕೇಳುತ್ತಾರೆ. ಪಕ್ಷ ಸಂಘಟನೆ ಬಗ್ಗೆ ಸಲಹೆ ಕೊಡುತ್ತಾರೆ. ಅದು ಅವರ ಕೆಲಸ. ಇದರಲ್ಲಿ ಬೇರೇನೂ ವಿಶೇಷ ಇಲ್ಲ. ಶಾಸಕರ ಸಮಸ್ಯೆಗಳಿಗೆ ಸ್ಪಂದಿಸುವುದು ಮುಖ್ಯ ಎಂದು ಹೇಳಿದರು.


ಹಾಸನ ಜಿಲ್ಲೆಯ ಹೃದಯಾಘಾತ ಪ್ರಕರಣ ಹೆಚ್ಚಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಅದರ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಹೃದಯಾಘಾತ ಹೆಚ್ಚಾಗಲು ಕಾರಣ ಏನು ಎಂಬುದಕ್ಕೆ ತಜ್ಞರ ಮೂಲಕ ಮಾಹಿತಿ ತರಿಸಿಕೊಳ್ಳುತ್ತೇನೆ. ಅದರ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.


ಮಹಾರಾಷ್ಟ್ರದಲ್ಲಿ ದ್ವಿಭಾಷಾ ಸೂತ್ರ ಶಿಕ್ಷಣಕ್ಕೆ ಒಪ್ಪಿಗೆ ನೀಡಿರುವ ಕುರಿತು ಪ್ರತಿಕ್ರಿಯಿಸಿ, ನಾವು ದ್ವಿಭಾಷಾ ಶಿಕ್ಷಣದ ಪರ ಇದ್ದೇವೆ. ಮೊದಲಿನಿಂದಲೂ ನಮ್ಮದು ದ್ವಿಭಾಷಾ ಶಿಕ್ಷಣದ ವಾದ. ಈಗಲೂ ದ್ವಿಭಾಷಾ ಪ್ರದೇಶಗಳಲ್ಲಿ ಶಿಕ್ಷಣಕ್ಕೆ ನಾವು ಬದ್ದ ಎಂದು ನುಡಿದರು.


ಸಂಕಷ್ಟ ಸೂತ್ರ ಹಂಚಿಕೆ ಅಗತ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗಿರುವ ಕಾರಣ ಕೃಷ್ಣರಾಜಸಾಗರ ಜಲಾಶಯ ತುಂಬಿದೆ. ಜೂನ್ ತಿಂಗಳಲ್ಲಿ ತಮಿಳುನಾಡಿಗೆ 9 ಟಿಎಂಸಿ ನೀರು ಬಿಡಬೇಕಿತ್ತು. ಈಗಾಗಲೇ 22 ಟಿಎಂಸಿ ನೀರು ಹರಿಸಲಾಗಿದೆ. ಕಾವೇರಿ ನ್ಯಾಯಾಧೀಕರಣದ ತೀರ್ಪಿನಂತೆ 177.25 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಲು ನಮ್ಮದು ತಕರಾರು ಇಲ್ಲ. ಆದರೆ, ಹೆಚ್ಚಾಗಿ ಕೊಡುತ್ತಿದ್ದೇವೆ. ಸಂಕಷ್ಟದ ವರ್ಷಗಳು ಬಂದಾಗ ಹಂಚಿಕೆ ಸೂತ್ರವಾಗಬೇಕು ಎಂದು ಹೇಳಿದರು.


ಕರ್ನಾಟಕಕ್ಕೆ ಹಂಚಿಕೆಯಾಗಿರುವ ನೀರನ್ನು ಬಳಸಿಕೊಳ್ಳುತ್ತಿದ್ದೇವೆ. ನಗರ ಪ್ರದೇಶ ವಿಸ್ತರಣೆಯಾಗಿ ಬೇಸಾಯದಿಂದ ವಿಮುಖವಾಗಿರುವ ಪ್ರದೇಶಗಳ ಬದಲಿಗೆ ಬೇರೆ ಬೇರೆ ಕಡೆಗಳಲ್ಲಿ ವಿಸ್ತರಿಸಲಾಗುತ್ತಿದೆ. ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ಕೊಡಬೇಕು. ತಮಿಳುನಾಡಿಗೆ ಬಿಡುವ ನೀರನ್ನು ಬಿಡುತ್ತೇವೆ. ರಾಜ್ಯದ ನೀರನ್ನು ಬಳಸಿಕೊಳ್ಳಲು ಮೇಕೆದಾಟು ಯೋಜನೆ ಮಾಡುವುದಕ್ಕೆ ಸರ್ಕಾರ ಮುಂದಾಗಿದೆ ಎಂದು ನುಡಿದರು.
ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಚೆಲುವರಾಯಸ್ವಾಮಿ ಮತ್ತಿತರರು ಹಾಜರಿದ್ದರು.