Home ಜಿಲ್ಲೆ ಮಂಗಳೂರು ಜೂ.೫-೭; ಪುತ್ತೂರಿನಲ್ಲಿ ಹಲಸು ಮೇಳ

ಜೂ.೫-೭; ಪುತ್ತೂರಿನಲ್ಲಿ ಹಲಸು ಮೇಳ

ಪುತ್ತೂರು: ಪುತ್ತೂರು ನವತೇಜ ಟ್ರಸ್ಟ್ ನೇತೃತ್ವದಲ್ಲಿ ಮುಳಿಯ ಮ್ಯಾನೇಜ್ಡ್ ಫಾರ್ಮ್ ಲ್ಯಾಂಡ್ ಪ್ರಾಯೋಜಕತ್ವದಲ್ಲಿ ಹಲಸು ಮತ್ತು ಹಣ್ಣುಗಳ ಮೇಳವು ಹಣ್ಣುಗಳ ಪ್ರದರ್ಶನ, ಮೌಲ್ಯವರ್ಧಿತ ಉತ್ಪನ್ನ, ಕೃಷಿ ಪರಿಕರಗಳ ಮಳಿಗೆಗಳೊಂದಿಗೆ ಜೂ. ೫ರಿಂದ ೭ರ ವರೆಗೆ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಅನಂತಪ್ರಸಾದ್ ನೈತ್ತಡ್ಕ ತಿಳಿಸಿದರು.
ಅವರು ಪುತ್ತೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ೭ ಆವೃತ್ತಿಗಳಲ್ಲಿ ಮೇಳವು ಯಶಸ್ವಿಯಾಗಿ ನಡೆದಿದ್ದು, ಪ್ರಸ್ತುತ ೮ನೇ ಆವೃತ್ತಿಯ ಮೇಳ ನಡೆಯುತ್ತಿದೆ. ಮೇಳದಲ್ಲಿ ನರ್ಸರಿ ಗಿಡಗಳು, ಹಣ್ಣಗಳು, ಕೃಷಿ ಪ್ರಧಾನ ಪರಿಕರಗಳು, ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳು, ಹಲಸಿನ ೮೦ ಕ್ಕೂ ಅಧಿಕ ಬಗೆಯ ಆಹಾರ ಉತ್ಪನ್ನಗಳ ಮಳಿಗೆಗಳು, ಗೇರು ಹಣ್ಣಿನ ಉತ್ಪನ್ನಗಳು, ೨೫ ಕ್ಕೂ ಅಧಿಕ ಮಾವಿನ ತಳಿಗಳು, ವಿದೇಶಿ ಹಣ್ಣುಗಳ ಪ್ರದರ್ಶನವಿರುತ್ತದೆ ಎಂದರು.
ಜೂ. ೫ರಂದು ಬೆಳಗ್ಗೆ ೯.೩೦ಕ್ಕೆ ಪುತ್ತೂರಿನ ವೈದ್ಯ ಡಾ.ಕೆ.ರಮೇಶ್ ಭಟ್ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ಸಂಜೆ ೪ಕ್ಕೆ ನವತೇಜ ಟ್ರಸ್ಟ್ ಅಧ್ಯಕ್ಷ ಅನಂತಪ್ರಸಾದ್ ನೈತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ಮೇಳವನ್ನು ಕ್ಯಾಂಪ್ಕೋ ನಿರ್ದೇಶಕ ಮುರಳಿಕೃಷ್ಣ ಚಳ್ಳಂಗಾರು ಉದ್ಘಾಟಿಸಲಿದ್ದಾರೆ. ಪರಿಸರ-ಜಲ ತಜ್ಞ ಶ್ರೀಪಡ್ರೆ ದಿಕ್ಸೂಚಿ ಭಾಷಣ ಮಾಡಲಿದ್ದು, ಪುತ್ತೂರು ಗೇರು ಸಂಶೋಧನಾಲಯ ನಿರ್ದೇಶನಾಲಯದ ವಿಜ್ಞಾನಿ ಡಾ. ವೀಣಾ ಶುಭಹಾರೈಸಲಿದ್ದಾರೆ. ಈ ಸಂದರ್ಭದಲ್ಲಿ ಡಾ. ನರೇಂದ್ರ ರೈ ದೇರ್ಲ ಅವರ ‘ಹಲಸಿನಲ್ಲಿ ಹಸಿರು ಕ್ರಾಂತಿ’ ಕೃತಿ ಬಿಡುಗಡೆಗೊಳ್ಳಲಿದೆ.
ಜೂ. ೬ರಂದು ಬೆಳಗ್ಗೆ ೧೧ಕ್ಕೆ ಹಣ್ಣುಗಳೊಂದಿಗೆ ಮಾತುಕತೆ ವಿಚಾರಗೋಷ್ಠಿ ನಡೆಯಲಿದ್ದು, ಮುಳಿಯ ಕೇಶವ ಪ್ರಸಾದ್, ಕೊಕ್ಕೋ-ಕಾಫಿ ಬೆಳೆಗಾರ ಚಂದ್ರಶೇಖರ್ ತಾಳ್ತಜೆ, ಮೂಲ್ಕಿಯ ಗೇರು ಹಣ್ಣಿನ ಮೌಲ್ಯವರ್ಧಕ ಕೆನ್ಯೂಟ್ ಅರಾನ್ಹಾ ಅವರು ವಿಷಯ ಪ್ರಸ್ತುತಿ ಮಾಡಲಿದ್ದಾರೆ. ಜೂ. ೭ರಂದು ಬೆಳಗ್ಗೆ ೧೦ಕ್ಕೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಹಲಸು-ಮಾವು-ಕೃಷಿ ರಸಪ್ರಶ್ನೆ ನಡೆಯಲಿದ್ದು, ಬಳಿಕ ಹಲಸು ವೈವಿಧ್ಯ-ವಿವಿಧ ಸ್ಪರ್ಧೆಗಳು ನಡೆಯಲಿದೆ.
ಸಂಜೆ ೪ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ನವತೇಜ ಟ್ರಸ್ಟಿನ ವೇಣುಗೋಪಾಲ್ ಅವರು ಸಮಾಪನ ವರದಿ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಜೇಸಿಐ ವಲಯ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಧಾಕರ ಸುವರ್ಣ, ಪುತ್ತೂರು ಗ್ರಾಮಜನ್ಯ ರೈತೋತ್ಪಾದಕ ಸಂಸ್ಥೆಯ ನಿರ್ದೇಶಕ ನಿರಂಜನ್ ಪೋಳ್ಯ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ನವತೇಜ ಟ್ರಸ್ಟಿನ ವೇಣುಗೋಪಾಲ್, ಸುಹಾಸ ಮರಿಕೆ, ಮುಳಿಯ ಸಂಸ್ಥೆಯ ರಜತ್ ಉಪಸ್ಥಿತರಿದ್ದರು.