Home ಜಿಲ್ಲೆ ಬೆಂಗಳೂರು ಮೊದಲ ಸಾಲಿಗೆ ಬರಲು ಮಹಿಳೆಗೆ ಅವಕಾಶವಿಲ್ಲ: ಲೀಲಾದೇವಿ ಬೇಸರ

ಮೊದಲ ಸಾಲಿಗೆ ಬರಲು ಮಹಿಳೆಗೆ ಅವಕಾಶವಿಲ್ಲ: ಲೀಲಾದೇವಿ ಬೇಸರ

ಬೆಂಗಳೂರು:ಮೇ.5-ಹನ್ನೆರಡನೇ ಶತಮಾನದಲ್ಕೇ ಕ್ರಾಂತಿ ಯೋಗಿ ಬಸವಣ್ಣನವರು ಮಹಿಳೆಯರಿಗೆ ಮೊದಲ ಪಂಕ್ತಿಯಲ್ಲಿ ಸ್ಥಾನ ನೀಡುವ ಪ್ರಯತ್ನಕ್ಕೆ ಮುನ್ನಲೆ ಬರೆದರೂ ಸಹ ಪುರುಷ ಪ್ರಧಾನವಾದ ಭಾರತದಲ್ಲಿ ಇದೂವರೆಗೂ ಮಹಿಳೆಯನ್ನು ಮೊದಲ ಪಂಕ್ತಿಯಲ್ಲಿ ಗುರುತಿಸುವ ಕಾರ್ಯ ಆಗಲೇ ಇಲ್ಲ,ಅದಕ್ಕೆ ಅವಕಾಶವನ್ನೂ ನೀಡುವುದಿಲ್ಲ ಎಂದು ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್ ಬೇಸರ ವ್ಯಕ್ತಪಡಿಸಿದ್ದಾರೆ.


ನಗರದ ಚಿಕ್ಕಬಾಣಾವರದಲ್ಲಿ ಶ್ರೀ ವೀರಶೈವ ಲಿಂಗಾಯತ ವೇದಿಕೆ ಆಯೋಜಿಸಿದ್ದ ಶ್ರೀ ರೇಣುಕಾಚಾರ್ಯ,ಬಸವೇಶ್ವರ ಹಾಗೂ ಡಾ.ಶಿವಕುಮಾರ ಸ್ವಾಮೀಜಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.


ಶರಣೆ ಅಕ್ಕಮಹಾದೇವಿ ಅವರ ಜನ್ಮ ಸ್ಥಳ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿರುವ ಉಡುತಡಿಯನ್ನು ಪ್ರಸಿದ್ಧ ಪ್ರವಾಸಿ ತಾಣವಾಗಿ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದ್ದು ಕೇಂದ್ರ ಸರ್ಕಾರದ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಲೀಲಾದೇವಿ ಫ್ರಸಾದ್ ತಿಳಿಸಿದರು.


ಆನೇಕಲ್ ತಾಲ್ಲೂಕಿನ ವೀರಧರ್ಮ ಸಿಂಹಾಸನ ಮಠದ ಶ್ರೀ ಪಟ್ಟದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆತ್ತವರನ್ನೇ ನಿರ್ಲಕ್ಷಿಸುವುದು ಹೆಚ್ಚಾಗುತ್ತಿದ್ದು,ಮಕ್ಕಳಿಗೆ ಚಿಕ್ಕಂದಿನಿಂದಲೇ ಹಿರಿಯರ ಮೇಲೆ ಗೌರವ ಬರುವಂತಹ ಸಂಸ್ಕೃತಿ ಕಲಿಸಬೇಕು ಎಂದು ಕಿವಿ ಮಾತು ಹೇಳಿದರು.


ಶರಣ ನಿವೃತ್ತ ಮೇಜರ್ ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.ವಚನ ಸ್ಮೃತಿ ಪುಸ್ತಕ ಬಿಡುಗಡೆಗೊಳಿಸಲಾಯಿತು.
ಸ್ಥಳೀಯ ಮುಖಂಡರಾದ ದಯಾನಂದ್,ಪಿ ಹೆಚ್ ರಾಜು,ರಾಜೇಂದ್ರ,ಸಾಹಿತಿ ಪುಷ್ಪ ಬಸವರಾಜ ಬಣಕಾರ್,ಹಿರಿಯ ಪತ್ರಕರ್ತ ಎಚ್ ಆರ್ ರವೀಶ್,ಸಂಘದ ಅಧ್ಯಕ್ಷ ಎಂ ಹೆಚ್ ಪಾಟೀಲ್ ವೇದಿಕೆಯಲ್ಲಿದ್ದರು.ನೂರಾರು ಶರಣಬಂಧುಗಳು ಹಾಜರಿದ್ದರು.